ಕುಶಾಲನಗರ, ಸೆ. 9: ಕುಶಾಲನಗರ ಸರಕಾರಿ ಸಮುದಾಯ ಆರೋಗ್ಯ ಕೇಂದ್ರದ ಮೇಲ್ದರ್ಜೆಗೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಕ್ರಮಕೈಗೊಳ್ಳಲಾಗುವದು ಎಂದು ಮಡಿಕೇರಿ ಕ್ಷೇತ್ರ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ತಿಳಿಸಿದ್ದಾರೆ.
ಅವರು ಕುಶಾಲನಗರದಲ್ಲಿ ನಿರ್ಮಾಣಗೊಂಡಿದ್ದ ತಾಲೂಕು ಆರೋಗ್ಯ ವೈದ್ಯಾಧಿಕಾರಿಗಳ ಕಚೇರಿ ಕಟ್ಟಡ ಲೋಕಾರ್ಪಣೆ ಮಾಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಪ್ರಸಕ್ತ 50 ಹಾಸಿಗೆ ಹೊಂದಿರುವ ಆಸ್ಪತ್ರೆಯನ್ನು 100 ಹಾಸಿಗೆಗಳ ಒಳರೋಗಿಗಳಿಗೆ ಸೌಲಭ್ಯ ಕಲ್ಪಿಸಲು ಯೋಜನೆ ರೂಪಿಸಲಾಗುವದು. ಉಳಿದಂತೆ ಗ್ರಾಮೀಣ ಪ್ರದೇಶಗಳ ಆಸ್ಪತ್ರೆಗಳಿಗೆ ವೈದ್ಯಾಧಿಕಾರಿಗಳು, ಸಿಬ್ಬಂದಿಗಳ ನೇಮಕ ಮಾಡಲು ಜಿಲ್ಲಾ ಆರೋಗ್ಯ ಅಧಿಕಾರಿಗಳ ಜೊತೆ ಚರ್ಚಿಸಲಾಗುವದು ಎಂದು ತಿಳಿಸಿದರು. ಆರೋಗ್ಯಾಧಿಕಾರಿಗಳ ಕಚೇರಿ ಕಟ್ಟಡಕ್ಕೆ ಶಾಸಕರ ಅನುದಾನದಿಂದ 12 ಲಕ್ಷ ಉಳಿದಂತೆ ಇಲಾಖೆಯಿಂದ 14 ಲಕ್ಷ ಬಿಡುಗಡೆ ಮಾಡಲಾಗಿತ್ತು ಎಂದು ಮಾಹಿತಿ ನೀಡಿದರು.
ಕುಶಾಲನಗರ ನೂತನ ತಾಲೂಕು ರಚನೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಎಲ್ಲಾ ಮೂಲಭೂತ ವ್ಯವಸ್ಥೆ ಕಲ್ಪಿಸಲು ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ಜಿಲ್ಲೆಯಲ್ಲಿ ಸಂಭವಿಸಿದ ಮಳೆ ಹಾನಿಗೆ ಮುಖ್ಯಮಂತ್ರಿಗಳು ಈಗಾಗಲೆ 100 ಕೋಟಿ ಹಣ ಬಿಡುಗಡೆ ಮಾಡಿದ್ದಾರೆ. ಉಳಿದ ಅನುದಾನವನ್ನು ಸದÀ್ಯದಲ್ಲಿಯೇ ಬಿಡುಗಡೆಗೊಳಿಸಲಿ ದ್ದಾರೆ ಎಂದರು.
ಈ ಸಂದರ್ಭ ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಎಂ.ಬಿ. ಅಭಿಮನ್ಯುಕುಮಾರ್, ಜಿಪಂ ಸದಸ್ಯೆ ಮಂಜುಳಾ, ತಾಪಂ ಸದಸ್ಯ ಗಣೇಶ್, ತಾಲೂಕು ಆರೋಗ್ಯಾಧಿಕಾರಿ ಡಾ.ಶ್ರೀನಿವಾಸ, ಜಿಪಂ ಅಭಿಯಂತರ ವೀರೇಂದ್ರ ಮತ್ತಿತರರು ಇದ್ದರು.
ಕಳೆದ 4 ವರ್ಷಗಳ ಹಿಂದೆ ನಿರ್ಮಾಣಗೊಂಡಿದ್ದ ತಾಲೂಕು ಆರೋಗ್ಯ ವೈದ್ಯಾಧಿಕಾರಿಗಳ ಕಚೇರಿ ಕಟ್ಟಡ ಅಧಿಕಾರಿಗಳ ನಿರ್ಲಕ್ಷ್ಯದಿಂದ ಲೋಕಾರ್ಪಣೆಗೊಳ್ಳುವಲ್ಲಿ ವಿಳಂಭ ಗೊಂಡಿತ್ತು. ಉದ್ಘಾಟನೆ ಮಾಡಲು ಜಿಪಂ, ಆರೋಗ್ಯ ಇಲಾಖೆ ನಡುವೆ ಇದ್ದ ಗೊಂದಲದೊಂದಿಗೆ ಉದ್ಘಾಟನಾ ಕಾರ್ಯಕ್ರಮ ನೆನೆಗುದಿಗೆ ಬಿದ್ದಿತ್ತು. ಈ ನಡುವೆ ಕಟ್ಟಡದಲ್ಲಿದ್ದ ಕೆಲವು ವಸ್ತುಗಳು ಕಳ್ಳರ ಪಾಲಾಗುವದರೊಂದಿಗೆ ಕಳವು ಪ್ರಕರಣ ಒಂದು ಕುಶಾಲನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು.
ಶಕ್ತಿಯಲ್ಲಿ ಹಲವು ಬಾರಿ ವರದಿ ಪ್ರಕಟಗೊಂಡಿದ್ದು ಈ ಹಿನ್ನೆಲೆಯಲ್ಲಿ ಸ್ಪಂದಿಸಿದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಕಟ್ಟಡದ ಲೋಕಾರ್ಪಣೆಗೆ ಜಿ.ಪಂ.ಗೆ ಸೂಚನೆ ನೀಡಿದ್ದು ಇದೀಗ ಕಚೇರಿ ಉದ್ಘಾಟನೆಗೊಳ್ಳುವಂತಾಗಿದೆ.