ಮಡಿಕೇರಿ, ಸೆ. 9: ಭಾರತೀಯ ಭೂ ಸರ್ವೇಕ್ಷಣಾ ಇಲಾಖೆ ಕೊಡಗಿನ ಪ್ರಸಕ್ತ ವರ್ಷದ ಅತಿವೃಷ್ಟಿ ಭೂಕುಸಿತ, ಪ್ರವಾಹ ಪ್ರದೇಶಗಳಿಗೆ ಭೇಟಿ ನೀಡಿ ವಿವರ ವರದಿಯೊಂದನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಿದೆ. ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರಿಗೆ ಸಲ್ಲಿಸಿರುವ 27 ಪುಟಗಳ ವರದಿಯಲ್ಲಿ ಭೂವಿಜ್ಞಾನಿಗಳಾದ ಸುನಂದನ್ ಬಸು ಮತ್ತು ಕಪಿಲ್ ಸಿಂಗ್ ಇವರುಗಳು ಪ್ರಾಕೃತಿಕ ದುರಂತಗಳಿಗೆ ಕಾರಣವಾದ ಪ್ರಮುಖ ಅಂಶಗಳ ಕುರಿತು ವಿವರಿಸಿದ್ದಾರೆ. ಹೆಚ್ಚಿನ ಅನಾಹುತ ತಡೆಯಲು ಕೈಗೊಳ್ಳಬೇಕಾದ ಅಗತ್ಯ ಕ್ರಮಗಳ ಬಗ್ಗೆ ಸಲಹೆಯಿತ್ತಿದ್ದಾರೆ.ಕೊಡಗಿನ ಹಾಗೂ ರಾಷ್ಟ್ರದ ಜೀವನದಿ ತಲಕಾವೇರಿಯ ಜಲಮೂಲ ಕೇಂದ್ರವೆನಿಸಿರುವ ಬ್ರಹ್ಮಗಿರಿ ಬೆಟ್ಟದಲ್ಲಿ ಈ ಹಿಂದೆ ಅರಣ್ಯ ಇಲಾಖೆಯ ಅವೈಜ್ಞಾನಿಕ ಕಾಮಗಾರಿಗಳ ಪರಿಣಾಮವೇ ಬೆಟ್ಟದಲ್ಲಿ ಭಾರೀ ಬಿರುಕು ಸಂಭವಿಸಿದೆ ಎಂದು ಸ್ಪಷ್ಟಪಡಿಸ ಲಾಗಿದೆ. ಕಂದಕದ ರೀತಿಯಲ್ಲಿ ಭೂಮಿಯನ್ನು ಕೊರೆದು ಮಳೆ ನೀರು ಸಂರಕ್ಷಣೆಯ ಯೋಜನೆಯನ್ನು ಈ ಹಿಂದೆ ಅರಣ್ಯ ಇಲಾಖೆ ನಡೆಸಿದೆ. ಇದರೊಂದಿಗೆ ಬ್ರಹ್ಮಗಿರಿ ಸನಿಹ ರಸ್ತೆಗಳ ವಿಸ್ತರಣೆ ಸಂದರ್ಭವೂ ಇಳಿಜಾರನ್ನು ಸಮತಟ್ಟುಗೊಳಿಸುವ ಕಾಮಗಾರಿ ಸಂದರ್ಭವೂ ಬೆಟ್ಟಕ್ಕೆ ಧಕ್ಕೆ ಉಂಟಾಗಿದೆ. ಮುಖ್ಯವಾಗಿ ಇಲ್ಲಿ ಭೂಕುಸಿತ ಉಂಟಾಗದಂತೆ ‘ಸ್ಲೋಪ್‍ಗ್ರೇಡಿಂಗ್’ ಹಾಗೂ ತಡೆಗೋಡೆಗಳ ನಿರ್ಮಾಣ ಕಾರ್ಯ ಅಗತ್ಯವಾಗಿ ಆಗಬೇಕಾಗಿದೆ.

ಇಳಿಜಾರು ಪ್ರದೇಶಗಳಲ್ಲಿ ನೀರು ಸರಾಗವಾಗಿ ಹರಿಯಲು ಸಣ್ಣ ಏಕ ಸಾಲಿನ ಚರಂಡಿ ನಿರ್ಮಾಣವಾಗ ಬೇಕಾಗಿದೆ. ತೀರಾ ಇಳಿಜಾರು ಪ್ರದೇಶಗಳಲ್ಲಿ ಅಲ್ಲಲ್ಲಿ ಸಸ್ಯಗಳನ್ನು ನೆಡಬೇಕಾಗಿದೆ ಇದೇ ರೀತಿ ಐವರನ್ನು ಬಲಿಪಡೆದ ಕೋರಂಗಾಲದಲ್ಲಿಯೂ ಮನೆಗಳ ನಿರ್ಮಾಣ ಸಂದರ್ಭ ಇಳಿಜಾರು ಪ್ರದೇಶವನ್ನು ಸಮತಟ್ಟು ಮಾಡುವಾಗ ಆದಂತಹ ದುರ್ಘಟನೆ ಮರಕಳಿಸದಿರಲು ಸಮೃದ್ಧವಾಗಿ ಸಸ್ಯಗಳನ್ನು ನೆಡಬೇಕಾಗಿದೆ.

ವೀರಾಪೇಟೆಯ ಅಯ್ಯಪ್ಪ ಬೆಟ್ಟದಲ್ಲಿಯೂ ಮನೆಗಳ ನಿರ್ಮಾಣಕ್ಕಾಗಿ ಯಾವದೇ ಸೂಕ್ತ ತಡೆಗಳನ್ನು ನಿರ್ಮಿಸದೆ ಅಲ್ಲಲ್ಲಿ ಮನೆಗಳನ್ನು ನಿರ್ಮಿಸಲಾಗಿದೆ. ಇದರಿಂದಾಗಿ ಬೆಟ್ಟದಲ್ಲಿ ಭೂಕುಸಿತ ಸಂಭವಿಸಿದೆ. ಈ ಬೆಟ್ಟದಲ್ಲಿ ಅಲ್ಲಲ್ಲಿನ ಬಿರುಕುಗಳನ್ನು

(ಮೊದಲ ಪುಟದಿಂದ) ಅಗತ್ಯ ಸಾಮಗ್ರಿಗಳನ್ನು ಬಳಸಿ ಮುಚ್ಚಬೇಕಾಗಿದೆ. ಇದರಿಂದ ಆ ಸ್ಥಳದ ತೇವಾಂಶವೂ ಕಡಿಮೆಯಾಗುತ್ತದೆ. ಕೆಲವು ಸ್ಥಳಗಳಲ್ಲಿ ತಡೆಗೋಡೆ ನಿರ್ಮಿಸಿ ನೀರು ಸಂಚಾರಕ್ಕೆ ದಾರಿ ಮಾಡಿಕೊಡಬೇಕಾಗಿದೆ. ಪ್ರಸಕ್ತ ವರ್ಷ ಮಳೆಗಾಲದವರೆಗೂ ಭೂಕುಸಿತ ಪ್ರದೇಶದ ಕೆಲವು ಮನೆಗಳನ್ನು ತೆರವುಗೊಳಿಸುವದು ಅನಿವಾರ್ಯ ವಾಗಿದೆ. ವೀರಾಜಪೇಟೆ ನೆಹರೂ ನಗರದಲ್ಲಿ ಬಿರುಕುಂಟಾದ ಸ್ಥಳಗಳಲ್ಲಿಯೂ ಇದೇ ಕ್ರಮ ಅನುಸರಿಸಬೇಕಾಗಿದೆ.

ತೋರದಲ್ಲಿ ಕಲ್ಲು ಗಣಿಗಾರಿಕೆ

ವೀರಾಜಪೇಟೆ ಸನಿಹದ ತೋರ ಗ್ರಾಮದಲ್ಲಿ ಆರು ಮಂದಿ ಸಾವಿಗೀಡಾಗಿ ನಾಲ್ಕು ಮಂದಿ ಕಾಣೆಯಾಗಿರುವ ಪ್ರಕರಣವನ್ನು ಅವಲೋಕಿಸುವಾಗ ಮುಖ್ಯವಾಗಿ ಈ ದುರಂತ ಪ್ರದೇಶದ ಮುಂಭಾಗ ದಲ್ಲಿಯೇ ನಡೆಯುತ್ತಿರುವ ಕಲ್ಲುಗಣಿಗಾರಿಕೆಯೆ ಪ್ರಮುಖ ಕಾರಣವಾಗಿದೆ. ಗಣಿಗಾರಿಕೆ ಪ್ರದೇಶದಲ್ಲಿ ಕಲ್ಲುಗಳನ್ನು ಸ್ಫೋಟಗೊಳಿಸುವಾಗ ಭೂ ಪದರದಲ್ಲಿ ಉಂಟಾದ ವ್ಯತ್ಯಾಸವೇ ಭೂಕುಸಿತಕ್ಕೆ ಕಾರಣವಾಗಿದೆ.

ತೋರದಲ್ಲಿ ರಸ್ತೆ ನಿರ್ಮಾಣ ಸಂದರ್ಭವೂ ಭೂಮಿಯ ಇಳಿಜಾರು ಪ್ರದೇಶದಲ್ಲಿ ವ್ಯತ್ಯಾಸ ಉಂಟಾಗಿದೆ. ಇಲ್ಲಿಯೂ ಕೂಡ ‘ಸ್ಲೋಪ್‍ಗ್ರೇಡಿಂಗ್’ ತಡೆಗೋಡೆ ನಿರ್ಮಾಣಗಳು, ನೀರು ಹರಿಯಲು ಮಾರ್ಗ ಹಾಗೂ ಸಸ್ಯಗಳ ನೆಡುವಿಕೆ ಅಗತ್ಯವಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.