ಶ್ರೀಮಂಗಲ, ಸೆ. 10: ಪೆÇನ್ನಂಪೇಟೆಯ ಕಾಟ್ರಕೊಲ್ಲಿಯಲ್ಲಿ ಗಜಮುಖ ಗೆಳೆಯರ ಬಳಗ ಆಶ್ರಯದಲ್ಲಿ ಗಣೇಶ ಗೌರಿ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಿದ್ದ ಕಟ್ಟಡ ಒಂದು ಭಾಗದ ಗೋಡೆ ಕುಸಿತವಾದ ಹಿನ್ನೆಲೆಯಲ್ಲಿ ಗೌರಿ ಗಣೇಶ ಮೂರ್ತಿಗಳು ಭಗ್ನವಾಗಿದ್ದು, ಇದನ್ನು ನಿಗದಿತ ಅವಧಿಗೆ ಮುಂಚಿತವಾಗಿ ವಿಸರ್ಜಿಸಲಾಯಿತು.
ಸೋಮವಾರ ರಾತ್ರಿ 9 ಗಂಟೆಗೆ ಮೂರ್ತಿಗಳ ಮೇಲೆ ಗೋಡೆ ಕುಸಿದು ಬಿದ್ದ ಪರಿಣಾಮ ಪ್ರತಿಷ್ಠಾಪನೆ ಮಾಡಿದ್ದ ಮೂರ್ತಿಗಳಿಗೆ ಹಾನಿಯಾಗಿದೆ. ಮಣ್ಣಿನ ಮೂರ್ತಿಗಳು ಹುಡಿಯಾಗಿದ್ದು, ಅಲಂಕೃತ ಮಂಟಪ ಸಹ ಹಾನಿಯಾಗಿದೆ. ಸೋಮವಾರ ಸಂಜೆ 7:30 ಕ್ಕೆ ಪೂಜೆ ಮುಗಿದು ಅಲ್ಲಿಂದ ಸಮಿತಿಯವರು ತೆರಳಿದ್ದರು. ಗೋಡೆ ಕುಸಿದ ಸಂದರ್ಭ ಆ ಸ್ಥಳದಲ್ಲಿ ಯಾರೂ ಇಲ್ಲದ ಪರಿಣಾಮ ಜನರಿಗೆ ತೊಂದರೆಯಾಗಿಲ್ಲ.
ಮೂರ್ತಿ ವಿಸರ್ಜನೆಯನ್ನು ತಾ. 11ರಂದು ನಡೆಸಲು ನಿಗದಿಯಾಗಿತ್ತು. ಆದರೆ ಗೋಡೆ ಕುಸಿತದಿಂದ ಮೂರ್ತಿಗಳು ಹುಡಿಯಾಗಿರುವ ಹಿನ್ನೆಲೆಯಲ್ಲಿ ಮಂಗಳವಾರ ಬೆಳಿಗ್ಗೆ ನಿಯಮದಂತೆ ಪೂಜೆ ಸಲ್ಲಿಸಿ ಮೂರ್ತಿಗಳ ಅಳಿದುಳಿದ ಭಾಗವನ್ನು ಬಾಳಾಜಿ ಗ್ರಾಮದ ಕೀರೆ ಹೊಳೆ ನದಿಯಲ್ಲಿ ಸಮಿತಿಯವರು ವಿಸರ್ಜಿಸಿದರು.