ಭಾಗಮಂಡಲ, ಸೆ. 9: ಮೂರು ನದಿಗಳ ಸಂಗಮ ಕ್ಷೇತ್ರವಾದ ಭಾಗಮಂಡಲದಲ್ಲಿ ನಿನ್ನೆ ರಾತ್ರಿಯಿಂದ ಇಂದು ಪೂರ್ವಾಹ್ನದವರೆಗೆ ಭಾರೀ ಮಳೆ ಸುರಿದು ಇಡೀ ಪ್ರದೇಶ ಮತ್ತೆ ಜಲಾವೃತಗೊಂಡಿದೆ. ಭಾಗಮಂಡಲ, ನಾಪೋಕ್ಲು ರಸ್ತೆ ಸಂಪೂರ್ಣ ಜಲಾವೃತಗೊಂಡಿದ್ದು, ಇಂದು ಅಗ್ನಿ ಶಾಮಕ ದಳದ ಮೂಲಕ ರ್ಯಾಫ್ಟಿಂಗ್ ವ್ಯವಸ್ಥೆ ಕೈಗೊಳ್ಳಲಾಗಿದೆ.ಆದರೆ, ನೂರಕ್ಕೂ ಅಧಿಕ ಮಕ್ಕಳು ಅಯ್ಯಂಗೇರಿ-ಭಾಗಮಂಡಲ ಮೊದಲಾದೆಡೆಗಳಿಂದ ಚೇರಂಬಾಣೆ ಹಾಗೂ ಇನ್ನಿತರ ಕಡೆಗಳಿಗೆ ಶಾಲಾ-ಕಾಲೇಜುಗಳಿಗೆ ತೆರಳಲು ಸಾಧ್ಯವಾಗದೆ ಮಕ್ಕಳು ಮನೆಯಲ್ಲಿಯೆ ಉಳಿಯುವಂತಾಯಿತು. ಬೆಳಿಗ್ಗೆ 8 ಗಂಟೆಯಿಂದಲೇ ರ್ಯಾಫ್ಟಿಂಗ್ ವ್ಯವಸ್ಥೆ ಇದ್ದಿದ್ದರೆ ಈ ಪರಿಸ್ಥಿತಿಗೆ ಎಡೆಯಾಗುತ್ತಿರಲಿಲ್ಲ. ರ್ಯಾಫ್ಟಿಂಗ್ ತಂಡ ಬಂದಾಗಲೇ ಬೆಳಿಗ್ಗೆ ಸುಮಾರು 9.30 ಗಂಟೆಯಾಗಿದ್ದು, ಮಕ್ಕಳು ರ್ಯಾಫ್ಟಿಂಗ್‍ನಲ್ಲಿ ತೆರಳಲು ಕಾದು ಕಾದು ನಿರಾಶರಾಗಿ ಹಿಂತಿರುಗಿದರು.

ಈ ವರ್ಷ ಅತಿವೃಷ್ಟಿ ಪ್ರವಾಹ ದಿಂದಾಗಿ ಭಾಗಮಂಡಲ ಸುತ್ತಮುತ್ತ ಲಿನ ವಿದ್ಯಾರ್ಥಿಗಳು ಶಾಲೆಗಳಿಗೆ ತೆರಳಲು ಆಗಿಂದಾಗ್ಗೆ ಅಡಚಣೆಯಾ ಗುತ್ತಿದ್ದು, ಮಕ್ಕಳ ಭವಿಷ್ಯಕ್ಕೆ ಮಾರಕವಾಗುತ್ತಿದೆ. ಸದ್ಯದಲ್ಲಿಯೇ ಮಧ್ಯಂತರ ಪರೀಕ್ಷೆಗಳು ನಡೆಯಲಿದ್ದು, ಮಕ್ಕಳು ತೀವ್ರ ಆತಂಕಕ್ಕೆ ಒಳಗಾಗಿ ದ್ದಾರೆ. ಜಿಲ್ಲಾಡಳಿತವು ಮುಂದಿನ ಸಂದರ್ಭಗಳಲ್ಲಿ ಆದರೂ

(ಮೊದಲ ಪುಟದಿಂದ) ಸಕಾಲಿಕ ವಾಗಿ ರ್ಯಾಫ್ಟಿಂಗ್ ವ್ಯವಸ್ಥೆ ಕಲ್ಪಿಸುವಂತೆ ವಿದ್ಯಾರ್ಥಿಗಳು ಹಾಗೂ ಪೋಷಕರು ಮನವಿ ಮಾಡಿದ್ದಾರೆ.

ಪ್ರಸಕ್ತ ವರ್ಷ ಆಗಸ್ಟ್‍ನಲ್ಲಿ ಭಾರೀ ಮಳೆಯಿಂದ ಗದ್ದೆಗಳು ಜಲಾವೃತ ಗೊಂಡು ರೈತರು ನಡೆಸಿದ ನಾಟಿ ಕೆಲಸಗಳೆಲ್ಲ ವ್ಯರ್ಥಗೊಂಡಿತ್ತು. ಆದರೂ ಮಳೆ ಕಡಿಮೆಯಾದ ಬಳಿಕ ಧೈರ್ಯ ತಂದುಕೊಂಡು ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿ ಕೊಂಡಿದ್ದರು. ಆದರೆ ಮತ್ತೆ ಇದೀಗ ಕೃಷಿಕರ ಶ್ರಮವೆಲ್ಲಾ ವ್ಯರ್ಥಗೊಂಡು ಗದ್ದೆಗಳೆಲ್ಲ ಜಲಾವೃತಗೊಂಡಿವೆ.

ಭಾಗಮಂಡಲದಿಂದ ಅಯ್ಯಂಗೇರಿವರೆಗೆ ಇನ್ನೊಂದೆಡೆ ಭಾಗಮಂಡಲದಿಂದ ಬೆಟ್ಟಗೇರಿವರೆಗೆ ಗದ್ದೆಗಳೆಲ್ಲ ಮುಳುಗಡೆಗೊಂಡಿವೆ. ಮುಂದೆ ಬದುಕು ಸಾಗಿಸುವದು ಹೇಗೆ? ಒಂದು ಹೊತ್ತು ಅನ್ನಕ್ಕೂ ಕುತ್ತು ಬರಲಿದೆಯೆ ಎಂಬದು ರೈತರ ಗಂಭೀರ ಪ್ರಶ್ನೆಯಾಗಿದೆ. ಇದಕ್ಕೆ ಉತ್ತರಿಸುವವರು, ಪರಿಹಾರ ಕಲ್ಪಿಸುವವರು ಯಾರು ಎಂಬದು ಇನ್ನೂ ಪ್ರಶ್ನಾರ್ಹವಾಗಿ ಉಳಿದಿದೆ.

ಕೊಡಗು ಜಿಲ್ಲೆಯ ತಲಕಾವೇರಿ ಯಲ್ಲಿ ಬೀಳುತ್ತಿರುವ ಭಾರೀ ಮಳೆಯಿಂದ ತಲಕಾವೇರಿಯ ಬ್ರಹ್ಮಗಿರಿ ಬೆಟ್ಟದಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಈ ಬಗ್ಗೆ ಭಾರತೀಯ ಸರ್ವೇಕ್ಷಣಾ ಇಲಾಖಾ ಅಧಿಕಾರಿಗಳಿಂದ ಪರಿಶೀಲನೆ ನಡೆಸಿ ವರದಿ ಪಡೆಯ ಲಾಗಿದೆ. ಈ ಬಗ್ಗೆ ತಾ. 9 ರಂದು ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರನ್, ಮಡಿಕೇರಿ ತಾಲೂಕು ತಹಶೀಲ್ದಾರ್ ಮಹೇಶ್ ಇವರುಗಳು ಇತರೆ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿರುತ್ತಾರೆ.

ರಸ್ತೆಯಿಂದ 200 ಮೀಟರ್ ಎತ್ತರದಲ್ಲಿ ಬೆಟ್ಟದಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಕೆಳಭಾಗದಲ್ಲಿರುವ ಅಂಗಡಿಗಳ ಮಾಲೀಕರಿಗೆ ತಾತ್ಕಾಲಿಕ ವಾಗಿ ಅಂಗಡಿ ಖಾಲಿಗೊಳಿಸಲು ಸೂಚಿಸಲಾಗಿದೆ. ಇನ್ನೂ ಕೆಳಭಾಗ ದಲ್ಲಿರುವ ಮನೆಗಳ ಮಾಲೀಕರಿಗೆ ಮುನ್ನೆಚ್ಚರಿಕಾ ಕ್ರಮವಾಗಿ ಮನೆಗಳನ್ನು ಖಾಲಿ ಮಾಡಲು ಗ್ರಾ.ಪಂ. ವತಿಯಿಂದ ನೋಟೀಸು ನೀಡಲಾಗಿದೆ. ಸದರಿ ಪ್ರದೇಶದ ಇನ್ನೊಂದು ಭಾಗದಲ್ಲಿ ಜಾರಿರುವ ಮಣ್ಣನ್ನು ತೆರವುಗೊಳಿ ಸಲು ಕ್ರಮ ವಹಿಸಲಾಗಿದೆ. ಭೂ ಸರ್ವೇಕ್ಷಣಾ ಇಲಾಖೆಯ ಸಲಹೆಯಂತೆ ಬೆಟ್ಟದಲ್ಲಿ ಬಿರುಕು ಬಿಟ್ಟ ಸ್ಥಳದೊಳಗೆ ನೀರು ಹೋಗದಂತೆ ಪ್ಲಾಸ್ಟಿಕ್ ಹೊದಿಕೆಯನ್ನು ಹೊದಿಸಿ ಮಣ್ಣು ಮುಚ್ಚಲು ಕ್ರಮ ವಹಿಸಲಾಗಿದೆ.-ಕುಯ್ಯಮುಡಿ ಸುನಿಲ್