ಸಿದ್ದಾಪುರ, ಸೆ. 10: ಸಂತ್ರಸ್ತರ ಪರಿಹಾರ ಕೇಂದ್ರದಲ್ಲಿ ಸಂಭ್ರಮದಿಂದ ಓಣಂ ಹಾಗೂ ಮೊಹರಂ ಹಬ್ಬವನ್ನು ಆಚರಿಸಲಾಯಿತು.
ನೆಲ್ಯಹುದಿಕೇರಿಯ ಸರಕಾರಿ ಪ್ರಾಥಮಿಕ ಶಾಲೆಯ ಪರಿಹಾರ ಕೇಂದ್ರದಲ್ಲಿ ನೆಲ್ಯಹುದಿಕೇರಿಯ ಮುತ್ತಪ್ಪ ಯುವಕಲಾ ಸಂಘದ ವತಿಯಿಂದ ಪರಿಹಾರ ಕೇಂದ್ರದಲ್ಲಿದ್ದ ನಿರಾಶ್ರಿತರಿಗೆ ಸಾಮೂಹಿಕ ಓಣಂ ಹಾಗೂ ಮೊಹರಂ ಆಚರಣೆಯನ್ನು ಏರ್ಪಡಿಸಲಾಗಿತ್ತು.
ಓಣಂ ಹಬ್ಬದ ಪೂಕಳಂ (ಹೂವಿನ ರಂಗೋಲಿ)ಯನ್ನು ಪರಿಹಾರ ಕೇಂದ್ರದ ಮುಂಭಾಗ ಹಾಕಲಾಯಿತು. ಮಹಾಬಲಿ ಚಕ್ರವರ್ತಿಯ ವೇಷವನ್ನು ಮಾಲ್ದಾರೆಯ ಶಾಜಿ ಧರಿಸಿದ್ದರು. ಮಾಲ್ದಾರೆಯ ಮುತ್ತಪ್ಪ ಚೆಂಡೆ ಅವರಿಂದ ಸಿಂಗಾರಿ ಮೇಳ ಪ್ರದರ್ಶನ ನಡೆಯಿತು. ಹಬ್ಬದ ಅಂಗವಾಗಿ ಮಕ್ಕಳ ವಿವಿಧ ಸಾಂಸ್ಕøತಿಕ ಕಾರ್ಯಕ್ರಮ ಜನರ ಮನರಂಜಿಸಿತ್ತು. ನಿರಾಶ್ರಿತರಿಗೆ ವಿವಿಧ ಕ್ರೀಡಾ ಸ್ಪರ್ಧೆಗಳು ನಡೆದವು. 16 ಬಗೆಯ ಆಹಾರವನ್ನು ಸಂತ್ರಸ್ತರು ಸವಿದರು. ಸಂಜೆ ಮೊಹರಂ ಪ್ರಯುಕ್ತ ಸಾಮೂಹಿಕ ಇಫ್ತಾರ್ ಕೂಟ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಪೊನ್ನಂಪೇಟೆಯ ಶ್ರೀ ರಾಮಕೃಷ್ಣ ಶಾರದ ಆಶ್ರಮದ ಶ್ರೀ ಬೋಧಸ್ವರೂಪಾನಂದ ಸ್ವಾಮೀಜಿ, ಕೇರಳದ ಮುತ್ತಲಿ ಉಸ್ತಾದ್, ಜಿ.ಪಂ. ಸದಸ್ಯೆ ಸುನಿತಾ ಮಂಜುನಾಥ್, ತಾ.ಪಂ ಸದಸ್ಯೆ ಸುಹಾದಾ ಅಶ್ರಫ್, ಗ್ರಾ.ಪಂ ಉಪಾಧ್ಯಕ್ಷೆ ಸಫಿಯಾ, ಗ್ರಾ.ಪಂ ಸದಸ್ಯರು, ಮುತ್ತಪ್ಪ ಯುವಕಲಾ ಸಂಘದ ಪ್ರಕಾಶ್ ಸೇರಿದಂತೆ ಪದಾಧಿಕಾರಿಗಳು ಹಾಜರಿದ್ದರು.
ಚಿತ್ರ, ವರದಿ: ವಾಸು