ಶ್ರೀಮಂಗಲ, ಸೆ. 9 : ಬೆಳೆಗಾರರೋರ್ವರು ಪೆÇನ್ನಂಪೇಟೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್.ಬಿ.ಐ) ಬ್ಯಾಂಕಿನಲ್ಲಿ ಇರಿಸಿದ್ದ ನಿರಖು ಠೇವಣಿ ಹಣ ಅವಧಿ ವಿಕಸನಗೊಂಡರೂ ಅದನ್ನು ಮರುಪಾವತಿಸದೆ ಸಾಲದ ಖಾತೆಗೆ ವಜಾ ಮಾಡಿದÀ ಬ್ಯಾಂಕಿನ ಕ್ರಮವನ್ನು ವಿರೋಧಿಸಿ ಬ್ಯಾಂಕ್‍ನ ಎದುರು ಬೆಳೆಗಾರರ ಸಂಘಟನೆಗಳು ಪ್ರತಿಭಟನೆ ನಡೆಸಿದವು.

ಪೆÇನ್ನಂಪೇಟೆಯ ಎಸ್.ಬಿ.ಐ. ಬ್ಯಾಂಕ್ ವ್ಯವಸ್ಥಾಪಕರಿಗೆ ಸಂಬಂಧಿಸಿದ ನಿರಖು ಠೇವಣಿಯನ್ನು ಮರುಪಾವತಿಸುವಂತೆ ಕೇಳಿ ಗಡುವು ನೀಡಿದ್ದರೂ ಅದಕ್ಕೆ ಸ್ಪಂದಿಸದ ಹಿನ್ನೆಲೆಯಲ್ಲಿ ಕೊಡಗು ಬೆಳೆಗಾರರ ಒಕ್ಕೂಟ, ಜಿಲ್ಲಾ ಸಾರ್ವಜನಿಕ ಹಿತರಕ್ಷಣಾ ಸಮಿತಿ, ಜಿಲ್ಲಾ ರೈತ ಸಂಘ - ಹಸಿರು ಸೇನೆ, ಶ್ರೀಮಂಗಲ ಚೇಂಬರ್ ಆಫ್ ಕಾಮರ್ಸ್, ಜಿಲ್ಲಾ ಭಾರತೀಯ ಕಿಸಾನ್ ಸಂಘ, ಬಿ-ಶೆಟ್ಟಿಗೇರಿಯ ಕುತ್ತ್‍ನಾಡ್- ಬೇರಳಿನಾಡ್ ಬೆಳೆಗಾರರ ಸಂಘ, ಪೊನ್ನಂಪೇಟೆಯ ಕೊಡವ-ಅಮ್ಮಕೊಡವ ನಾಗರಿಕ ಸಂಘ ಜಂಟಿಯಾಗಿ ಪ್ರತಿಭಟನೆಯಲ್ಲಿ ಪಾಲ್ಗೊಂಡವು.

ಪ್ರಕರಣದ ವಿರುದ್ಧ ಸಂಘಟನೆಯ ಪದಾಧಿಕಾರಿಗಳು ಮತ್ತು ಸದಸ್ಯರು ನೂರಾರು ಸಂಖ್ಯೆಯಲ್ಲಿ ಜಮಾಯಿಸಿ ಬ್ಯಾಂಕ್‍ನ ನೀತಿಯನ್ನು ಖಂಡಿಸಿದರು. ಕೂಡಲೇ ಎಫ್.ಡಿ. ಹಣವನ್ನು ಸಂಪೂರ್ಣ ಮರುಪಾವತಿಸುವಂತೆ ಘೋಷಣೆ ಕೂಗಿ ಒತ್ತಾಯಿಸಿದರು.

ಲಿಖಿತ ಭರವಸೆ : ಪ್ರತಿಭಟನಾ ಸ್ಥಳಕ್ಕೆ ಮಂಗಳೂರು ಎಸ್.ಬಿ.ಐ ವಿಭಾಗೀಯ ಕಚೇರಿಯಿಂದ ಹೆಚ್À.ಆರ್.ಡಿ. ಉಸ್ತುವಾರಿ ಅಧಿಕಾರಿ ಪ್ರಭಾಕರ್ ಸಮಸ್ಯೆ ಆಲಿಸಿ ಪರಿಹರಿಸಲು ಆಗಮಿಸಿದ್ದರು. ಆದರೆ ಅವರು ಎಫ್.ಡಿ. ಹಣವನ್ನು ಕೂಡಲೇ ಮರುಪಾವತಿಸಲು ತಮಗೆ ಸಾಧ್ಯವಾಗುವದಿಲ್ಲ. ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತಂದು ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು ಸ್ಥಳದಲ್ಲೇ ಪ್ರಕರಣ ಇತ್ಯರ್ಥ ಪಡಿಸಬೇಕು. ಅಲ್ಲದೆ ಎಫ್.ಡಿ. ಹಣವನ್ನು ಅಸಲು ಬಡ್ಡಿ ಸಹಿತ ಮರುಪಾವತಿಸುವಂತೆ ಪಟ್ಟು ಹಿಡಿದರು.

ಅಧಿಕಾರಿ ಪ್ರಭಾಕರ್ ಮೂಲಕ ಮಂಗಳೂರು ವಿಭಾಗೀಯ ವ್ಯವಸ್ಥಾಪಕ ದಿನೇಶ್ ಅರೂರ್ ಅವರೊಂದಿಗೆ ಪ್ರತಿಭಟನಾಕಾರರು ಮಾತನಾಡಿದರು.

ಈ ಸಂದರ್ಭ ಎಫ್.ಡಿ. ಹಣ ಮರುಪಾವತಿ ಮಾಡುವ ಬಗ್ಗೆ ಮೇಲಾಧಿಕಾರಿಗಳ ಸಲಹೆ ಪಡೆದು ಇದೇ ತಾ. 17 ರೊಳಗೆ ಪೊನ್ನಂಪೇಟೆ ಶಾಖೆಯ ವ್ಯವಸ್ಥಾಪಕರಿಗೆ ಸಲಹೆ ನೀಡಲಾಗುವದು ಎಂದು ಮಂಗಳೂರು ವಿಭಾಗೀಯ ವ್ಯವಸ್ಥಾಪಕ ದಿನೇಶ್ ಅರೂರ್ ಲಿಖಿತವಾಗಿ ಪ್ರತಿಭಟನಾಗಾರರಿಗೆ ಭರವಸೆ ನೀಡಿದ್ದಾರೆ. ಇದನ್ನು ಅನುಷ್ಠಾನಗೊಳಿಸುವ ಹೊಣೆ ಎಸ್.ಬಿ.ಐ ಪೊನ್ನಂಪೇಟೆ ಶಾಖೆ ವ್ಯವಸ್ಥಾಪಕ ಸಿಯಾಸ್, ಹಾಗೂ ಹೆಚ್.ಆರ್.ಡಿ. ಅಧಿಕಾರಿ ಪ್ರಭಾಕರ್ ಅವರು ನಿರ್ವಹಿಸುವ ಭರವಸೆಯಿಂದ ಪ್ರÀ್ರತಿಭಟನೆಯನ್ನು ತಾತ್ಕಾಲಿಕವಾಗಿ ವಾಪಾಸು ಪಡೆಯಲಾಯಿತು.

ಸಂಘಟನೆಗಳಿಂದ ತೀವ್ರ ಆಕ್ರೋಶ : ಕೊಡಗು ಜಿಲ್ಲೆ ಕಳೆದ ಎರಡು ವರ್ಷದಿಂದ ಕಂಡು ಕೇಳರಿಯದಂತಹ ಪ್ರಾಕೃತಿಕ ವಿಕೋಪಕ್ಕೆ ತುತ್ತಾಗಿದೆ. ಕಳೆದ ಎರಡು ದಶಕದಿಂದಲೂ ಜಿಲ್ಲೆಯ ಕೃಷಿ ಹಾಗೂ ತೋಟಗಾರಿಕಾ ಬೆಳೆಗಳಿಗೆ ಹವಾಮಾನ ವೈಪರೀತ್ಯ ಮತ್ತು ಉತ್ಪಾದನಾ ವೆಚ್ಚ ಹೆಚ್ಚಳದಿಂದ ರೈತ - ಬೆಳೆಗಾರರ ಸಮುದಾಯ ತೀವ್ರ ಸಂಕಷ್ಟದಲ್ಲಿದೆ. ಇದರಿಂದ ಜಿಲ್ಲೆಯ ಬೆಳೆಗಾರ ಸಂಘಟನೆಗಳು ರೈತರ ಸಂಪೂರ್ಣ ಸಾಲ ಮನ್ನಾ ಮಾಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸುತ್ತಿದ್ದು, ಇಂತಹ ಪ್ರಯತ್ನ ಪ್ರಗತಿಯಲ್ಲಿರುವಾಗಲೇ ಎಸ್.ಬಿ.ಐ ಶಾಖೆ ಬಲತ್ಕಾರದಿಂದ ಸಾಲ ವಸೂಲಾತಿ ಮಾಡುತ್ತಿರುವದು ಸರಿಯಲ್ಲ. ಅದರಲ್ಲೂ ರೈತ ತನ್ನ ಅನಾರೋಗ್ಯ ಮತ್ತು ಕುಟುಂಬದ ಭದ್ರತೆಗಾಗಿ ಇರಿಸಿರುವ ಎಫ್.ಡಿ. ಹಣವನ್ನು ಫಲಾನುಭವಿಯ ಗಮನಕ್ಕೆ ತಾರದೆ ಏಕಾಏಕಿ ಸಾಲದ ಖಾತೆಗೆ ಹಿಡಿದಿರುವದು ಬ್ಯಾಂಕ್ ಮೇಲೆ ಗ್ರಾಹಕರು ಇರಿಸಿರುವ ವಿಶ್ವಾಸವನ್ನು ಕಳೆದುಕೊಳ್ಳುವಂತೆ ಮಾಡಿದೆ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.

ಸಾಲ ಪಡೆಯಲು ಕಾಫಿ ತೋಟದ ದಾಖಲೆಗಳನ್ನು ಆಧಾರವಾಗಿ ಬ್ಯಾಂಕಿಗೆ ನೀಡಿರುವಾಗ ಎಫ್.ಡಿ ಹಣವನ್ನು ಮರುಪಾವತಿಸಲು ನಿರಾಕರಿಸುತ್ತಿರುವ ಬ್ಯಾಂಕಿನ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬ್ಯಾಂಕ್ ಅಧಿಕಾರಿಗಳು ಬಲತ್ಕಾರದ ಸಾಲ ವಸೂಲಾತಿ ಮಾಡಲು ಮುಂದಾಗಿರುವ ಮೂಲಕ ಸಂಕಷ್ಟದಲ್ಲಿರುವ ಬೆಳೆಗಾರರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿಗೆ ದೂಡುತ್ತಿದೆ ಎಂದು ಕಿಡಿಕಾರಿದರು.

ಕುಸಿದು ಬಿದ್ದ ಬೆಳೆಗಾರ : ತನ್ನ ಎಫ್.ಡಿ. ಹಣವನ್ನು ಸಾಲದ ಖಾತೆಗೆ ಹಿಡಿದುಕೊಂಡು ತೀವ್ರ ಮಾನಸಿಕ ಕಿರುಕುಳಕ್ಕೆ ಒಳಗಾಗಿರುವ ಬೆಳೆಗಾರ ಎ.ಬಿ.ನಾಚಪ್ಪ ಪ್ರತಿಭಟನೆಯಲ್ಲಿ ಸ್ವತಃ ಪಾಲ್ಗೊಂಡಿದ್ದರು. ಅನಾರೊಗ್ಯಕ್ಕೆ ತುತ್ತಾಗಿರುವ ಅವರು ತಮ್ಮ ಆರೋಗ್ಯದಲ್ಲಿ ಉಂಟಾದ ಏರುಪೇರಿನಿಂದ ಕುಸಿದು ಬೀಳುವ ಸ್ಥಿತಿಯಲ್ಲಿದ್ದರು. ಈ ಬಗ್ಗೆ ಪ್ರತಿಭಟನಾಕಾರರು ಪೊಲೀಸರು ಮತ್ತು ಬ್ಯಾಂಕ್ ಅಧಿಕಾರಿಗಳು ಕೂಡಲೇ ಆಂಬುಲೆನ್ಸ್‍ಗೆ ಕರೆಮಾಡಿ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಿದರು.

ಮತ್ತೆ ಭುಗಿಲೆದ್ದ ಆಕ್ರೋಶ : ಬೆಳೆಗಾರ ಎ.ಬಿ.ನಾಚಪ್ಪ ಅವರು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆ ಪ್ರತಿಭಟನಾಕಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಅವರಿಗೆ ಏನಾದರೂ ತೊಂದರೆಯಾದರೆ ಎಸ್.ಬಿ.ಐ ಬ್ಯಾಂಕ್ ಸಂಪೂರ್ಣ ಜವಾಬ್ದಾರಿಯಾಗಲಿದೆ. ಬ್ಯಾಂಕ್‍ನಿಂದ ಉಂಟಾಗಿರುವ ಮಾನಸಿಕ ಕಿರುಕುಳದಿಂದ ಇವರ ಆರೋಗ್ಯ ಹದೆಗೆಡುವಂತಾಗಿದೆ. ಈ ನಿಟ್ಟಿನಲ್ಲಿ ಬ್ಯಾಂಕ್ ವಿರುದ್ಧ ಕಾನೂನು ಹೋರಾಟ ನಡೆಸಲಾಗುವದು ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಸಾರ್ವಜನಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಕಟ್ಟಿಮಂದಯ್ಯ, ಪದಾಧಿಕಾರಿಗಳಾದ ಬಾಚೀರ ಕಾರ್ಯಪ್ಪ, ಸತೀಶ್‍ದೇವಯ್ಯ, ಕೊಡಗು ಬೆಳೆಗಾರರ ಒಕ್ಕೂಟದ ಹರೀಶ್‍ಮಾದಪ್ಪ, ವಿಜಯ್‍ನಂಜಪ್ಪ, ಶೆರಿಸುಬ್ಬಯ್ಯ, ಮಚ್ಚಮಾಡ ಅನೀಶ್‍ಮಾದಪ್ಪ ಜಿಲ್ಲಾ ರೈತ ಸಂಘದ - ಹಸಿರು ಸೇನೆಯ ಅಜ್ಜಮಾಡ ಚಂಗಪ್ಪ, ಪದಾಧಿಕಾರಿಗಳಾದÀ ಚಟ್ಟಂಗಡ ಕಂಬಕಾರ್ಯಪ್ಪ, ಚಂಗುಲಂಡ ಸೂರಜ್, ಕೋದೇಂಗಡ ಸುರೇಶ್, ಬಾಚಮಾಡ ಭವಿಕುಮಾರ್, ಬೊಟ್ಟಂಗಡ ತಿಲಕ್, ಶ್ರೀಮಂಗಲ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಮಾಣೀರ ಮುತ್ತಪ್ಪ, ಜಿಲ್ಲಾ ಭಾರತೀಯ ಕಿಸಾನ್ ಸಂಘದ ಅಧ್ಯಕ್ಷ ರಾಜೀವ್‍ಬೋಪಯ್ಯ, ಕೋಟೇರ ಕಿಶನ್, ಬಿ-ಶೆಟ್ಟಿಗೇರಿ ಕುತ್ತ್‍ನಾಡ್-ಬೇರಳಿನಾಡ್ ಬೆಳೆಗಾರರ ಸಂಘದ ಸಂಚಾಲಕ ಮದ್ರೀರ ಗಿರೀಶ್, ಪೊನ್ನಂಪೇಟೆ ಕೊಡವ-ಅಮ್ಮಕೊಡವ ಸಂಘದ ಪದಾಧಿಕಾರಿಗಳು,ಮತ್ತು ಸದಸ್ಯರು ಪಾಲ್ಗೊಂಡಿದ್ದರು.