ಸೋಮವಾರಪೇಟೆ, ಸೆ. 7: ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಲವಷ್ಟು ಕಾರ್ಮಿಕರ ಬಿಪಿಎಲ್ ಪಡಿತರ ಚೀಟಿ ರದ್ದಾಗಿದ್ದು, ಈ ಬಗ್ಗೆ ಪ್ರಶ್ನಿಸಿದರೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು.

ಸಮೀಪದ ಐಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಡಿ.ಎಂ. ರಮೇಶ್ ಅಧ್ಯಕ್ಷತೆಯಲ್ಲಿ ಅಲ್ಲಿನ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ನಡೆದ ಗ್ರಾಮ ಸಭೆಯಲ್ಲಿ ಆಹಾರ ಇಲಾಖೆಯ ಬಗ್ಗೆ ತೀವ್ರ ಚರ್ಚೆ ನಡೆಯಿತು. ಆದರೆ ಸಭೆಯಲ್ಲಿ ಹಾಜರಿದ್ದು, ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸಬೇಕಾದ ಅಧಿಕಾರಿಯೇ ಗೈರು ಹಾಜರಾಗಿದ್ದರಿಂದ ಸಾರ್ವಜನಿಕರು ಇನ್ನಷ್ಟು ಅಸಮಾಧಾನ ವ್ಯಕ್ತಪಡಿಸಿದರು. ಹಲವು ಗ್ರಾಮಸ್ಥರ ಹಸಿರು ಪಡಿತರ ಚೀಟಿ ರದ್ದಾಗಿದೆ. ಯಾವದೇ ಸವಲತ್ತುಗಳು ಸರಿಯಾಗಿ ಸಿಗುತ್ತಿಲ್ಲ. ಅಧಿಕಾರಿ ಸಭೆಗಳಿಗೆ ಸರಿಯಾಗಿ ಬರುತ್ತಿಲ್ಲ ಎಂದು ಗ್ರಾಮಸ್ಥರು ದೂರಿದರು. ಈ ಸಂದರ್ಭ ಜಿಲ್ಲಾ ಪಂಚಾಯಿತಿ ಸದಸ್ಯೆ ಪೂರ್ಣಿಮಾ ಗೋಪಾಲ್ ಅಧಿಕಾರಿಗೆ ಕರೆಮಾಡಿದಾಗಲೂ ಸಮರ್ಪಕ ಉತ್ತರ ಲಭಿಸಲಿಲ್ಲ.

ಈ ಹಿನ್ನೆಲೆ ಗ್ರಾಮಸ್ಥರು ಹಾಗೂ ಸದಸ್ಯರು ಅಧಿಕಾರಿ ವಿರುದ್ಧ ಸಭೆಯಲ್ಲೇ ಪ್ರತಿಭಟನೆ ನಡೆಸಿದರು. ನಂತರ ಸಭೆಗೆ ಆಗಮಿಸಿದ ಆಹಾರ ಇಲಾಖಾಧಿಕಾರಿ ನಂಜಯ್ಯ ಅವರನ್ನು ತೀವ್ರವಾಗಿ ತರಾಟೆಗೆತ್ತಿಕೊಳ್ಳಲಾಯಿತು. ನಂತರ ಅಧಿಕಾರಿ ಸಭೆಯ ಕ್ಷಮೆ ಕೇಳಿದ ನಂತರ ಸಭೆ ಮುಂದುವರೆ ಯಿತು. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಡಾನೆಗಳ ಉಪಟಳ ಹೆಚಾಗಿದ್ದು, ಇದಕ್ಕೆ ಶಾಶ್ವತ ತಡೆ ನೀಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದರು. ಮುಂದಿನ ದಿನಗಳಲ್ಲಿ ಆನೆ ಹಾವಳಿ ತಡೆಯಲು ರೈಲ್ವೆ ಕಂಬಿ ಬಳಸಿ ತಡಗೋಡೆ ನಿರ್ಮಿಸುವ ಯೋಜನೆ ಸರ್ಕಾರ ಮಾಡಲಿದೆ ಎಂದು ಅರಣ್ಯಾಧಿಕಾರಿ ಸತೀಶ್ ತಿಳಿಸಿದರು. ಕಾಜೂರು ಗ್ರಾಮದ ಮಹೇಶ್ ಮಾತನಾಡಿ, ಆನೆಗಳಿಗೆ ಸೋಲಾರ್ ಬೇಲಿ ನಿರ್ಮಿಸಿದ್ದು, ಈಗ ಕಿತ್ತು ಬಂದಿರುವದರಿಂದ ಈ ಸ್ಥಳದಲ್ಲಿ ಸಾಕು ದನಗಳ ಹಾವಳಿ ಹೆಚ್ಚಾಗಿದೆ. ಎಂದು ದೂರಿದರು. ಮುಂದಿನ ದಿನಗಳಲ್ಲಿ ದನ ಸಾಕುವವರು ಹೊರಗೆ ಬಿಟ್ಟು ಸಾಕಬಾರದು. ಅವುಗಳಿಂದ ನಷ್ಟವಾದರೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವದು ಎಂದು ಸಭೆ ನಿರ್ಣಯ ಕೈಗೊಂಡಿತು.

ಆಗಸ್ಟ್ ತಿಂಗಳಿನಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ಆಡಳಿತ ಮಂಡಳಿ ದೂರಿನ ಮೇರೆಗೆ ಕಾಜೂರಿನಲ್ಲಿ ಅಪಾಯದ ಸ್ಥಿತಿಯಲ್ಲಿರುವ ಮರ ತೆರವುಗೊಳಿಸುವಂತೆ ಮನೆ ಮಾಲೀಕನಿಗೆ ತಿಳಿಸಿದ ಸಂದರ್ಭ, ಅವಾಚ್ಯವಾಗಿ ನಿಂದಿಸಿ ಹಲ್ಲೆಗೆ ಮುಂದಾದ ಘಟನೆ ನಡೆದಿತ್ತು. ಇದಕ್ಕೆ ಸಂಬಂಧಿಸಿದಂತೆ ದೂರು ದಾಖಲಾದರೂ, ಆರೋಪಿಯನ್ನು ಪೊಲೀಸ್ ಠಾಣೆಗೆ ಕರೆತಂದು ಬಿಟ್ಟು ಕಳಿಸಿದ್ದಾರೆ. ಪಂಚಾಯಿತಿ ಸದಸ್ಯರಿಗೆ ಅಗೌರವ ತೋರಿದ್ದಾರೆ ಎಂದು ಕೆಲ ಸದಸ್ಯರು ಸಭೆಯಲ್ಲಿ ಹೇಳಿದರು.

ಕೂಡಲೇ ಆರೋಪಿಯನ್ನು ಬಂಧಿಸಿ ಕ್ರಮ ಜರುಗಿಸುವಂತೆ ಸಭೆಯಲ್ಲಿ ಆಗ್ರಹಿಸಲಾಯಿತು. ಈ ಸಂದರ್ಭ ಸಭೆಯಲ್ಲಿ ಉಪಸ್ಥಿತರಿದ್ದ ಪೊಲೀಸ್ ಸಿಬ್ಬಂದಿ ಮೇಲಧಿಕಾರಿಗಳ ಗಮನಕ್ಕೆ ತರುವದಾಗಿ ತಿಳಿಸಿದರು.

ಕೆಲ ದಿನಗಳ ಹಿಂದೆ ಸಜ್ಜಳ್ಳಿ ಹಾಡಿಯ ನಿವಾಸಿಯೊಬ್ಬರ ಮಗು ಮೈಸೂರಿನ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ಮೃತಪಟ್ಟಿದ್ದು, ಮೃತದೇಹವನ್ನು ಗ್ರಾಮಕ್ಕೆ ತರುವ ಸಂದರ್ಭ ಅಂಬುಲೆನ್ಸ್ ಚಾಲಕ ಮುಖ್ಯ ರಸ್ತೆಯಲ್ಲಿಯೇ ಇಳಿಸಿ ತೆರಳಿದ್ದಾರೆ. ಕೂಡಲೇ ಸೂಕ್ತ ತನಿಖೆ ಮಾಡಿ ಚಾಲಕನ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಸದಸ್ಯ ಕೆ.ಪಿ. ದಿನೇಶ್ ಆಗ್ರಹಿಸಿದರು.

ಭತ್ತದ ಗದ್ದೆಗಳು ಕಾಫಿ ತೋಟಗಳಾಗಿ ಪರಿವರ್ತನೆ ಯಾಗುತ್ತಿರುವದರಿಂದ ಭತ್ತದ ಕೃಷಿ ಮಾಡಲು ಸಾಧ್ಯವಾಗುತ್ತಿಲ್ಲ. ಇದನ್ನು ಕಂದಾಯ ಇಲಾಖೆಯ ಗಮನಕ್ಕೆ ತಂದರೂ ಯಾವದೇ ಪ್ರಯೋಜನ ವಾಗುತ್ತಿಲ್ಲ ಎಂದು ಸೋಮೇಶ್ ಅಸಹಾಯಕತೆ ವ್ಯಕ್ತಪಡಿಸಿದರು.

ಈ ಸಂದರ್ಭ ಕಂದಾಯ ಇಲಾಖೆಯ ಅಧಿಕಾರಿ ಮಾತನಾಡಿ, ಗದ್ದೆಯನ್ನು ಯಾವದೇ ಕಾರಣಕ್ಕೂ ತೋಟಗಳನ್ನಾಗಿ ಪರಿವರ್ತನೆ ಮಾಡುವಂತ್ತಿಲ್ಲ. ಹಾಗೇನಾದರೂ ಮಾಡಿದಲ್ಲಿ ಗದ್ದೆಯ ಮಾಲೀಕರ ಮೇಲೆ ಕ್ರಮ ತೆಗೆದುಕೊಳ್ಳಲಾಗುವದು ಎಂದು ಕಂದಾಯ ಇಲಾಖಾಧಿಕಾರಿ ತಮ್ಮಯ್ಯ ಸಭೆಗೆ ತಿಳಿಸಿದರು.

ಸಭೆಯಲ್ಲಿ ಉಪಾಧ್ಯಕ್ಷೆ ಕೆ.ಪಿ. ಶೋಭಾ, ತಾಲೂಕು ಪಂಚಾಯಿತಿ ಸದಸ್ಯೆ ಸಬಿತಾ ಚನ್ನಕೇಶವ, ನೋಡಲ್ ಅಧಿಕಾರಿ ಶಶಿಧರ್, ಪಿಡಿಒ ಎಚ್.ಜಿ. ಯಾಧವ್, ಕಾರ್ಯದರ್ಶಿ ಲಿಂಗರಾಜು ಸೇರಿದಂತೆ ಪಂಚಾಯಿತಿ ಸದಸ್ಯರು, ವಿವಿಧ ಇಲಾಖಾಧಿಕಾರಿ ಗಳು ಉಪಸ್ಥಿತರಿದ್ದರು.