ಮಡಿಕೇರಿ, ಸೆ. 8: ಕುಟ್ಟ ಪೊಲೀಸ್ ಠಾಣಾ ವ್ಯಾಪ್ತಿಯ ತೈಲ ಗ್ರಾಮದ ಮನೆಯೊಂದರಲ್ಲಿ ಯಾರೂ ಇಲ್ಲದ ಸಂದರ್ಭ ಚಿನ್ನಾಭರಣ ಕಳವು ಮಾಡಿದ್ದ ಆರೋಪಿಯೊಬ್ಬನನ್ನು ಪೊಲೀಸರು ಬಂಧಿಸಿ ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ. ಅಲ್ಲಿನ ನಿವಾಸಿ ಚಕ್ಕೇರ ಸುನಿಲ್‍ಮಂದಪ್ಪ ಎಂಬವರ ಮನೆಯ ಬಾಗಿಲು ಒಡೆದು ಕಳೆದ ತಾ. 8.8.2019 ರಂದು 420 ಗ್ರಾಂ. ಚಿನ್ನಾಭರಣ ಕಳ್ಳತನ ಮಾಡಲಾಗಿತ್ತು.

ಈ ವೇಳೆ ಸುನಿಲ್ ಮಂದಪ್ಪ ಸಂಸಾರದೊಂದಿಗೆ ಮೈಸೂರಿಗೆ ತೆರಳಿದ್ದರು. ಮನೆ ಮಾಲೀಕರು ಹಿಂತಿರುಗಿದ ಬಳಿಕ ನೀಡಿದ್ದ ದೂರಿನ ಮೇರೆಗೆ ಕುಟ್ಟ ಠಾಣೆಯಲ್ಲಿ ಪೊಲೀಸ್ ಕಾಯ್ದೆ 454, 457, 380ರ ಅಡಿಯಲ್ಲಿ ಪ್ರಕರಣದೊಂದಿಗೆ ತನಿಖೆ ಕೈಗೊಳ್ಳಲಾಗಿತ್ತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ. ಮಾರ್ಗದರ್ಶನದಲ್ಲಿ, ಡಿವೈಎಸ್‍ಪಿ ಸಿ.ಟಿ. ಜಯಕುಮಾರ್ ನಿರ್ದೇಶನದಡಿ ಕುಟ್ಟ ಪೊಲೀಸ್ ವೃತ್ತ ನಿರೀಕ್ಷಕ ಪರಶಿವಮೂರ್ತಿ ಹಾಗೂ ಸಿಬ್ಬಂದಿ ತೈಲ ನಿವಾಸಿ ಟಿ.ಜಿ. ದೇವಯ್ಯ ಅಲಿಯಾಸ್ ಸುರೇಶ್ (ಟ್ರಾನ್) ಎಂಬಾತನನ್ನು ಬಂಧಿಸಿ ರೂ. 4.5 ಲಕ್ಷ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ಕಾರ್ಯಾಚರಣೆಯಲ್ಲಿ ಕುಟ್ಟ ಎಎಸ್‍ಐ ಮೊಹಿದ್ದೀನ್, ದಿನೇಶ್, ರಂಜಿತ್, ಮಧು, ಕೃಷ್ಣಮೂರ್ತಿ, ಶ್ರೀನಿವಾಸ್, ಉದಯ, ಸುಕುಮಾರ್, ಜೀಪುಚಾಲಕ ಗಣಪತಿ ಪಾಲ್ಗೊಂಡಿದ್ದರು.