ಕೂಡಿಗೆ, ಸೆ. 5: ಹೆಬ್ಬಾಲೆ ಗ್ರಾಮ ಪಂಚಾಯಿತಿಯಲ್ಲಿ ಜಲಶಕ್ತಿ- ಜಲಾಮೃತ ಅಭಿಯಾನದ ವಿಶೇಷ ಗ್ರಾಮಸಭೆ ಪಂಚಾಯಿತಿ ಅಧ್ಯಕ್ಷೆ ಲತಾ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಜಲ ಸಂರಕ್ಷಣೆಯ ಬಗ್ಗೆ ವಿಶೇಷ ಮಾಹಿತಿ, ಸರ್ಕಾರದ ಆದೇಶ ಮತ್ತು ವಿಶೇಷ ಉದ್ದೇಶವನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಜಲಮೂಲಗಳ ಸ್ಥಿತಿಗತಿ, ಅರಣ್ಯೀಕರಣ, ಕೊಳವೆ ಬಾವಿ ಮತ್ತು ಮಳೆ ನೀರು ಕೊಯ್ಲು ಯೋಜನೆಗಳನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಚರ್ಚೆ ನಡೆಸಲಾಯಿತು. ಗ್ರಾಮದ ಜಲಮೂಲವನ್ನು ಹೆಚ್ಚಿಸುವ ಉದ್ದೇಶ, ನೀರಿನ ಸಂರಕ್ಷಣೆ, ನೀರನ್ನು ತೆರೆದ ಬಾವಿಗಳಲ್ಲಿ ಸಂರಕ್ಷಿಸುವ ಬಗ್ಗೆ ಚರ್ಚಿಸಲಾಯಿತು. ಇವುಗಳಿಗೆ ಸಂಬಂಧಿಸಿದಂತೆ ವಿಶೇಷ ಮಾಹಿತಿಗಳನ್ನು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಕೇಶ್ ಸಭೆಗೆ ತಿಳಿಸಿದರು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಪದ್ಮ ಮತ್ತು ಸದಸ್ಯರು ಇದ್ದರು.