ಮಡಿಕೇರಿ, ಸೆ. 10: ಮಹಾ ಮಳೆಯಿಂದ ಮನೆ ಕಳೆದುಕೊಂಡ ಸಂತ್ರಸ್ತರಿಗೆ ದಾಖಲೆಗಳನ್ನೇ ಆಧಾರವಾಗಿಸದೆ ಮಾನವೀಯ ನೆಲೆಯಡಿ ಪರಿಹಾರ ವಿತರಿಸುವಂತೆ ಜಾತ್ಯತೀತ ಜನತಾದಳದ ಜಿಲ್ಲಾಧ್ಯಕ್ಷ ಕೆ.ಎಂ. ಗಣೇಶ್ ಸರಕಾರವನ್ನು ಒತ್ತಾಯಿಸಿದ್ದಾರೆ.
ಜಿಲ್ಲಾ ಜೆಡಿಎಸ್ ವತಿಯಿಂದ ಕಾಂಡನಕೊಲ್ಲಿಯ ನಿರಾಶ್ರಿತ ಕುಟುಂಬಕ್ಕೆ ಆರ್ಥಿಕ ನೆರವು ನೀಡುವ ಸಂದರ್ಭ ಅವರು ಮಾತನಾಡಿದರು. ಕಾಂಡನಕೊಲ್ಲಿಯ ಬಾವುಕ ಮತ್ತು ಬೀಪಾತು ಎಂಬವರು ಅಣ್ಣ ತಂಗಿಯರಾಗಿದ್ದು, ಕಳೆದ 45 ವರ್ಷಗಳಿಂದ ವಾಸವಿದ್ದ ಮನೆಯನ್ನು ಮಹಾ ಮಳೆಯಿಂದ ಕಳೆದುಕೊಂಡಿದ್ದಾರೆ. ಇವರ ಮನೆಗೆ ಹಕ್ಕುಪತ್ರ ದೊರೆಯದೆ ಇದ್ದ ಕಾರಣವನ್ನೇ ನೆಪ ಮಾಡಿಕೊಂಡು ಮನೆ ಕಳೆದುಕೊಂಡವರಿಗೆ ನೀಡಲಾಗುವ ಪರಿಹಾರದ ಮೊತ್ತವನ್ನು ನೀಡದೆ ವಂಚಿಸಲಾಗಿದೆ ಎಂದು ಗಣೇಶ್ ದೂರಿದರು.
ಇದೇ ರೀತಿಯ ಅನೇಕ ಪ್ರಕರಣಗಳು ಜಿಲ್ಲೆಯಲ್ಲಿದ್ದು, ಸಂತ್ರಸ್ತರು ಪರಿಹಾರದಿಂದ ವಂಚಿತರಾಗದಂತೆ ಸರಕಾರ ಸೂಕ್ತ ನಿರ್ದೇಶನ ನೀಡಿ ಪರಿಹಾರದ ಮೊತ್ತವನ್ನು ಸಮಾನವಾಗಿ ಹಂಚಿಕೆ ಮಾಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭ ಪಕ್ಷದ ಪ್ರಮುಖರಾದ ಸುನೀಲ್, ಡೆನ್ನಿ ಬರೋಸ್, ಷರೀಫ್, ಅಬ್ದುಲ್ಲ, ಯೂಸುಫ್. ಹನೀಫ್ ಮತ್ತಿತರರು ಹಾಜರಿದ್ದರು.