ಮಡಿಕೇರಿ, ಸೆ. 6: ಐತಿಹಾಸಿಕ ಮಡಿಕೇರಿ ದಸರಾಕ್ಕೆ ಸಂಬಂಧಿಸಿದಂತೆ ಬೈಲಾ ಹಾಗೂ ಇತರ ವ್ಯವಸ್ಥೆಗಳಲ್ಲಿ ಬದಲಾವಣೆ ತರುವ ಭರವಸೆಯನ್ನು ಜಿಲ್ಲಾಧಿಕಾರಿಗಳು ನೀಡಿದ ಹಿನ್ನೆಲೆಯಲ್ಲಿ ಕಾರ್ಯಾಧ್ಯಕ್ಷ ಚುನಾವಣೆಯಿಂದ ಹಿರಿಯ ಪತ್ರಕರ್ತ ಜಿ. ಚಿದ್ವಿಲಾಸ್ ಅವರು, ಹಿಂದೆ ಸರಿದ ಪರಿಣಾಮ, ದಶಮಂಟಪ ಸಮಿತಿ ಪರವಾಗಿ ಆರಿಸಲ್ಪಟ್ಟಿದ್ದ ಅಭ್ಯರ್ಥಿ ರಾಬಿನ್ ದೇವಯ್ಯ ಅವರು ಕಾರ್ಯಾಧ್ಯಕ್ಷರಾಗಿ ಅವಿರೋಧ ಆಯ್ಕೆಗೊಂಡರು.ತಾ. 4 ರಂದು ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಜಿಲ್ಲಾಧಿಕಾರಿ, ನಗರಸಭಾ ಆಡಳಿತಾಧಿಕಾರಿ ಹಾಗೂ ದಸರಾ ಸಮಿತಿ ಅಧ್ಯಕ್ಷರಾಗಿರುವ ಅನೀಸ್ ಕಣ್ಮಣಿ ಜಾಯ್ ಅವರ ಅಧ್ಯಕ್ಷತೆಯಲ್ಲಿ ದಸರಾ ಪೂರ್ವಭಾವಿ ಸಭೆ ನಡೆದಿತ್ತು. ಆ ಸಂದರ್ಭ ದಶಮಂಟಪ ಸಮಿತಿಯಿಂದ ಆಯ್ಕೆಗೊಂಡ ಅಭ್ಯರ್ಥಿಯೇ ಕಾರ್ಯಾಧ್ಯಕ್ಷರಾಗಬೇಕೆಂದು ಒತ್ತಾಸೆ ಹಲವರಿಂದ ಬಂದಿತ್ತು. ಬೈಲಾ ನಿಯಮದಲ್ಲಿ ಮಹಾಸಭೆಯಲ್ಲಿ ಕಾರ್ಯಾಧ್ಯಕ್ಷರ ಆಯ್ಕೆಯಾಗಬೇಕಿದ್ದು,; ಬೇರೆ ಸಂದರ್ಭದಲ್ಲಿ ಅಲ್ಲವೆಂದು ಮಾಜಿ ನಗರಸಭಾ ಅಧ್ಯಕ್ಷ ಹೆಚ್.ಎಂ. ನಂದಕುಮಾರ್ ಹಾಗೂ ಮೂಡಾ ಮಾಜಿ ಅಧ್ಯಕ್ಷ ಎಸ್.ಐ. ಮುನೀರ್ ಅಹ್ಮದ್ ಅವರುಗಳು ಜಿಲ್ಲಾಧಿಕಾರಿ ಗಮನಕ್ಕೆ ತಂದಿದ್ದರು.

ಚುನಾವಣೆ ನಡೆಯುವದಾದರೆ ಜಿ. ಚಿದ್ವಿಲಾಸ್ ಅವರ ಹೆಸರನ್ನು ತಾನು ಸೂಚಿಸುವದಾಗಿ ಮುನೀರ್ ಅಹ್ಮದ್ ಅವರು ಘೋಷಿಸಿದಾಗ; ಬೈಲಾ ಪ್ರಕಾರ ಚುನಾವಣಾ ಪ್ರಕ್ರಿಯೆ ಹೇಗೆ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ಪಡೆದರು. ಬೈಲಾಪುಸ್ತಕದಲ್ಲಿ ಆ ಬಗ್ಗೆ ಸ್ಪಷ್ಟ ಉಲ್ಲೇಖ ಇಲ್ಲದಿರುವದರಿಂದ; ಬೈಲಾ ಬದಲಾಗಬೇಕೆಂದು ಚಿದ್ವಿಲಾಸ್ ಅವರು, ಹೊಸ ವ್ಯವಸ್ಥೆಗಾಗಿ ಮಾತ್ರ ತಮ್ಮ ಒತ್ತಾಯ ಇರುವದಾಗಿ ಸ್ಪಷ್ಟಪಡಿಸಿದರು. ಕಾರ್ಯಾಧ್ಯಕ್ಷ ಸ್ಥಾನದ ಗೊಂದಲ ನಿವಾರಣೆಯಾಗದ ಹಿನ್ನೆಲೆ ಜಿಲ್ಲಾಧಿಕಾರಿಗಳು ಸಭೆಯನ್ನು ತಾ.6ಕ್ಕೆ ಮುಂದೂಡಿದ್ದರು.

ನಿನ್ನೆ ದಿನ ನಗರಸಭಾ ಆಯುಕ್ತರಿಗೆ ಜಿಲ್ಲಾಧಿಕಾರಿಗಳು ಸಂದೇಶ ರವಾನಿಸಿ; ಸಮಸ್ಯೆ ಇತ್ಯರ್ಥವಾಗದಿದ್ದಲ್ಲಿ ಕಾರ್ಯಾಧ್ಯಕ್ಷ ಸ್ಥಾನದ ಬದಲಿಗೆ; ಅಧಿಕಾರಿ ಯೊಬ್ಬರನ್ನು ನೇಮಕ ಮಾಡಿಕೊಳ್ಳಲು ತಾನು ತೀರ್ಮಾನಿಸಿದ್ದು; ಸಂಬಂಧಿಸಿ ದವರಿಗೆ ಮಾಹಿತಿ ರವಾನಿಸುವಂತೆ ಸೂಚಿಸಿದ್ದರು. ಈ ಬೆಳವಣಿಗೆಯಲ್ಲಿ ದಶಮಂಟಪ ಸಮಿತಿ ಸದಸ್ಯರು, ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಅವರನ್ನು ಭೇಟಿ ಮಾಡಿ ಬೆಳವಣಿಗೆ ಬಗ್ಗೆ ವಿವರಿಸಿದರಾದರೂ; ಸುನಿಲ್ ಅವರು, ತನಗೆ ಈ ಹಿಂದೆ ದಸರಾ ವ್ಯವಸ್ಥೆಯಿಂದ ನೋವು ಉಂಟಾಗಿದ್ದು; ತಾನು ಮಧ್ಯಪ್ರವೇಶಿಸುವದಿಲ್ಲವೆಂದು ಸ್ಪಷ್ಟಪಡಿಸಿದ್ದರು. ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿದ್ದ ಜಿ. ಚಿದ್ವಿಲಾಸ್ ಅವರು, ತಾನು ಹಿಂದೆ ಪ್ರತಿಪಾದಿಸಿದಂತೆ ಬೈಲಾ ತಿದ್ದುಪಡಿ ಬಗ್ಗೆ; ತಾವು ಕ್ರಮ ವಹಿಸುವದಾದರೆ, ತಾನು ಸ್ಪರ್ಧೆಯಿಂದ ಹಿಂದೆ ಸರಿಯುವದಾಗಿ ತಮ್ಮ ನಿಲುವು ವ್ಯಕ್ತಪಡಿಸಿದರು.

(ಮೊದಲ ಪುಟದಿಂದ) ಮಧ್ಯಾಹ್ನ 3 ಗಂಟೆಗೆ ಕಾವೇರಿ ಕಲಾಕ್ಷೇತ್ರದಲ್ಲಿ ಇಂದು ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳ ಸಮ್ಮುಖದಲ್ಲಿ ಮುಂದುವರಿದ ಸಭೆ ನಡೆಯಿತು. ಆರಂಭದಲ್ಲಿ ವಿಷಯ ಪ್ರಸ್ತಾಪಿಸಿದ ಪೌರಾಯುಕ್ತ ಎಂ.ಎಲ್. ರಮೇಶ್, ಕಾರ್ಯಾಧ್ಯಕ್ಷರ ಗೊಂದಲ ನಿವಾರಣೆ ಬಳಿಕ ಇತರ ವಿಷಯಗಳ ಬಗ್ಗೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಚರ್ಚೆ ನಡೆಯುವದಾಗಿ ತಿಳಿಸಿದರು.

ಈ ಸಂದರ್ಭ ಮಾತನಾಡಿದ ಜಿಲ್ಲಾಧಿಕಾರಿಗಳು, ಕಾರ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಇಬ್ಬರ ಅಭಿಪ್ರಾಯ ತಿಳಿಸುವಂತೆ ಸೂಚಿಸಿದರು. ಆ ವೇಳೆ ಜಿ. ಚಿದ್ವಿಲಾಸ್ ಅವರು ಮಾತನಾಡಿ, ಮುಂದಿನ ನವೆಂಬರ್ ಒಳಗೆ ನೂತನ ಬೈಲಾ ರಚನೆ ಮಾಡುವ ಬಗ್ಗೆ ಜಿಲ್ಲಾಧಿಕಾರಿಗಳಿಂದ ಭರವಸೆ ಸಿಕ್ಕಿದ್ದು, ತನ್ನ ಆಕಾಂಕ್ಷೆ ಈಡೇರಿರುವದರಿಂದ ತಾನು ಸ್ಪರ್ಧೆಯಲ್ಲಿ ಮುಂದುವರಿಯದೆ ಇರಲು ತೀರ್ಮಾನಿಸಿರುವದಾಗಿ ಘೋಷಿಸಿದರು. ಮುಂದಿನ ದಸರಾ ಎಲ್ಲರ ಸಹಕಾರದಿಂದ ಉತ್ತಮ ರೀತಿಯಲ್ಲಿ ನಡೆಯುವಂತಾಗಲಿ ಎಂದು ಹಾರೈಸಿದರು. ಇವರ ನಿರ್ಧಾರದಿಂದಾಗಿ, ರಾಬಿನ್ ದೇವಯ್ಯ ಅವರು ಕಾರ್ಯಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಗೊಂಡರು.

ನಂತರ ಮಾತನಾಡಿದ ಅವರು, ಈ ಹಿಂದೆ ತನ್ನ ಅವಧಿಯಲ್ಲಿ ಆಗಿದ್ದ ಅಭಿವೃದ್ಧಿ ಕೆಲಸಗಳ ಬಗ್ಗೆ ಪ್ರಸ್ತಾಪಿಸಿದರಲ್ಲದೆ; ಒಂದು ವರ್ಷ ರೂ. 5 ಲಕ್ಷ ಉಳಿಸಿದ್ದನ್ನು ಸ್ಮರಿಸಿಕೊಂಡರು. ದಸರಾ ಸಮಿತಿಯಿಂದ ಹಣಕಾಸು ದುರುಪಯೋಗವಾಗುತ್ತಿದೆ ಎಂಬ ತಪ್ಪು ಸಂದೇಹ ಕೆಲವರಲ್ಲಿದ್ದು, ಅಂತಹ ಯಾವದೇ ಪ್ರಸಂಗಗಳು ನಡೆದಿಲ್ಲವೆಂದು ಸಮರ್ಥನೆ ನೀಡಿದರು.

ಗೊಂದಲ ನಿವಾರಣೆಯಾದ ಬಗ್ಗೆ ಹರ್ಷವ್ಯಕ್ತಪಡಿಸಿ ಮಾತನಾಡಿದ ದಸರಾ ಸಮಿತಿ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿ, ಬೈಲಾ ತಿದ್ದುಪಡಿ ಬಗ್ಗೆ ಜಿ. ಚಿದ್ವಿಲಾಸ್ ಅವರ ಅಧ್ಯಕ್ಷತೆಯಲ್ಲಿ ಈಗಾಗಲೇ ಇರುವ ಸಮಿತಿಗೆ ಹಲವು ಅಧಿಕಾರಿಗಳು ಹಾಗೂ ನಾಲ್ಕೈದು ನಾಗರಿಕ ಪ್ರತಿನಿಧಿಗಳನ್ನು ಸೇರಿಸಿ ಮುಂದಿನ ನವೆಂಬರ್ - ಡಿಸೆಂಬರ್ ತಿಂಗಳೊಳಗೆ ಹೊಸ ರೂಪ ನೀಡುವದಾಗಿ ಪ್ರಕಟಿಸಿದರು.

ದಸರಾ ಹಣಕಾಸು ನಿರ್ವಹಣೆಗೆ ನಾಲ್ಕು ಮಂದಿ ಅಧಿಕಾರಿಗಳನ್ನು ನೇಮಿಸಲಾಗುವದು ಎಂದು ಪ್ರಕಟಿಸಿದರು. ದಸರಾ ಕಾರ್ಯಕ್ರಮ ಕೇವಲ ಅಧಿಕಾರಿಗಳಿಂದ ನಡೆಸುವಂತಾಗಬಾರದು; ಜನತೆಯ ಪಾಲ್ಗೊಳ್ಳುವಿಕೆಯೂ ಮುಖ್ಯವಾಗಿರುವದರಿಂದ, ಜತೆಗೂಡಿ ದಸರಾ ಆಚರಿಸೋಣ ಎಂದು ಕರೆ ನೀಡಿದರು. ಆ ಬಳಿಕ ದಸರಾ ಸಮಿತಿ ಪದಾಧಿಕಾರಿಗಳ ಆಯ್ಕೆಪ್ರಕ್ರಿಯೆ ನಡೆಯಿತು.