ಕೂಡಿಗೆ, ಸೆ. 10: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬ್ಯಾಡಗೊಟ್ಟ ಗ್ರಾಮಕ್ಕೆ ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಕೆ. ಬೋಪಣ್ಣ ಮತ್ತು ತಂಡ ಭೇಟಿ ನೀಡಿ ಬ್ಯಾಡಗೊಟ್ಟ ಗ್ರಾಮದ ಸ್ಮಶಾನ ಜಾಗದ ಕುರಿತು ಮಾಹಿತಿ ಪಡೆದರು.

ಸ್ಮಶಾನ ಜಾಗವನ್ನು ರಸ್ತೆಯ ಬದಿಯಲ್ಲಿ ಗುರುತಿಸದೆ, ಬದಲಿ ಜಾಗವನ್ನು ಗುರುತಿಸಿ ಎಂದು ಮೂಲ ನಿವಾಸಿಗಳು ಮನವಿ ಮಾಡಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಜಿಲ್ಲಾ ಪಂಚಾಯಿತಿ ಸ್ಥಾನೀಯ ಸಮಿತಿಯ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಸ್ಥಳ ಪರಿಶೀಲಿಸಿದ ನಂತರ ಬೋಪಣ್ಣ ಮಾತನಾಡಿ, ಈಗಾಗಲೇ ಗ್ರಾಮಸ್ಥರ ದೂರಿನನ್ವಯ ಸ್ಥಳ ಪರಿಶೀಲನೆ ನಡೆಸಲಾಗಿದೆ. ರಸ್ತೆ ಬದಿಯಲ್ಲಿ ಸ್ಮಶಾನಕ್ಕೆ ಜಾಗ ಗುರುತಿಸುವ ಬದಲು ಆದಿವಾಸಿಗಳಿಗೆ ಗುರುತಿಸಿದ ಜಾಗದಲ್ಲಿ ಹೆಚ್ಚುವರಿ 2 ಎಕರೆ ಪ್ರದೇಶ ಇರುವದರಿಂದ ಆ ಜಾಗದ ಸರ್ವೆ ಕಾರ್ಯ ನಡೆಸಿ, ಆದಿವಾಸಿಗಳಿಗೆ ಒಂದು ಎಕರೆ ಮತ್ತು ಕೂಡಿಗೆ ಗ್ರಾ.ಪಂ.ಗೆ ಒಂದು ಎಕರೆ ಜಾಗ ಗುರುತಿಸುವಂತೆ ಸ್ಥಳದಲ್ಲಿದ್ದ ಸರ್ವೆ ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭ ಸ್ಥಾಯಿ ಸಮಿತಿಯ ಸದಸ್ಯೆ ಮಂಜುಳಾ, ಕುಮುದಾ ಧರ್ಮಪ್ಪ, ಕೂಡಿಗೆ ಗ್ರಾ.ಪಂ. ಅಧ್ಯಕ್ಷೆ ಪ್ರೇಮಲೀಲಾ, ಉಪಾಧ್ಯಕ್ಷ ಗಿರೀಶ್ ಕುಮಾರ್, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಭಾರತಿ, ಐಟಿಡಿಪಿ ಅಧಿಕಾರಿ ಶಿವಕುಮಾರ್, ನಿರ್ಮಿತಿ ಕೇಂದ್ರ ಇಂಜಿನಿಯರ್ ಕರಿಯಪ್ಪ ಇತರರಿದ್ದರು.