ಬೆಂಗಳೂರು, ಸೆ. 7: ಭಾರತೀಯ ಬಾಹ್ಯಾಕಾಶ ಸಂಸೊಧನಾ ಸಂಸ್ಥೆ (ಇಸ್ರೋ) ಚಂದ್ರಯಾನ -2 ಭಾಗವಾದ ವಿಕ್ರಂ ಲ್ಯಾಂಡರ್ ಕಡೇ ಕ್ಷಣದಲ್ಲಿ ಸಂವಹನವನ್ನು ಕಳೆದುಕೊಂಡಿದೆ. ಇದರಿಂದಾಗಿ ಚಂದ್ರನ ಮೇಲೆ ಯಶಸ್ವಿಯಾಗಿ ಇಳಿಯಬೇಕಾಗಿದ್ದ ವಿಕ್ರಂ ಸಾಫ್ಟ್ ಲ್ಯಾಂಡಿಂಗ್ ಆಗುವಲ್ಲಿ ತೊಡಕಾಗಿದ್ದು ವಿಜ್ಞಾನಿಗಳಿಗೆ ಭಾರೀ ನಿರಾಶೆಯಾಗಿದೆ. ಆದರೆ ಪ್ರಧಾನಿ ಮೋದಿ ಸೇರಿ ರಾಷ್ಟ್ರ ನಾಯಕರು ವಿಜ್ಞಾನಿಗಳಿಗೆ ಧೈರ್ಯ ತುಂಬಿದ್ದು ಇದು ವೈಫಲ್ಯವಲ್ಲ ಕೇವಲ ಪ್ರಯೋಗ ಮಾತ್ರವೆಂದು ಹೇಳಿ ದೇಶದ ಸಾಧನೆ ಬಗೆಗೆ ಹೆಮ್ಮೆಯ ಮಾತನ್ನಾಡಿದ್ದಾರೆ. ಈ ನಡುವೆ ಕೋಟ್ಯಂತರ ಭಾರತೀಯರಲ್ಲಿ ಹೆಮ್ಮೆಯ ಭಾವನೆ ಮೂಡಿಸಿದ್ದ ಚಂದ್ರಯಾನ 2 ಯೋಜನೆಯ ವಿಕ್ರಮ್ ಲ್ಯಾಂಡರ್ ಅಪಘಾತಕ್ಕೀಡಾಗಿಲ್ಲ. ವಿಕ್ರಮ್ ಲ್ಯಾಂಡರ್ ಮತ್ತು ಚಂದ್ರಯಾನ-2 ಆರ್ಬಿಟರ್ ನಡುವಿನ ಸಂಪರ್ಕ ಇನ್ನೂ ಜೀವಂತವಾಗಿದೆ ಎಂದು ಹೇಳಲಾಗಿದೆ. ಈ ಕುರಿತಂತೆ ಸ್ವತಃ ಇಸ್ರೋ ಮಾಜಿ ನಿರ್ದೇಶಕ ಡಿ. ಸಸಿಕುಮಾರ್ ಅವರು ಅಚ್ಚರಿ ಹೇಳಿಕೆ ನೀಡಿದ್ದು, 'ಚಂದ್ರಯಾನ-2 ಸಂಪೂರ್ಣವಾಗಿ ಗುರಿ ಮುಟ್ಟಿರದೇ ಇರಬಹುದು. ಆದರೆ ವಿಫಲವಾಗಿಲ್ಲ. ಚಂದ್ರನಿಂದ 2.1 ಕಿ.ಮೀ. ದೂರದಲ್ಲಿ ಇದ್ದಾಗ ವಿಕ್ರಂ ಲ್ಯಾಂಡರ್ ನೆಟ್ವರ್ಕ್ ಸಂಪರ್ಕ ಕಡಿತಗೊಂಡಿದೆ. ಆದರೆ, ಇದರಿಂದ ನಿರಾಶೆಗೊಳ್ಳಬೇಕಿಲ್ಲ ಎಂದು ಇಸ್ರೋ ಮಾಜಿ ನಿರ್ದೇಶಕ
ಡಿ. ಸಸಿಕುಮಾರ್ ಹೇಳಿದ್ದಾರೆ. ಚಂದ್ರಯಾನ-2ಗೆ ಹಿನ್ನಡೆಯುಂಟಾದ ಹಿನ್ನೆಲೆಯಲ್ಲಿ ಭಾವುಕರಾಗಿದ್ದ ಇಸ್ರೋ ಮುಖ್ಯಸ್ಥ ಶಿವನ್ ಅವರನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಆಲಂಗಿಸಿ, ಸಂತೈಸಿದ್ದಾರೆ.