ಕುಶಾಲನಗರ, ಸೆ. 9: ಕುಶಾಲನಗರ ಪಟ್ಟಣದ ಹೃದಯ ಭಾಗದಲ್ಲಿರುವ ಶಿಥಿಲಗೊಂಡಿದ್ದ ಕಟ್ಟಡವೊಂದು ಕುಸಿದು ಬಿದ್ದಿದೆ. ಆಗಾಗ್ಗೆ ಕಟ್ಟಡದ ಅವಶೇಷಗಳು ಕುಸಿಯುತ್ತಿದ್ದು ಅದೃಷ್ಟವಶಾತ್ ಯಾವದೇ ಅಪಾಯ ಉಂಟಾಗಿಲ್ಲ. ದಿನನಿತ್ಯ ನೂರಾರು ನಾಗರಿಕರು, ವಾಹನಗಳು ಕಟ್ಟಡದ ಕೆಳಭಾಗದಲ್ಲಿ ಓಡಾಡುತ್ತಿದ್ದು ಭಾರೀ ಅಪಾಯದ ಸಾಧ್ಯತೆ ಬಗ್ಗೆ ಪತ್ರಿಕಾ ಮಾಧ್ಯಮಗಳು ಹಲವು ಬಾರಿ ಪ್ರಕಟಿಸಿದರೂ ಯಾವದೇ ಸ್ಪಂದನ ದೊರೆಯುತ್ತಿಲ್ಲ.
ಮುಖ್ಯರಸ್ತೆಯಿಂದ ಇಂದಿರಾ ಬಡಾವಣೆಗೆ ತೆರಳುವ ನಾಗರಿಕರಿಗೆ ಸಂಪರ್ಕ ರಸ್ತೆ ಕಡಿತಗೊಂಡಿದ್ದು, ಹೆದ್ದಾರಿ ಒತ್ತಿನಲ್ಲಿರುವ ಕಟ್ಟಡ ಕಳೆದ ಹಲವು ವರ್ಷಗಳಿಂದ ಶಿಥಿಲ ಗೊಂಡಿದ್ದು ಪಾದಚಾರಿಗಳಿಗೆ ಅಪಾಯದ ಆಹ್ವಾನ ನೀಡುವಂತಿದ್ದರೂ ಸ್ಥಳೀಯ ಆಡಳಿತ ಯಾವದೇ ರೀತಿಯ ಕ್ರಮಕೈಗೊಳ್ಳದೆ ನಿರ್ಲಕ್ಷ್ಯ ತಾಳುತ್ತಿರುವದಾಗಿ ಸ್ಥಳೀಯ ನಾಗರಿಕರು ದೂರಿದ್ದಾರೆ. ತಕ್ಷಣ ತೆರವುಗೊಳಿಸುವಂತೆ ಆಗ್ರಹಿಸಿದ್ದಾರೆ.