ಶ್ರೀಮಂಗಲ, ಸೆ. 11: ಪಶ್ಚಿಮ ಘಟ್ಟದ ಬ್ರಹ್ಮಗಿರಿ ತಪ್ಪಲಿನಲ್ಲಿರುವ ಬಿರುನಾಣಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಕಳೆದ ಎರಡು ವರ್ಷದಿಂದ ಮಹಾಮಳೆಗೆ ತುತ್ತಾದ ಪರಿಣಾಮ ಹೆಚ್ಚಿನ ಬೆಳೆ ಹಾನಿ ಉಂಟಾಗಿದೆ. ಈ ವರ್ಷ ಬೆಳೆಯೊಂದಿಗೆ ಹೆಚ್ಚಿನ ಪ್ರಮಾಣದಲ್ಲಿ ಭೂಕುಸಿತದಿಂದ ಹಾನಿಯಾಗಿದೆ. ಆದ್ದರಿಂದ ಕಡಿಮೆ ಮಳೆಯಾಗಿರುವ ಜಿಲ್ಲೆಯ ಇತರ ಪ್ರದೇಶಗಳಿಗೆ ನೀಡುವಂತೆ ಬಿರುನಾಣಿ ವ್ಯಾಪ್ತಿಯನ್ನು ಪರಿಗಣಿಸದೆ ಹೆಚ್ಚಿನ ಅನುದಾನ ಹಾಗೂ ಪರಿಹಾರವನ್ನು ಸರ್ಕಾರ ನೀಡಬೇಕೆಂದು ಬಿರುನಾಣಿ ಗ್ರಾ.ಪಂ. ಅಧ್ಯಕ್ಷ ಬಿ.ಕೆ. ನಾಣಯ್ಯ ಒತ್ತಾಯಿಸಿದ್ದಾರೆ.
ಅವರು ಗ್ರಾ.ಪಂ. ಕಚೇರಿಯಲ್ಲಿ ಸಾರ್ವಜನಿಕರ ಕುಂದು ಕೊರತೆ ಸಮಸ್ಯೆ ಆಲಿಸಿ ಮಾತನಾಡಿದರು. ಅತೀ ಹೆಚ್ಚಿನ ಮಳೆ ಹಾಗೂ ಭೂ ಕುಸಿತದಿಂದ ಈ ವ್ಯಾಪ್ತಿಯಲ್ಲಿ ಬೆಳೆಗಳು ಹೆಚ್ಚಿನ ಪ್ರಮಾಣದಲ್ಲಿ ನಾಶವಾಗಿದೆ. ಗ್ರಾಮೀಣ ರಸ್ತೆಗಳು ಸಂಪೂರ್ಣ ಹಾಳಾಗಿವೆ. ಆದರೆ ಜಿಲ್ಲಾಡಳಿತ ಬಿರುನಾಣಿ ಗ್ರಾ.ಪಂ. ಗೆ ಅತಿವೃಷ್ಟಿ ನಿರ್ವಹಣೆಗಾಗಿ ರೂ. 50 ಸಾವಿರ ಅನುದಾನವನ್ನು ನೀಡಿದ್ದು ಇದನ್ನು ಕನಿಷ್ಟ ರೂ.10 ಲಕ್ಷವಾದರೂ ನೀಡಬೇಕು. ಗ್ರಾಮೀಣ ರಸ್ತೆಯಲ್ಲಿ ಜಲ ಎದ್ದು ಮತ್ತು ಭೂ ಕುಸಿತದಿಂದ ಹಾನಿಯಾಗಿದ್ದು ವಾಹನ ಸಂಚಾರಕ್ಕೆ ಸಾಧ್ಯವಾಗದ ಪರಿಸ್ಥಿತಿ ಇದೆ. ಕೆಸರುಮಯವಾಗಿರುವ ರಸ್ತೆಗಳಿಗೆ ಜಲ್ಲಿ ಕಲ್ಲು ಹಾಕಿ ತಾತ್ಕಾಲಿಕವಾಗಿ, ತುರ್ತಾಗಿ ದುರಸ್ತಿ ಪಡಿಸಲು ಸಾಕಷ್ಟು ಅನುದಾನದ ಅಗತ್ಯವಿದೆ ಹೀಗಿರುವಾಗ ಕೇವಲ ರೂ. 50 ಸಾವಿರ ಅನುದಾನದಿಂದ ಜನರ ತುರ್ತು ಸಮಸ್ಯೆಗಳಿಗೆ ಸ್ಪಂದಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಗ್ರಾ.ಪಂ. ಸದಸ್ಯ ಕಾಯಪಂಡ ಸುನೀಲ್ ಅವರು ಮಾತನಾಡಿ 14 ನೇ ಹಣಕಾಸು ಯೋಜನೆಯಡಿ ರಸ್ತೆ ಅಭಿವೃದ್ಧಿಗೆ ಶೇ. 10 ಮತ್ತು ಕುಡಿಯುವ ನೀರಿಗೆ ಶೇ. 20 ಅನುದಾನ ನೀಡಲಾಗಿದೆ. ಆದರೆ ಗ್ರಾಮೀಣ ಭಾಗದಲ್ಲಿ ಮುಖ್ಯವಾಗಿ ರಸ್ತೆ ಹಾಗೂ ಕುಡಿಯುವ ನೀರಿಗೆ ಹೆಚ್ಚಿನ ಅನುದಾನ ನೀಡಿದರೆ ಜನರ ಬಹಳಷ್ಟು ಮೂಲಭೂತ ಬೇಡಿಕೆಗಳನ್ನು ಈಡೇರಿಸಬಹುದಾಗಿದೆ. ಬಿರುನಾಣಿ ಗ್ರಾ.ಪಂ.ವ್ಯಾಪ್ತಿಗೆ 170 ರಿಂದ 250 ಇಂಚು ಮಳೆಯಾಗಿದೆ. ಈ ಮಳೆಗೆ ಗ್ರಾಮೀಣ ರಸ್ತೆಗಳು ಬಹುತೇಕ ಹಾಳಾಗಿದೆ. ಕಡಿಮೆ ಮಳೆಯಾಗುವ ಪ್ರದೇಶದೊಂದಿಗೆ ಈ ಪ್ರದೇಶವನ್ನು ಹೋಲಿಸದೆ ಈ ಪ್ರದೇಶದ ಅಭಿವೃದ್ದಿ ಹಾಗೂ ಬೆಳೆಗಾರರಿಗೆ ನೀಡುವ ಪರಿಹಾರದಲ್ಲಿಯೂ ವಿಶೇಷವಾದ ನೆರವು ಮತ್ತು ಅನುದಾನ ನೀಡಬೇಕಾಗಿದೆ ಎಂದು ಹೇಳಿದರು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಬಲ್ಯಮೀದೇರಿರ ಸುರೇಶ್ ಅವರು ಮಾತನಾಡಿ ಸರ್ಕಾರದ ನೂತನ ಆರೋಗ್ಯ ಯೋಜನೆ ಆಯುಷ್ಮಾನ್ ಭಾರತ ಯೋಜನೆಯಿಂದ ಬಿ.ಪಿ.ಎಲ್. ಕಾರ್ಡ್ ಸದಸ್ಯರಿಗೆ ಶೇ. 100 ಮತ್ತು ಎ.ಪಿ.ಎಲ್. ಸದಸ್ಯರಿಗೆ ಶೇ. 30 ವೆಚ್ಚವನ್ನು ಸರ್ಕಾರ ಭರಿಸುತ್ತದೆ ಆದರೆ ಇದು ನಿಯಮಿತ ಕಾಯಿಲೆಗಳಿಗೆ ಮತ್ತು ಆಪರೇಷನ್‍ಗಳಿಗೆ ಮಾತ್ರವಿದ್ದು ಇದರಿಂದ ಜನರಿಗೆ ಹೆಚ್ಚಿನ ಪ್ರಯೋಜನವಾಗುವದಿಲ್ಲ. ಆದ್ದರಿಂದ ಈ ಹಿಂದಿನ ಸರ್ಕಾರದ ಯಶಸ್ವಿನಿ ಆರೋಗ್ಯ ವಿಮೆ ಜಾರಿಗೆ ತರುವದರಿಂದ ಹೆಚ್ಚಿನ ಪ್ರಯೋಜನವಾಗಲಿದೆ ಎಂದು ಹೇಳಿದರು.