ಸಿದ್ದಾಪುರ, ಸೆ. 9: ಗುಹ್ಯ ಗ್ರಾಮದಲ್ಲಿನ ನಿವೇಶನ ರಹಿತರಿಗಾಗಿ ಗುಹ್ಯ ಗ್ರಾಮದ ಕೆಲ ಸರಕಾರಿ ಭೂಮಿಗಳಿರುವ ಜಾಗವನ್ನು ಕಂದಾಯ ಇಲಾಖೆ ಹಾಗೂ ಅರಣ್ಯ ಇಲಾಖೆ ಜಂಟಿಯಾಗಿ ಸರ್ವೆ ನಡೆಸಿದೆ.

ಗುಹ್ಯ ಗ್ರಾಮಕ್ಕೆ ಒಳಪಡುವ ಪ್ರೌಢಶಾಲೆಯ ಸುತ್ತಮುತ್ತಲ ಜಾಗದಲ್ಲಿ ಸರಕಾರಿ ಭೂಮಿ ಇರುವ ಬಗ್ಗೆ ಅಧಿಕಾರಿಗಳು ಸರ್ವೆ ನಡೆಸಿದ್ದು, ವರದಿಯನ್ನು ಹಿರಿಯ ಅಧಿಕಾರಿಗಳಿಗೆ ಸಲ್ಲಿಸಲಾಗುತ್ತಿದೆ. ಕೆಲವೊಂದು ಭೂಮಿಯು ಅರಣ್ಯ ಇಲಾಖೆ ಸೇರಿದ್ದು, ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆ ಜಂಟಿಯಾಗಿ ಸರ್ವೆ ನಡೆಸಿದೆ. ಭೂಮಿ ಪತ್ತೆಯಾದಲ್ಲಿ ಗುಹ್ಯ ಗ್ರಾಮದ ನಿರಾಶ್ರಿತರಿಗೆ ಶಾಶ್ವತ ನಿವೇಶನ ಒದಗಿಸುವ ಸಾಧ್ಯತೆ ಇದೆ.

ಈ ಬಗ್ಗೆ ಮಾತನಾಡಿದ ಕಂದಾಯ ಪರಿವೀಕ್ಷಕರಾದ ನಾಗೇಶ್ ರಾವ್, ಕೆಲವೊಂದು ಸರ್ವೆ ನಂಬರ್‍ಗಳಲ್ಲಿ ಸರಕಾರಿ ಭೂಮಿ ಇದೆ. ಈ ಬಗ್ಗೆ ತಹಶೀಲ್ದಾರರ ಆದೇಶದ ಮೇರೆಗೆ ಸರ್ವೆ ಕಾರ್ಯ ಆರಂಭಿಸಲಾಗಿದೆ ಎಂದರು.

ಈ ಸಂದರ್ಭ ವಲಯ ಅರಣ್ಯಾಧಿಕಾರಿ ಹೇಮಂತ್ ಹೆಗ್ಡೆ, ಕಂದಾಯ ಪರಿವೀಕ್ಷಕ ನಾಗೇಶ್‍ರಾವ್, ತಾಲೂಕು ಭೂಮಾಪನಾ ಅಧಿಕಾರಿ ರೆಡ್ಡಿ, ಗ್ರಾಮ ಲೆಕ್ಕಿಗ ಒಮಪ್ಪ ಬಣಕಾರ್, ಅನೀಶ್, ಮುತ್ತಪ್ಪ, ಸಹಾಯಕ ಕೃಷ್ಣ ಸೇರಿದಂತೆ ಇನ್ನಿತರರು ಇದ್ದರು.

ಗುಹ್ಯ ಗ್ರಾಮದಲ್ಲಿ ವಿವಿಧ ಸರ್ವೆ ನಂಬರ್‍ಗಳಲ್ಲಿ ಸರಕಾರಿ ಭೂಮಿ ಇದ್ದು, ಹಲವು ದಾಖಲೆಗಳನ್ನು ಕಂದಾಯ ಇಲಾಖೆಗೆ ನೀಡಲಾಗಿದೆ. ಕೂಡಲೇ ಸರ್ವೆ ನಡೆಸಿ, ಒತ್ತುವರಿ ಭೂಮಿಯನ್ನು ನಿರಾಶ್ರಿತರಿಗೆ ನೀಡಬೇಕೆಂದು ಗುಹ್ಯ ಹೋರಾಟ ಸಮಿತಿ ಒತ್ತಾಯಿಸಿದೆ.