ವೀರಾಜಪೇಟೆ, ಸೆ.9: ವೀರಾಜಪೇಟೆ ತಾಲೂಕಿನ ಸಂತ್ರಸ್ತರಿಗೆ ಪುನರ್ವಸತಿ ಕೇಂದ್ರಕ್ಕಾಗಿ ತಾಲೂಕು ತಹಶೀಲ್ದಾರ್ ಕೆ.ಪುರಂದರ ಅವರು ಇಂದು ಮಾಲ್ದಾರೆ, ಕರಡಿಗೋಡು, ಗುಹ್ಯ, ಹಾಲುಗುಂದ, ಬೈರಂಬಾಡ ವಿವಿಧೆಡೆಗಳಲ್ಲಿ ಪ್ರವಾಸ ಕೈಗೊಂಡು 27 ಎಕರೆ 43 ಸೆಂಟು ಪÉೈಸಾರಿ ಜಾಗವನ್ನು ಗುರುತು ಮಾಡಿದ್ದಾರೆ.

ತಹಶೀಲ್ದಾರ್ ಪುರಂದರ ಅವರೊಂದಿಗೆ ಕಂದಾಯ ಸಿಬ್ಬಂದಿಗಳು, ಸರ್ವೆಯರ್‍ಗಳು ಸ್ಥಳಕ್ಕೆ ತೆರಳಿ ಜಾಗದ ಪರಿಶೀಲನೆ ನಡೆಸಿದರು.ಬೈರಂಬಾಡದಲ್ಲಿ 1.5 ಎಕರೆ, ಹಾಲುಗುಂದದಲ್ಲಿ ಎರಡು ಸರ್ವೆ ನಂಬರ್‍ಗಳಲ್ಲಿ 10ಎಕರೆ 70 ಸೆಂಟು, ಮಾಲ್ದಾರೆಯಲ್ಲಿ 15 ಎಕರೆ 23 ಸೆಂಟು ಪೈಸಾರಿ ಜಾಗವನ್ನು ಗುರುತಿಸಲಾಗಿದೆ ಎಂದು ಪುರಂದರ ಅವರು ತಿಳಿಸಿದ್ದು ಕೊಂಡಂಗೇರಿ, ಕರಡಿಗೋಡು, ವೀರಾಜಪೇಟೆಯ ಮಲೆತಿರಿಕೆಬೆಟ್ಟ, ನೆಹರೂನಗರ ಹಾಗೂ ತೋರ ಗ್ರಾಮಗಳ ಸಂತ್ರಸ್ತರಿಗೆ ಎಲ್ಲ ಅನುಕೂಲತೆಗಳೊಂದಿಗೆ ಪುನರ್ವಸತಿ ಕೇಂದ್ರ ಕಲ್ಪಿಸಲಾಗುವದು. ಪೈಸಾರಿ ಜಾಗ ಗುರುತಿಸುವ ಕಾರ್ಯ ತಾಲೂಕಿನಾದ್ಯಂತ ಮುಂದುವರೆ ಯಲಿದ್ದು ಇದರೊಂದಿಗೆ ಪೈಸಾರಿ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ತೋಟ ಮಾಡಿರುವ ಜಾಗವನ್ನು ತೆರವುಗೊಳಿಸಿ ಇದನ್ನು ಪುನರ್ವಸತಿ ಕೇಂದ್ರಕ್ಕೆ ಬಳಸಲಾಗುವದು ಎಂದು ಪುರಂದರ ತಿಳಿಸಿದರು.ಪೈಸಾರಿ ಜಾಗ ಗುರುತಿಸಿದ ನಂತರ ಜಾಗದ ದಾಖಲೆಗಳನ್ನು ಪರಿಶೀಲಿಸಲಾಗುವದು. ಅನಂತರ ಜಿಲ್ಲಾಧಿಕಾರಿಯ ಸಮ್ಮತಿ ಮೇರೆ ಪುನರ್ವಸತಿ ಕೇಂದ್ರ ನಿರ್ಮಾಣಕ್ಕೆ ವಹಿಸಲಾಗುವದು ಎಂದು ತಿಳಿಸಿದ್ದಾರೆ.