ಪೊನ್ನಂಪೇಟೆ, ಸೆ. 10: ಶ್ರೀಮಂಗಲ ಗೌರಿ ಗಣೇಶ ಉತ್ಸವದಲ್ಲಿ ಗೋಣಿಕೊಪ್ಪಲಿನ ಕಾವೇರಿ ಕಲಾ ಸಿರಿ ತಂಡ ನಡೆಸಿಕೊಟ್ಟ ರಸಮಂಜರಿ ಕಾರ್ಯಕ್ರಮ ಕಿಕ್ಕಿರಿದು ನೆರಿದಿದ್ದ ಪ್ರೇಕ್ಷಕರಿಗೆ ರಸದೌತಣ ನೀಡಿತು.

ಗಾಯಕ ತಿರುಮಲೇಶ್ ರವರ ಇಂಪಾದ ಧ್ವನಿಯಲ್ಲಿ ಮೂಡಿ ಬಂದ ನಾವಾಡುವ ನುಡಿಯೇ ಕನ್ನಡ ನುಡಿ, ಜನ್ಮ ನೀಡುತ್ತಾಳೆ ನಮ್ಮ ತಾಯಿ, ಅನಿಸುತಿದೆ ಯಾಕೋ ಇಂದು ಹಾಡುಗಳಿಗೆ, ಪ್ರೇಕ್ಷಕರು ತಲೆದೂಗಿದರೆ, ಅಕ್ಷಯ್ ಅವರ ಒಳಿತು ಮಾಡು ಮನುಷ ನೀ ಇರೋದು ಮೂರು ದಿವಸ, ಹಾಗೂ ಹಾಲು ಕುಡಿದ ಮಕ್ಳೆ ಬದುಕಲ್ಲ ಎಂಬ ಹಾಡು, ಜಿತನ್ ಹಾಡಿದ ಕೊಡವ ರೀ ಮಿಕ್ಸ್, ಕಾಣದಂತೆ ಮಾಯವಾದನು ನಮ್ಮ ಶಿವ, ಯಾರೇ ನೀನು ರೋಜಾ ಹೂವೆ, ಸಿದ್ದು ಧ್ವನಿಯಲ್ಲಿ ಮೂಡಿಬಂದ ತಮಿಳು ಹಾಡುಗಳು, ಉದಯೋನ್ಮುಖ ಗಾಯಕಿ ಹೇಮ ಹಾಡಿದ ಅಪ್ಪ ಐ ಲವ್ ಯೂ ಪಾ ಹಾಗೂ ಒಳಗೆ ಸೇರಿದರೆ ಗುಂಡು ಹಾಡುಗಳು ಪ್ರೇಕ್ಷಕರ ಮನಗೆದ್ದವು.

ಕಾವೇರಿ ಕಲಾ ಸಿರಿ ತಂಡದ ಯುವತಿಯರು ಕುಂದುಲುಂಡು ಕ್ಯಾಮ, ಚೆರಿಯಮನೆಲಿಪ್ಪುಳಿಯಾ ಮುಂತಾದ ಕೊಡವ ಹಾಡುಗಳಿಗೆ ನೃತ್ಯ ಮಾಡಿ ರಂಜಿಸಿದರು, ಡಿಡಿಸಿ ನ್ರತ್ಯ ತಂಡ ಪ್ರದರ್ಶಿಸಿದ ನೃತ್ಯ ಮನಗೆದ್ದವು, ಲಾರೆನ್ಸ್ ಹಾಡಿದ ನಂಗ ಜೇನು ಕುರುಬ ಮಕ್ಕಾಳು ದೂರಿ ದೂರಿ ಹಾಡಿಗೆ ಪ್ರೇಕ್ಷಕರು ಧ್ವನಿ ಗೂಡಿಸುವ ಮೂಲಕ ಕುಣಿದು ಕುಪ್ಪಳಿಸಿದರು. ಕಲಾವಿದ ಚನ್ನನಾಯಕ ಹಾಸ್ಯ ಹಾಗೂ ಮಿಮಿಕ್ರಿ ಚೊತೆಗೆ ವಿಭಿನ್ನ ನಿರೂಪಣೆ ಮಾಡಿ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದರು. ತಂಡದ ವ್ಯವಸ್ಥಾಪಕ ವನಿತ್ ಕುಮಾರ್ ನಿರೂಪಣೆಯಲ್ಲಿ ಸಾತ್ ನೀಡಿದರು.