ಮಡಿಕೇರಿ, ಸೆ. 4: ತಲಕಾವೇರಿ ತಪ್ಪಲಿನಲ್ಲೇ ಸರ್ಕಾರಿ ಅಧಿಕಾರಿಯೊಬ್ಬ ಬೆಟ್ಟವನ್ನು ಮೈದಾನ ಮಾಡಿ ರೆಸಾರ್ಟ್ ನಿರ್ಮಾಣಕ್ಕೆ ಸಿದ್ಧತೆ ನಡೆಸಿದ ಪ್ರಕರಣ ಇನ್ನೂ ಹಸಿರಿರುವಾಗಲೇ ಅಂತಹದ್ದೇ ಮತ್ತೊಂದು ಪ್ರಮಾದ ಮಡಿಕೇರಿ ಸಮೀಪದ ಹಮ್ಮಿಯಾಲ ಗ್ರಾಮದಲ್ಲಿ ನಡೆದಿದೆ. ಗಾಳಿಬೀಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಮ್ಮಿಯಾಲ ಗ್ರಾಮದ ಬೆಟ್ಟದ ತುದಿಯಲ್ಲಿ ಅಕ್ರಮ ರೆಸಾರ್ಟ್ ಒಂದು ತಲೆ ಎತ್ತಿದೆ. ಎಂ. ಅಕ್ಕಮ್ಮ ಮತ್ತು ಮುದ್ದಪ್ಪ ಎಂಬವರಿಗೆ ಸೇರಿದ ಜಾಗವನ್ನು ಬೆಂಗಳೂರಿನ ಪ್ರೀತ್ ಕಾವೇರಿ ಎಂಬವರು ‘ಪವರ್ ಆಫ್ ಅಟಾರ್ನಿ ಪಡೆದಿದ್ದು, ಇಲ್ಲಿ ಒರಿಸ್ಸಾದ ಪುರಿ ಜಿಲ್ಲೆಯ ಉದ್ಯಮಿ ಧೀರೇಶ್ ಕುಮಾರ್ ಎಂಬವರು ಅಕ್ರಮವಾಗಿ ರೆಸಾರ್ಟ್ ನಿರ್ಮಾಣ ಮಾಡಿರುವದು ತಡವಾಗಿ ಪತ್ತೆಯಾಗಿದೆ. ಇಲ್ಲಿ ಒಟ್ಟು ಏಳು ಕಟ್ಟಡಗಳಿದ್ದು ಇವುಗಳಲ್ಲಿ ಎರಡನ್ನು ಗುಡ್ಡ ಕೊರೆದು ಗುಹೆಯೊಳಗಿನ ಕಾಟೇಜ್‍ಗಳನ್ನಾಗಿ ಪರಿವರ್ತಿ ಸಲಾಗಿದೆ.ಪರಿಸರ ಸೂಕ್ಷ್ಮ ವಲಯದಲ್ಲಿ ರೆಸಾರ್ಟ್ ನಿರ್ಮಾಣ: ರೆಸಾರ್ಟ್ ನಿರ್ಮಾಣ ಮಾಡಲಾಗಿರುವ ಬೆಟ್ಟವನ್ನು ತಲಪುವದೇ ಒಂದು ಮಹಾ ಸಾಹಸ. ಈ ಸ್ಥಳವನ್ನು ತಲಪಬೇಕೆಂದರೆ ಸುಮಾರು ನಾಲ್ಕು ಕಿಲೋ ಮೀಟರ್ ದುರ್ಗಮ ಬೆಟ್ಟವನ್ನು ಹತ್ತಬೇಕು. ಕಾಡು ಮತ್ತು ಬೆಟ್ಟವನ್ನು ಕಡಿದು ರಸ್ತೆ ಮಾಡಲಾಗಿದೆಯಾದರೂ ಜೀಪ್‍ಗಳು ಕೂಡ ಬಹಳ ಕಷ್ಟದಲ್ಲಿ ಇಲ್ಲಿಗೆ ತೆರಳುತ್ತವೆ. ಆದರೆ ಮೂರು ಕಿಲೋ ಮೀಟರ್ ಮೊದಲೇ ರಸ್ತೆಗೆ ಕಬ್ಬಿಣದ ಸರಪಳಿಯ ಗೇಟ್ ನಿರ್ಮಾಣ ಮಾಡಲಾಗಿದ್ದು, ವಾಹನ ಪ್ರವೇಶಕ್ಕೆ ನಿರ್ಬಂಧ ವಿಧಿಸಿದ್ದಾರೆ. ಹಾಗಾಗಿ ನಡೆದೇ ಸಾಗಬೇಕು. ಒಮ್ಮೆ ಬೆಟ್ಟದ ತುದಿ ತಲಪಿದರೆ ಅಲ್ಲಿ ಸುಮಾರು ಏಳೆಂಟು ಕಟ್ಟಡಗಳು ಕಂಡು ಬರುತ್ತವೆ. ಮಾಂದಲಪಟ್ಟಿಯಿಂದ ಕೂಗಳತೆ ದೂರದಲ್ಲಿರುವ ಈ ವಾತಾವರಣದಲ್ಲಿ ಸದಾ ಮಂಜು ಮುಸುಕಿದ ವಾತಾವರಣವಿದ್ದು, ರೆಸಾರ್ಟ್ ಇರುವದೇ ಕಾಣುವದಿಲ್ಲ.

ಪರಿಸರ ಇಲಾಖೆ ನಿಯಮಗಳ ಪ್ರಕಾರ ವನ್ಯಧಾಮ ಅಥವಾ ಅಭಯಾರಣ್ಯಗಳ 10 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಯಾವದೇ ವಾಣಿಜ್ಯ ಚಟುವಟಿಕೆಗಳನ್ನು ನಡೆಸುವಂತಿಲ್ಲ. ಆದರೆ ಈ ರೆಸಾರ್ಟ್, ಪುಷ್ಪಗಿರಿ ವನ್ಯಜೀವಿ ವಲಯದಿಂದ ಕೇವಲ 700 ಮೀಟರ್ ದೂರದಲ್ಲಿದೆ. ಅದೂ ಅಲ್ಲದೆ, ಮಾಂದಲಪಟ್ಟಿ ಮತ್ತು ಹಮ್ಮಿಯಾಲ ಅತಿಸೂಕ್ಷ್ಮ ಪರಿಸರ ವಲಯವೆಂದು ಗುರುತಿಸಲ್ಪಟ್ಟಿದ್ದು, ಇಲ್ಲಿ ಯಾವದೇ ಬಗೆಯ ರೆಸಾರ್ಟ್‍ಗಳನ್ನು

(ಮೊದಲ ಪುಟದಿಂದ) ನಿರ್ಮಿಸುವಂತಿಲ್ಲ. ಗುಡ್ಡ ಕೊರೆದು ಗುಹೆಗಳ ಒಳಗೆ ಕಾಟೇಜ್ ನಿರ್ಮಾಣ ಮಾಡಲಾಗಿದೆ. ಬೆಟ್ಟದ ಮೇಲೆ ನೈಸರ್ಗಿಕವಾಗಿ ಇರುವ ಗುಡ್ಡವನ್ನು ಕೊರೆದು ಗುಹೆಗಳನ್ನು ಮಾಡಿ ಅದರೊಳಗೆ ಎರಡು ಕಾಟೇಜ್‍ಗಳನ್ನು ನಿರ್ಮಿಸಲಾಗಿದೆ. ಮೇಲ್ನೋಟಕ್ಕೆ ಇದು ರಸ್ತೆ ಬದಿಯ ಮೋರಿಯಂತೆ ಕಂಡರೂ ಇದು ವಾಸ್ತವವಾಗಿ ಗುಹಾ ಕಾಟೇಜ್‍ಗಳಾಗಿದ್ದು, ಒಳಗಡೆ ಬೆಡ್‍ರೂಂ, ಸ್ನಾನದ ಮನೆ ಮತ್ತು ಶೌಚಾಲಯವಿದೆ. ಗುಹೆಗೆ ಗುಡ್ಡದ ಮೇಲಿನಿಂದ ಪೈಪ್‍ಗಳ ಮೂಲಕ ಆಮ್ಲಜನಕ ಪೂರೈಸಲು ವ್ಯವಸ್ಥೆ ಮಾಡಲಾಗಿದೆ. ಈ ರೆಸಾರ್ಟ್‍ಗೆ ಸಂಬಂಧಪಟ್ಟಂತೆ ಸ್ಥಳೀಯ ಗಾಳಿಬೀಡು ಗ್ರಾಮ ಪಂಚಾಯಿತಿ ಯಿಂದ ಮಾಹಿತಿ ಪಡೆದಾಗ ಮತ್ತಷ್ಟು ಆಶ್ಚರ್ಯಕರ ವಿಷಯಗಳು ಬಹಿರಂಗವಾಗಿವೆ. ಸರ್ವೆ ನಂಬರ್ 6/27 ರಲ್ಲಿ 0.10 ಸೆಂಟು ಮತ್ತು ಸರ್ವೆ ನಂಬರ್ 6/28ರಲ್ಲಿ 0.20 ಸೆಂಟು ಜಾಗವನ್ನು ವಸತಿ ಉದ್ದೇಶಕ್ಕಾಗಿ ಭೂ ಪರಿವರ್ತನೆ ಮಾಡಲು ಅನುಮತಿ ಪಡೆಯಲಾಗಿದೆ. ಇದನ್ನು ಹೊರತು ಪಡಿಸಿ ರೆಸಾರ್ಟ್ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಯಾವದೇ ರೀತಿಯ ಅನುಮತಿಗಳನ್ನು ಪಡೆಯಲಾಗಿಲ್ಲ. ಈ ಜಾಗದ ಮಾಲೀಕರಾಗಿರುವ ಕೆ. ಅಕ್ಕಮ್ಮ ಎಂಬುವರು ಬೆಂಗಳೂರಿನ ಶ್ರೀಮತಿ ಪ್ರೀತ್ ಕಾವೇರಿ ಎಂಬವರಿಗೆ ‘ಪವರ್ ಆಫ್ ಅಟಾರ್ನಿ’ ನೀಡಿದ್ದು, ಪ್ರೀತ್ ಕಾವೇರಿ ಅವರು ಸರ್ವೆ ನಂಬರ್ 6/27 ರಲ್ಲಿ 5.70 ಎಕರೆ ಹಾಗೂ ಸರ್ವೆ ನಂಬರ್ 6/28ರಲ್ಲಿ 3.35 ಎಕರೆ ಜಾಗದಲ್ಲಿ ಕೇವಲ ಶೇಕಡಾ 10ರಷ್ಟು ಜಾಗವನ್ನು ಫಾರ್ಮ್ ಹೌಸ್ ನಿರ್ಮಾಣಕ್ಕೆ ಕಂದಾಯ ಇಲಾಖೆಯಿಂದ ನೇರವಾಗಿ ಭೂ ಪರಿವರ್ತನೆ ಮಾಡಿಕೊಂಡಿರುತ್ತಾರೆ. ಆದರೆ ಇದರ ಬಗ್ಗೆ ಗಾಳಿಬೀಡು ಗ್ರಾಮ ಪಂಚಾಯಿತಿಗೆ ಯಾವದೇ ಮಾಹಿತಿ ಇಲ್ಲದಿರುವದು ವಿಶೇಷ. ಅಲ್ಲದೆ ಗ್ರಾಮ ಪಂಚಾಯಿತಿ ಯಿಂದಾಗಲೀ, ಕಂದಾಯ ಇಲಾಖೆಯಿಂದಾಗಲಿ ಪ್ರವಾಸೋದÀ್ಯಮ ಇಲಾಖೆಯಿಂದಾಗಲೀ, ಪರಿಸರ ಇಲಾಖೆಯಿಂದಾಗಲೀ ಜಾಗದ ಮಾಲೀಕರು ಯಾವದೇ ಬಗೆಯ ಪರವಾನಗಿ ಪಡೆದುಕೊಂಡಿಲ್ಲ.

ಕೊಡಗಿನಲ್ಲಿ ಹಲವು ಖ್ಯಾತ ರೆಸಾರ್ಟ್‍ಗಳನ್ನು ವಿನ್ಯಾಸ ಮಾಡಿರುವ ಕೇರಳ ಮೂಲತಃ ಇಂಜಿನಿಯರ್ ಜಯೇಶ್ ಎಂಬವರೇ ಈ ರೆಸಾರ್ಟ್ ನಿರ್ಮಾಣದ ಉಸ್ತುವಾರಿ ವಹಿಸಿಕೊಂಡಿದ್ದಾರೆ. ತಾವು ರೆಸಾರ್ಟ್ ನಿರ್ಮಾಣ ಮಾಡುತ್ತಿರುವದನ್ನು ಒಪ್ಪಿಕೊಂಡಿರುವ ಅವರು ಅನುಮತಿ ಪತ್ರಗಳ ಬಗ್ಗೆ ತಮಗೇನೂ ಮಾಹಿತಿ ಇಲ್ಲ, ಈ ಬಗ್ಗೆ ಧೀರೇಶ್ ಕುಮಾರ್ ಅವರನ್ನೇ ಕೇಳುವಂತೆ ಹೇಳುತ್ತಾರೆ.

ಸುಳಿವು ನೀಡಿದ ಗಾಳಿ ಯಂತ್ರ

ಪ್ರವಾಸೀ ತಾಣ ಮಾಂದಲಪಟ್ಟಿಯಲ್ಲಿರುವ ಅರಣ್ಯ ಇಲಾಖೆ ಸಿಬ್ಬಂದಿಗೆ ಮೊದಲು ದೂರದ ಬೆಟ್ಟದ ಮೇಲೆ ಗಾಳಿ ಯಂತ್ರವೊಂದು ಕಂಡಿದೆ. ಏನೋ ಅಕ್ರಮದ ಸುಳಿವು ಕಂಡ ಸಿಬ್ಬಂದಿ ಈ ಗಾಳಿಯಂತ್ರದ ಬಗ್ಗೆ ಮಾಹಿತಿ ಪಡೆಯಲು ಅದನ್ನು ಹುಡುಕುತ್ತಾ ಹೊರಟಾಗ ಕಂಡಿದ್ದು ಈ ಅಕ್ರಮ ರೆಸಾರ್ಟ್.

ಈ ಕುರಿತು ಪರಿಶೀಲನೆ ನಡೆಸಿದ ಪುಷ್ಪಗಿರಿ ವನ್ಯಜೀವಿ ವಲಯದ ಸಿಬ್ಬಂದಿ, ಅರಣ್ಯ ಮತ್ತು ಪರಿಸರ ಕಾನೂನನ್ನು ಸಂಪೂರ್ಣ ಉಲ್ಲಂಘಿಸಿ ಇಲ್ಲಿ ರೆಸಾರ್ಟ್ ನಿರ್ಮಾಣವಾಗಿರುವದನ್ನು ದೃಢಪಡಿಸಿದ್ದಾರೆ. ಮಾತ್ರವಲ್ಲ, ಅತಿಸೂಕ್ಷ್ಮ ‘ಸೋಲೋ’ ಅರಣ್ಯದಲ್ಲೇ ಈ ಅಕ್ರಮ ನಡೆಯುತ್ತಿರುವದನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ಹಾಗಾಗಿ ಇಲ್ಲಿ ಕಟ್ಟಡಗಳ ನಿರ್ಮಾಣಕ್ಕೆ ನೀಡಿರುವ ಅನುಮತಿ ಪತ್ರಗಳ ಬಗ್ಗೆ ಮಾಹಿತಿ ಕೋರಿ ಗಾಳಿಬೀಡು ಗ್ರಾಮ ಪಂಚಾಯಿತಿಗೆ ಪತ್ರ ಬರೆದಿದ್ದಾರೆ ಇದಕ್ಕೆ ಉತ್ತರಿಸಿರುವ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಸದರಿ ರೆಸಾರ್ಟ್‍ಗೆ ಗ್ರಾಮ ಪಂಚಾಯಿತಿಯಿಂದ ಯಾವದೇ ಬಗೆಯ ಅನುಮತಿ ಪಡೆದಿಲ್ಲ ಮತ್ತು ಈ ಕಟ್ಟಡಗಳು ಅಕ್ರಮ ಎಂದು ದೃಢಪಡಿಸಿ ಮರು ಪತ್ರ ಬರೆದಿದ್ದಾರೆ.

ಸ್ಥಳೀಯಾಡಳಿತ ಮತ್ತು ಅರಣ್ಯ ಇಲಾಖೆಯೇ ಈ ರೆಸಾರ್ಟ್ ಅಕ್ರಮ ಎಂದು ವರದಿ ನೀಡಿರುವದರಿಂದ ಇಲ್ಲಿ ತಪ್ಪಿತಸ್ಥರ ವಿರುದ್ಧ ಶೀಘ್ರ ಕ್ರಮ ಕೈಗೊಳ್ಳಬೇಕಿದೆ. ಕಳೆದ ವರ್ಷ ಗಾಳಿಬೀಡು, ಹಮ್ಮಿಯಾಲ ವ್ಯಾಪ್ತಿಯಲ್ಲಿ ಬಹಳಷ್ಟು ಭೂ ಕುಸಿತಗಳು ಸಂಭವಿಸಿದ್ದವು. ಆದರೂ ಕೂಡ ಅವುಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ಬೆಟ್ಟ ವಿರೂಪಗೊಳಿಸಿ ರೆಸಾರ್ಟ್ ನಿರ್ಮಾಣ ಮಾಡುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಿದೆ.

ನಮ್ಮ ಜಿಲ್ಲೆ, ಪ್ರಕೃತಿ, ಪರಿಸರ ಮತ್ತು ಅವುಗಳ ಸೂಕ್ಷ್ಮತೆಗಳ ಬಗ್ಗೆ ಅರಿವಿಲ್ಲದ ಹೊರ ರಾಜ್ಯದ ಉದ್ಯಮಿಗಳು ಇಲ್ಲಿ ಬಂದು ಇಂತಹ ಪ್ರಮಾದ ಎಸಗುತ್ತಿದ್ದಾರೆ.

ಆದರೆ ಈ ಎಲ್ಲಾ ಸೂಕ್ಷ್ಮಗಳನ್ನು ಅರಿತಿರುವ ಸ್ಥಳೀಯರೂ ಕೂಡ ಇವರಿಗೆ ನೆರವು ನೀಡುತ್ತಿರುವದು ನಿಜಕ್ಕೂ ದುರಂತ.

-ಐಮಂಡ ಗೋಪಾಲ್ ಸೋಮಯ್ಯ, ಮರಗೋಡು.