ಸಿದ್ದಾಪುರ, ಸೆ. 7: ನೆಲ್ಯಹುದಿಕೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಬೆಟ್ಟದಕಾಡುವಿನಲ್ಲಿ ಒತ್ತುವರಿಯಾಗಿದ್ದ ಜಾಗವನ್ನು ಜಿಲ್ಲಾ ಉಪ ವಿಭಾಗಾಧಿಕಾರಿ ಜವರೇ ಗೌಡ ನೇತೃತ್ವದಲ್ಲಿ ತೆರವು ಕಾರ್ಯಕ್ಕೆ ಚಾಲನೆ ನೀಡಲಾಯಿತು.ನದಿ ತೀರದಲ್ಲಿ ವಾಸಿಸುವ ಸಂತ್ರಸ್ತ ಕುಟುಂಬಗಳಿಗೆ ಶಾಶ್ವತ ಸೂರು ಒದಗಿಸಿ ಕೊಡುವ ನಿಟ್ಟಿನಲ್ಲಿ; ಸರಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದನ್ನು ತೆರವುಗೊಳಿಸಲು ಜಿಲ್ಲಾಡಳಿತ ಕ್ರಮ ಕೈಗೊಂಡಿದೆ.ಈ ಬಾರಿಯ ಮಹಾ ಮಳೆಗೆ ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ಅಪಾಯದ ಮಟ್ಟದಲ್ಲಿ ಹರಿದು ಪ್ರವಾಹಕ್ಕೆ ಸಿಲುಕಿ ನೆಲ್ಯಹುದಿಕೇರಿಯ ಬೆಟ್ಟದಕಾಡು, ಕುಂಬಾರಗುಂಡಿ, ಕರಡಿಗೋಡು, ಗುಹ್ಯ ಗ್ರಾಮದಲ್ಲಿ ನೂರಾರು ಮನೆಗಳು ಸಂಪೂರ್ಣವಾಗಿ ನೆಲಸಮಗೊಂಡಿತ್ತು. ಅಲ್ಲದೆ ನೂರಾರು ಮನೆಗಳು ಬಿರುಕು ಬಿಟ್ಟು ಬೀಳುವ ಸ್ಥಿತಿಯಲ್ಲಿದೆ. ಕಂಡುಕೇಳರಿಯದಷ್ಟು ನಷ್ಟ ಸಂಭವಿಸಿದೆ. ಈ ಹಿನ್ನೆಲೆಯಲ್ಲಿ ಮನೆ ಕಳೆದುಕೊಂಡ ಕುಟುಂಬಗಳು ಹಾಗೂ ಹಾನಿಗೊಳಗಾದ ಸಂತ್ರಸ್ತರು ಆಯಾ ಪಂಚಾಯತಿ ವ್ಯಾಪ್ತಿಯ ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಶಾಶ್ವತ ಸೂರು ಜಿಲ್ಲಾಡಳಿತ ಒದಗಿಸಿ ಕೊಡುವವರೆಗೂ ಪರಿಹಾರ ಕೇಂದ್ರಗಳನ್ನು ಬಿಟ್ಟು ತೆರಳುವದಿಲ್ಲವೆಂದು ಪಟ್ಟು ಹಿಡಿದಿದ್ದಾರೆ. ಅಲ್ಲದೆ ಮುಖ್ಯ ಮಂತ್ರಿಗಳು, ಸಚಿವರುಗಳು, ಮಾಜಿ ಮುಖ್ಯಮಂತ್ರಿಗಳು ಸಂತ್ರಸ್ತರ ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ; ತಮಗೊಂದು ಶಾಶ್ವತ ಸೂರು ಕಲ್ಪಿಸಿಕೊಡುವಂತೆ ಅಂಗಲಾಚಿದ್ದರು. ಅಲ್ಲದೆ ಗ್ರಾಮದಲ್ಲಿ ಒತ್ತುವರಿ ಭೂಮಿಗಳಿದ್ದು, ಅವುಗಳನ್ನು ತೆರವುಗೊಳಿಸಿ ಸುರಕ್ಷಿತ ಸ್ಥಳದಲ್ಲಿ ಸೂರು ಕಲ್ಪಿಸಿಕೊಡುವಂತೆ ಮನವಿ ಮಾಡಿಕೊಂಡಿದ್ದರು.

ಇದರಿಂದಾಗಿ ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರ ಆದೇಶದ ಮೇರೆಗೆ ಜಿಲ್ಲಾಡಳಿತವು ತ್ವರಿತವಾಗಿ ಸ್ಪಂದಿಸಿ ನೆಲ್ಯಹುದಿಕೇರಿಯ ಬೆಟ್ಟದಕಾಡು ಹಾಗೂ ಬರಡಿಯಲ್ಲಿ ಪೈಸಾರಿ ಜಾಗ ಒತ್ತುವರಿಯಾಗಿದ್ದನ್ನು ಗುರುತಿಸಿತ್ತು. ನಂತರ ತ್ವರಿತ ಗತಿಯಲ್ಲಿ ಸರ್ವೆ ಕಾರ್ಯ ಕೂಡ ಮುಕ್ತಾಯಗೊಳಿಸಿತ್ತು. ಕಳೆದ ಎರಡು ದಿನಗಳ ಹಿಂದೆ ಜಿಲ್ಲಾಡಳಿತ ಸಂತ್ರಸ್ತರಿಗೆ ಗುರುತಿಸಿದ ಪೈಸಾರಿ ಜಾಗವನ್ನು ಶಾಸಕ ಅಪ್ಪಚ್ಚು ರಂಜನ್, ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಎಸಿ ಜವರೇಗೌಡ ಪರಿಶೀಲನೆ ನಡೆಸಿದರು. ವಾಸಕ್ಕೆ ಯೋಗ್ಯವಾಗಿರುವ ಜಾಗವಾಗಿದೆ ಎಂದು ನಿರ್ಧರಿಸಿ ತುರ್ತಾಗಿ ತೆರವು ಕಾರ್ಯಕ್ಕೆÉ ಸಿದ್ಧತೆ ನಡೆಸಿದ್ದರು.

ಈ ನಿಟ್ಟಿನಲ್ಲಿ ಡಿಸಿ ಅವರು ಜಿಲ್ಲಾ ಉಪ ವಿಭಾಗಾಧಿಕಾರಿ ಜವರೇ ಗೌಡ ಅಧ್ಯಕ್ಷತೆಯಲ್ಲಿ ಕಂದಾಯ ಇಲಾಖೆ, ಪೊಲೀಸ್ ಇಲಾಖೆ, ಅರಣ್ಯ ಇಲಾಖೆ, ಗ್ರಾಮ ಪಂಚಾಯತಿ ತಂಡವೊಂದನ್ನು ರಚನೆ ಮಾಡಿ, ಸಂಪೂರ್ಣ ಜವಾಬ್ದಾರಿಯನ್ನು ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಶನಿವಾರ ಜಿಲ್ಲಾಡಳಿತ ಗುರುತಿಸಿದ್ದ ಬೆಟ್ಟದಕಾಡುವಿನ ಸರ್ವೆ ನಂ: 169/1 ರಲ್ಲಿ ಇರುವ ಒತ್ತುವರಿ ಭೂಮಿಯನ್ನು ಮೂರು ಜೆಸಿಬಿಗಳನ್ನು ಬಳಸಿ ತೆರವುಗೊಳಿಸಲು ಮುಂದಾದರು.

(ಮೊದಲ ಪುಟದಿಂದ) ಈ ಸಂದರ್ಭ ತೋಟದ ಮಾಲೀಕರು ಹಾಗೂ ಅವರ ಪರ ವಕೀಲರು ಭೇಟಿ ನೀಡಿ ತಮ್ಮ ತೋಟದ ಜಾಗದ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಅಲ್ಲದೆ ಕಾಫಿ ಗಿಡಗಳನ್ನು ಹಾನಿಗೊಳಿಸದಂತೆ ತಿಳಿಸಿದರು. ಜಿಲ್ಲಾಡಳಿತದ ವತಿಯಿಂದ ಅವರಿಗೆ ಸಮಜಾಯಿಷಿಕೆಯನ್ನು ನೀಡಿದ ಅಧಿಕಾರಿಗಳು ಕಾಫಿ ತೋಟದೊಳಗೆ ಒತ್ತುವರಿ ಜಾಗವಿದ್ದು, ಅದರ ದಾಖಲೆಗಳು ಸರಕಾರದ ಹೆಸರಿನಲ್ಲಿ ಇರುವದಾಗಿ ಮನವರಿಕೆ ಮಾಡಿ ಕೊಟ್ಟರು. ನಂತರ ಪೈಸಾರಿ ಜಾಗದ ಹದ್ದೊಬಸ್ತ್ ಗುರುತಿಸಲಾಯಿತು. ಈ ಜಾಗವನ್ನು 2014 ರಲ್ಲಿ ಕಂದಾಯ ಇಲಾಖೆಯು ವಶಪಡಿಸಿಕೊಂಡಿತ್ತು. ಮತ್ತೆ ನೆನೆಗುದ್ದಿಗೆ ಬಿದ್ದಿದ್ದ ಒತ್ತುವರಿ ಜಾಗವನ್ನು ಇದೀಗ ಮತ್ತೊಮ್ಮೆ ಜಿಲ್ಲಾಡಳಿತವು ವಶಕ್ಕೆ ಪಡೆದುಕೊಂಡು, ಸೋಮವಾರಪೇಟೆ ತಾಲೂಕು ಕಾರ್ಯ ನಿರ್ವಹಣಾಧಿಕಾರಿಗಳ ಸ್ವಾಧೀನಕ್ಕೆ ವರ್ಗಾಯಿಸಲು ಜಿಲ್ಲಾಡಳಿತ ನಿರ್ಧರಿಸಿದೆ ಎಂದು ತಿಳಿದು ಬಂದಿದೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ತೆರವು ಕಾರ್ಯಾಚರಣೆಯ ನೇತೃತ್ವದ ವಹಿಸಿದ ಉಪ ವಿಭಾಗಾಧಿಕಾರಿ ಜವರೇ ಗೌಡ, ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ರಚಿಸಿರುವ ತಂಡವು, ನೆಲ್ಯಹುದಿಕೇರಿ ಬೆಟ್ಟದಕಾಡುವಿನಲ್ಲಿರುವ 10.83 ಎಕರೆ ಜಾಗವನ್ನು ಗುರುತಿಸಿದ್ದು, ಇದನ್ನು ಜಿಲ್ಲಾಡಳಿತ ವಶಕ್ಕೆ ಪಡೆದುಕೊಂಡು ಪ್ರವಾಹ ಪೀಡಿತ ಪ್ರದೇಶದ ನಿವಾಸಿಗಳಿಗೆ ಶಾಶ್ವತ ಸೂರು ಒದಗಿಸಲು ಮುಂದಾಗಿದೆ. ಇತರ ಭಾಗದಲ್ಲಿರುವ ಒತ್ತುವರಿ ಭೂಮಿಯನ್ನು ವಶಕ್ಕೆ ಪಡೆದುಕೊಳ್ಳಲು ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳುವದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ 150 ಸಿಬ್ಬಂದಿ ಹಾಜರಿದ್ದರು.

ಸೋಮವಾರಪೇಟೆ ತಾಲೂಕು ತಹಶೀಲ್ದಾರ್ ಗೋವಿಂದರಾಜು, ಡಿ.ಡಿ.ಎಲ್.ಆರ್ ಶ್ರೀನಿವಾಸ್, ಉಪ ತಹಶೀಲ್ದಾರ್ ಚಿನ್ನಪ್ಪ, ಕಂದಾಯ ಪರಿವೀಕ್ಷಕ ಮಧುಸೂದನ್, ವಿನು, ಗ್ರಾಮ ಲೆಕ್ಕಿಗ ಸಂತೋಷ್, ಪಿಡಿಓ ಅನಿಲ್ ಕುಮಾರ್, ಜಿ.ಪಂ ಸದಸ್ಯೆ ಸುನಿತಾ ಮಂಜುನಾಥ್, ತಾ.ಪಂ ಸದಸ್ಯೆ ಸುಹದಾ, ಗ್ರಾ.ಪಂ ಅಧ್ಯಕ್ಷೆ ಪದ್ಮಾವತಿ, ಉಪಾಧ್ಯಕ್ಷೆ ಸಫಿಯಾ, ಗ್ರಾ.ಪಂ ಸದಸ್ಯರುಗಳಾದ ಸಾಬು ವರ್ಗೀಸ್, ಹಕೀಂ ಸೇರಿದಂತೆ ಮತ್ತಿತರರು ಇದ್ದರು.

ಸಿದ್ದಾಪುರ ಠಾಣಾಧಿಕಾರಿ ದಯಾನಂದ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.

-ಚಿತ್ರ ವರದಿ: ವಾಸು/ ಸುಧಿ