ಪೊನ್ನಂಪೇಟೆ: ಇತ್ತೀಚೆಗೆ ನಡೆದ ಪೊನ್ನಂಪೇಟೆ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಅರ್ವತೊಕ್ಲು ಸರ್ವದೈವತಾ ಶಾಲೆಯ ವಿದ್ಯಾರ್ಥಿಗಳು ಉತ್ತಮ ಪ್ರದರ್ಶನ ತೋರುವ ಮೂಲಕ ಸಾಧನೆ ಮಾಡಿದ್ದಾರೆ.
ಪ್ರಾಥಮಿಕ ಶಾಲಾ ವಿಭಾಗದ ಬಾಲಕರ ಥ್ರೋಬಾಲ್, ವಾಲಿಬಾಲ್, ಟೇಬಲ್ ಟೆನ್ನಿಸ್‍ನಲ್ಲಿ ಪ್ರಥಮ ಸ್ಥಾನ, ಬಾಲಕಿಯರ ಥ್ರೋಬಾಲ್‍ನಲ್ಲಿ ಪ್ರಥಮ, ವಾಲಿಬಾಲ್‍ನಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡು ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.
ಪ್ರೌಢಶಾಲಾ ವಿಭಾಗದಲ್ಲಿ ಬಾಲಕರ ಥ್ರೋಬಾಲ್, ಬಾಲ್ ಬ್ಯಾಡ್ ಮಿಂಟನ್, ಟೇಬಲ್ ಟೆನ್ನಿಸ್‍ನಲ್ಲಿ ಪ್ರಥಮ ಸ್ಥಾನ, ಬಾಲಕಿಯರ ವಿಭಾಗದಲ್ಲಿ ಥ್ರೋಬಾಲ್ ನಲ್ಲಿ ಪ್ರಥಮ, ಬಾಲ್ ಬ್ಯಾಡ್‍ಮಿಂಟನ್ ಹಾಗೂ ಟೇಬಲ್ ಟೆನ್ನಿಸ್‍ನಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡು ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ಇವರಿಗೆ ದೈಹಿಕ ಶಿಕ್ಷಕ ವಿ.ಎನ್. ಪ್ರಮೋದ್ ಹಾಗೂ ರವಿಚಂದ್ರನ್ ತರಬೇತಿ ನೀಡಿದ್ದಾರೆ.
ಮಡಿಕೇರಿ: ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವೀರಾಜಪೇಟೆಯ ಸಾಂಸ್ಕøತಿಕ, ಕ್ರೀಡಾ ಮತ್ತು ವಿವಿಧ ಸಮಿತಿಗಳ ವೇದಿಕೆಯ ಉದ್ಘಾಟನಾ ಸಮಾರಂಭವನ್ನು ಮೀನುಪೇಟೆಯಲ್ಲಿರುವ ಕಾಲೇಜಿನ ಸಭಾಂಗಣದಲ್ಲಿ ನಡೆಸಲಾಯಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಸಾಹಿತಿ ಮೊಣ್ಣಂಡ ಶೋಭ ಸುಬ್ಬಯ್ಯ ಮತ್ತು ಅಂತರರಾಷ್ಟ್ರೀಯ ಹಾಕಿ ಆಟಗಾರ ಕರಿನೆರವಂಡ ಸೋಮಣ್ಣ ಆಗಮಿಸಿ ಉದ್ಘಾಟಿಸಿದರು. ವಾಣಿಜ್ಯಶಾಸ್ತ್ರ ಸಹಾಯಕ ಪ್ರಾಧ್ಯಾಪಕಿ ಪ್ರೊ. ಸುನಿತ, ಎನ್.ಎಸ್.ಎಸ್ ಪದಾಧಿಕಾರಿಗಳಿಗೆ ಎನ್.ಎಸ್.ಎಸ್. ಅಧಿಕಾರಿ ಪ್ರೊ. ರಘುರಾಜು ಪ್ರಮಾಣವಚನ ಭೋದಿಸಿದರು. ಮುಖ್ಯ ಅತಿಥಿಗಳು ವಿದ್ಯಾರ್ಥಿಗಳು ಪ್ರಾಸ್ತಾವಿಕ ನುಡಿಗಳನ್ನಾಡಿ ವಾರ್ಷಿಕ ಸಂಚಿಕೆ ಬಿಡುಗಡೆ ಮಾಡಿದರು. ಈ ಸಂದರ್ಭ ಸಂಪಾದಕಿ ಡಾ. ಡಿ.ಕೆ. ಉಷಾ ಉಪಸ್ಥಿತರಿದ್ದರು.
ರಾಜ್ಯಶಾಸ್ತ್ರ ಉಪನ್ಯಾಸಕ ವನಿತ್‍ಕುಮಾರ್ ಸ್ವಾಗತಿಸಿದರು. ಕಾಲೇಜಿನ ಪ್ರಾಂಶುಪಾಲ ಡಾ. ಟಿ.ಕೆ. ಬೋಪಯ್ಯ, ಕ್ರೀಡಾ ಸಮಿತಿ ಸಂಚಾಲಕಿ ಪ್ರೊ. ರಾಖಿ ಪೂವಣ್ಣ, ಸಾಂಸ್ಕøತಿಕ ಸಮಿತಿ ಸಂಚಾಲಕ ಪ್ರೊ. ಮಂಜುನಾಥ್ ಹಾಗೂ ವಿದ್ಯಾರ್ಥಿ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ವಂದನಾರ್ಪಣೆಯನ್ನು ಪ್ರೊ. ಗುರುಪ್ರಸಾಸಾದ್ ನೆರವೇರಿಸಿದರು.
ವೀರಾಜಪೇಟೆ: ವೀರಾಜಪೇಟೆ ಪಟ್ಟಣದ ಸೈಂಟ್ ಆನ್ಸ್ ಪದವಿ ಕಾಲೇಜು, ರಾಷ್ಟ್ರೀಯ ಸೇವಾ ಯೋಜನೆ ಹಾಗೂ ವೀರಾಜಪೇಟೆಯ ಅರಣ್ಯ ಇಲಾಖೆ ಮತ್ತು ಸೈಂಟ್ ಆನ್ಸ್ ಪದವಿಪೂರ್ವ ಕಾಲೇಜಿನ ಸ್ಟುಡೆಂಟ್ ಆಕ್ಟಿವಿಟಿ ಕ್ಲಬ್‍ನ ಸಂಯುಕ್ತ ಆಶ್ರಯದಲ್ಲಿ, ಕಾಲೇಜಿನ ಆವರಣದಲ್ಲಿ ಗಿಡಗಳನ್ನು ನೆಟ್ಟು ವನಮಹೋತ್ಸವ ಆಚರಿಸಲಾಯಿತು.
ವನಮಹೋತ್ಸವದ ಮಹತ್ವದ ಕುರಿತು ಸೈಂಟ್ ಆನ್ಸ್ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕ ರೆ.ಫಾ. ಮದಲೈಮುತ್ತು ಮಾತನಾಡಿ, ಮರವಿಲ್ಲದೆ ಭವಿಷ್ಯದಲ್ಲಿ ನರನಿರಲಾರ, ಹಾಗಾಗಿ ಪ್ರತಿಯೊಬ್ಬರೂ ಗಿಡ-ಮರಗಳನ್ನು ನೆಟ್ಟು ಪೋಷಿಸಬೇಕು ಎಂದು ನುಡಿದರು. ಈ ಸಂದರ್ಭ ಹಾಜರಿದ್ದ ವೀರಾಜಪೇಟೆಯ ಅರಣ್ಯ ವಲಯ ಅರಣ್ಯಾಧಿಕಾರಿ ಕೆ.ವಿ. ಶಿವರಾಮ್ ಪ್ರಸ್ತುತ ಕೊಡಗಿನ ಪರಿಸ್ಥಿತಿಯನ್ನು ವಿವರಿಸುತ್ತಾ ವಿದ್ಯಾರ್ಥಿಗಳಲ್ಲಿ ಪರಿಸರ ಜಾಗೃತಿ ಮೂಡಿಸಿದರು. ಕಾಲೇಜಿನ ಪ್ರಾಂಶುಪಾಲ ರೆ.ಫಾ. ರೋನಿ ರವಿಕುಮಾರ್, ರಾಷ್ಟ್ರೀಯ ಸೇವಾ ಯೋಜನೆಯ ಅಧಿಕಾರಿ ಹೆಚ್.ಆರ್. ಅರ್ಜುನ್, ಪ.ಪೂ. ವಿಭಾಗದ ಉಪನ್ಯಾಸಕ ಹೇಮಂತ್ ಹಾಗೂ ಎನ್.ಎಸ್.ಎಸ್. ಸ್ವಯಂಸೇವಾ ವಿದ್ಯಾರ್ಥಿಗಳು ಹಾಗೂ ಪ.ಪೂ. ವಿಭಾಗದ ಸ್ಯಾಕ್‍ನ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಮಡಿಕೇರಿ: ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಪೆರಾಜೆ ಜ್ಯೋತಿ ಪ್ರೌಢಶಾಲೆ ಇವರ ಸಂಯುಕ್ತ ಆಶ್ರಯದಲ್ಲಿ ಮಡಿಕೇರಿ ತಾಲೂಕುಮಟ್ಟದ ಅಂತರ ಪ್ರಾಥಮಿಕ ಹಾಗೂ ಪ್ರೌಢಶಾಲಾ ಕ್ರೀಡಾಕೂಟ ತಾ. 12 ರಿಂದ 14 ರವರೆಗೆ ಪೆರಾಜೆ ಜ್ಯೋತಿ ಪ್ರೌಢಶಾಲಾ ಕ್ರೀಡಾಂಗಣದಲ್ಲಿ ನಡೆಯಲಿದೆ.
ಶಾಸಕರಾದ ಕೆ.ಜಿ. ಬೋಪಯ್ಯ, ಎಂ.ಪಿ. ಅಪ್ಪಚ್ಚು ರಂಜನ್, ಎಂ.ಪಿ. ಸುನಿಲ್ ಸುಬ್ರಮಣಿ, ಶಾಂತೆಯಂಡ ವೀಣಾ ಅಚ್ಚಯ್ಯ, ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್, ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಪೆರಾಜೆ ಜ್ಯೋತಿ ವಿದ್ಯಾಸಂಘದ ಅಧ್ಯಕ್ಷ ಡಾ.ಎನ್.ಎ. ಜ್ಞಾನೇಶ್, ಪೆರಾಜೆ ಗ್ರಾ.ಪಂ. ಅಧ್ಯಕ್ಷೆ ಜಯಲಕ್ಷ್ಮೀ ಧರಣೀಧರ, ಸ್ಥಾಯಿ ಸಮಿತಿಯ ಅಧ್ಯಕ್ಷ ನೆಲ್ಲಚಂಡ ಕಿರಣ್ ಕಾರ್ಯಪ್ಪ, ಭಾಗಮಂಡಲ ಕ್ಷೇತ್ರ ಜಿ.ಪಂ. ಸದಸ್ಯೆ ಕವಿತ ಪ್ರಭಾಕರ್, ತಾ.ಪಂ. ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್, ತಾ.ಪಂ. ಉಪಾಧ್ಯಕ್ಷ ಬೊಳಿಯಾಡಿರ ಸಂತು ಸುಬ್ರಮಣಿ ಮೊದಲಾದವರು ಪಾಲ್ಗೊಳ್ಳಲಿದ್ದಾರೆ.