*ಗೋಣಿಕೊಪ್ಪಲು, ಸೆ. 10: ಹುದಿಕೇರಿ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘ 2018-19 ಸಾಲಿನಲ್ಲಿ ಹತ್ತೊಂಬತ್ತು ಲಕ್ಷದ ತೊಂಬತ್ತಮೂರು ಸಾವಿರ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಅಜ್ಜಿಕುಟ್ಟೀರ ಪ್ರವೀಣ್ ಮುತ್ತಪ್ಪ ಮಾಹಿತಿ ನೀಡಿದ್ದಾರೆ.

ಹುದಿಕೇರಿ ಕೃಷಿಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಲೆಕ್ಕ ಪರಿಶೋಧನಾ ವರದಿ ಮಂಡಿಸಿ ಈ ವಿಚಾರ ತಿಳಿಸಿದರು.

ಸಂಘದ ಸದಸ್ಯರ ಬ್ಯಾಂಕ್ ವಹಿವಾಟಿನಿಂದ ಈ ಲಾಭಗಳಿಸಲು ಸಾಧ್ಯವಾಗಿದೆ. ಸಂಘದಲ್ಲಿ ಸದಸ್ಯರು ಮತ್ತಷ್ಟು ವ್ಯವಹಾರ ನಡೆಸಿದಲ್ಲಿ ಬ್ಯಾಂಕ್ ಅಧಿಕ ಲಾಭ ಗಳಿಸಲು ಸಾದ್ಯವಿದೆ. ಈ ಮೂಲಕ ಸದಸ್ಯರು ಬ್ಯಾಂಕನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಸಾಧ್ಯವಿದೆ. 2019-20ನೇ ಸಾಲಿನ ಕಾರ್ಯಸೂಚಿಯಂತೆ ರೂ. 17 ಕೋಟಿ 64 ಲಕ್ಷ ಸಾಲ ವಿತರಿಸಲು ಗುರಿ ನಿಗದಿಪಡಿಸಲಾಗಿದೆ. ಕೃಷಿ ಕ್ಷೇತ್ರಕ್ಕೆ 7 ಕೋಟಿ 92 ಲಕ್ಷ, ಕೃಷಿಯೇತರ ಸಾಲಕ್ಕೆ ರೂ. 9 ಕೋಟಿ 72 ಲಕ್ಷ ವಿತರಿಸಲು ಚಿಂತನೆ ನಡೆಸಲಾಗಿದೆ. ಅಲ್ಲದೇ ರೂ. 14 ಕೋಟಿ 76 ಲಕ್ಷ ಠೇವಣಿ ಸಂಗ್ರಹಿಸಲು ಕಾರ್ಯಯೋಜನೆ ರೂಪಿಸಿದ್ದು, ರೂ. 5 ಕೋಟಿ ಹೂಡಿಕೆ ಮಾಡಿ ಪ್ರಗತಿ ಸಾಧಿಸುವ ನಿರೀಕ್ಷೆ ಇದೆ. ಜೊತೆಗೆ ಕೆ.ಸಿ.ಸಿ. ಫಸಲು ಸಾಲ ಪಡೆಯುವ ರೈತರಿಗೆ ಗೊಬ್ಬರ ಸಾಲವನ್ನು ನೀಡಲಾಗುವದು ಎಂದು ಕಾರ್ಯ ಯೋಜನೆಗಳ ಬಗ್ಗೆ ಮಾಹಿತಿ ಹಂಚಿಕೊಂಡರು.

‘ಡಿವಿಡೆಂಟ್ ಫಂಡ್’ ಶೇ. 6 ರಷ್ಟನ್ನು ಸದಸ್ಯರಿಗೆ ನೀಡಲಾಗುವದು ಎಂದರು. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವತಿಯಿಂದ ರೂ. 17 ಲಕ್ಷ ವೆಚ್ಚದಲ್ಲಿ ಗೋದಾಮು ನಿರ್ಮಾಣ ಕಾರ್ಯ ನಡೆಯುತ್ತಿದೆ. ಸಂಘದ ಅಧೀನದಲ್ಲಿರುವ ಸ್ಥಳದಲ್ಲಿ ರೈತರ ಅನುಕೂಲಕ್ಕಾಗಿ ಮತ್ತೊಂದು ಕಟ್ಟಡವನ್ನು ನಿರ್ಮಿಸಲು ಯೋಜನೆ ಹಾಕಿಕೊಂಡಿರುವದಾಗಿ ತಿಳಿಸಿದರು.

ಸಭೆಯಲ್ಲಿ ಮರಣ ನಿಧಿಯನ್ನು ಈಗಿರುವ 5 ಸಾವಿರ ಹಣ ಪಡೆದು 25 ಸಾವಿರ ರೂಪಾಯಿ ನೀಡುವ ಯೋಜನೆಯನ್ನು ವಿಸ್ತರಿಸಿ ಮುಂದೆ 10 ಸಾವಿರ ರೂಪಾಯಿ ಪಡೆದು ರೂ. 50 ಸಾವಿರ ಹಣ ನೀಡುವ ಕಾರ್ಯಕ್ಕೆ ಕ್ರಮ ಕೈಗೊಳ್ಳಬೇಕೆಂದು ಸದಸ್ಯರುಗಳು ಒತ್ತಾಯಿಸಿದರು.

ಸಭೆಯಲ್ಲಿ 10ನೇ ತರಗತಿಯಲ್ಲಿ ಹೆಚ್ಚು ಅಂಕ ಪಡೆದ ಸಂಘದ ಸದಸ್ಯರುಗಳಾದ ಬಿ.ಎಂ. ಕರುಂಬಯ್ಯ ಅವರ ಪುತ್ರಿ ಬೊಜ್ಜಂಗಡ ಕೆ. ದಿಯಾ ದೇಚಮ್ಮ ಅವರಿಗೆ ಪ್ರಥಮ ಬಹುಮಾನ, ಪಂದಿಮಾಡ ಗಿರೀಶ್ ಅವರ ಪುತ್ರಿ ಪಿ.ಜಿ. ಅನುಷ ದ್ವಿತೀಯ ಬಹುಮಾನ ಮತ್ತು ತೃತೀಯ ಬಹುಮಾನವನ್ನು ಮುಕ್ಕಾಟೀರ ಎಂ. ಭಾರತಿಯವರ ಪುತ್ರಿ ಎಂ.ಎಂ. ತಸ್ಮಾ ದೇಚಮ್ಮ ಇವರುಗಳಿಗೆ ಪೆÇ್ರೀತ್ಸಾಹಕರ ಬಹುಮಾನ ನೀಡಲಾಯಿತು. ಇದೇ ಸಂದರ್ಭ ಪ್ರಕೃತಿ ವಿಕೋಪದಲ್ಲಿ ತತ್ತರಿಸಿದ ಸಂಘದ ಸದಸ್ಯರುಗಳಾದ ಕೋಳೆರ ಉಪೇಂದ್ರ, ಚಂಗುಲಂಡ ನಂಜಪ್ಪ ಮತ್ತು ಚಂಗಪ್ಪ ಇವರುಗಳಿಗೆ ಸಹಾಯಧನವನ್ನು ನೀಡಲಾಯಿತು.

ಸಂಘದ ಉಪಾಧ್ಯಕ್ಷ ಕೆ.ಎಸ್. ನರೇಂದ್ರ, ನಿರ್ದೇಶಕರುಗಳಾದ ಕೆ.ಎಂ. ಸುರೇಂದ್ರ, ಬಿ.ಎಸ್. ತೃಶಾನ್ ಮಾದಯ್ಯ, ಸಿ.ಡಿ. ತಿಮ್ಮಯ್ಯ, ಬಿ.ಎ. ದೇವಯ್ಯ, ಎಂ.ಎಂ. ರಮೇಶ್, ಡಿ.ಎಸ್. ಮಾದಯ್ಯ, ಎಂ.ಪಿ. ಮಾಚಮ್ಮ, ಕೆ.ಡಿ. ಸೀತಮ್ಮ, ಹೆಚ್.ಎಂ. ಕೃಷ್ಣ, ಎಂ.ಎಂ. ಸವಿನಾ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಂ. ತಮ್ಮಯ್ಯ, ಮೇಲ್ವಿಚಾರಕ ಅಯ್ಯಪ್ಪ ಸೇರಿದಂತೆ ಸರ್ವ ಸದಸ್ಯರು ಹಾಜರಿದ್ದರು.