ಶ್ರೀಮಂಗಲ, ಸೆ. 11: ಶ್ರೀಮಂಗಲ ಗ್ರಾ.ಪಂ. ವ್ಯಾಪ್ತಿಯ ಕುರ್ಚಿ ಗ್ರಾಮದಲ್ಲಿ ಕಾಡಾನೆಗಳು ಕಾಫಿ ತೋಟದಲ್ಲಿ ಸೇರಿಕೊಂಡು ಅಪಾರ ಪ್ರಮಾಣದಲ್ಲಿ ನಷ್ಟ ಉಂಟು ಮಾಡಿವೆ.

ಗ್ರಾಮದ ಎ.ಬಿ. ನಾಚಪ್ಪ ಮತ್ತು ಎ.ಟಿ. ಬೊಳ್ಳಮ್ಮ ಅವರ ತೋಟದಲ್ಲಿ ಬೀಡು ಬಿಟ್ಟಿರುವ ಕಾಡಾನೆ ಹಿಂಡುಗಳು ಫಸಲು ಇರುವ ಕಾಫಿ ಗಿಡಗಳನ್ನು ಬುಡ ಸಮೇತ ತುಳಿದು ನಾಶ ಮಾಡಿವೆ. ಕಾಫಿ ಗಿಡಗಳನ್ನು ಬಹುತೇಕ ಮುರಿದು ಫಸಲು ಇರುವ ಕೊಂಬೆಗಳನ್ನು ನಷ್ಟ ಮಾಡಿದೆ. ಇದರೊಂದಿಗೆ ಅಡಿಕೆ, ಕಾಳು ಮೆಣಸು ಫಸಲನ್ನು ಸಹ ನಾಶಮಾಡಿದ್ದು ಬೆಳೆಗಾರರು ತೀವ್ರ ನಷ್ಟ ಅನುಭವಿಸುವಂತೆ ಮಾಡಿದೆ.

ಬ್ರಹ್ಮಗಿರಿ ಅರಣ್ಯದಿಂದ ಗ್ರಾಮಕ್ಕೆ ನುಗ್ಗಿರುವ ಕಾಡಾನೆ ಹಿಂಡುಗಳು ತೋಟದಲ್ಲಿಯೆ ಬೀಡುಬಿಟ್ಟಿವೆ. ಹೆಚ್ಚಿನ ಮಳೆ ಇರುವದರಿಂದ ಮತ್ತು ಅರಣ್ಯದಲ್ಲಿ ಮರಗಳು ಹೆಚ್ಚಿರುವದರಿಂದ ಗಾಳಿಗೆ ಮುರಿದು ಬೀಳುವ ಅಪಾಯದಿಂದ ಕಾಡಾನೆ ಹಿಂಡುಗಳು ಹೆಚ್ಚಿನ ಪ್ರಮಾಣದಲ್ಲಿ ಗ್ರಾಮಕ್ಕೆ ನುಗ್ಗಿ ಗ್ರಾಮದ ಮೈದಾನ ಪ್ರದೇಶ ಮತ್ತು ಕಾಫಿ ತೋಟದಲ್ಲಿ ಕಡಿಮೆ ಮರ ಇರುವ ಜಾಗದಲ್ಲಿ ಸೇರಿಕೊಳ್ಳುತ್ತಿವೆ.

ಈಗಾಗಲೇ ಅತಿವೃಷ್ಟಿಯಿಂದ ಭಾರೀ ನಷ್ಟ ಉಂಟಾಗಿರುವ ಬೆನ್ನಲ್ಲೆ ಅಳಿದುಳಿದ ಬೆಳೆಯನ್ನು ಕಾಡಾನೆಗಳು ನುಗ್ಗಿ ನಾಶಪಡಿಸುತ್ತಿದ್ದು, ಇದರಿಂದ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಬೆಳೆಗಾರ ಎ.ಬಿ. ನಾಚಪ್ಪ ತೀವ್ರ ಬೇಸರ ವ್ಯಕ್ತಪಡಿಸಿದರು.ಸ್ಥಳಕ್ಕೆ ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳು ಭೇಟಿ ನೀಡಿ ಸೂಕ್ತ ಬೆಳೆ ನಷ್ಟ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.