ಮಡಿಕೇರಿ, ಸೆ. 4: ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಮಡಿಕೇರಿಯಲ್ಲಿ 2019-20 ನೇ ಸಾಲಿನಲ್ಲಿ ದಾಖಲಾದ ವೈದ್ಯ ವಿದ್ಯಾರ್ಥಿಗಳ ವೈಟ್ ಕೋಟ್ ಕಾರ್ಯಕ್ರಮವನ್ನು ಪ್ರಾರಂಭಿಸ ಲಾಯಿತು, ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಾಲೇಜಿನ ಡೀನ್ ಡಾ. ಕಾರ್ಯಪ್ಪ ಅವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಕಾರ್ಯಕ್ರಮದಲ್ಲಿ ಪ್ರಥಮ ಎಂಬಿಬಿಎಸ್ ವಿದ್ಯಾರ್ಥಿಗಳು ಒಂದು ತಿಂಗಳ ಅವಧಿಯ ತರಬೇತಿ ಬಗ್ಗೆ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳಿಗೆ ಒಂದು ತಿಂಗಳ ಅಡಿಪಾಯ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ; ವೈಟ್ ಕೋಟ್ ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ ಏಫ್ರಾನ್‍ಗಳನ್ನು ತೊಡಿಸಿ ಪ್ರಮಾಣ ವಚನವನ್ನು ಬೋಧಿಸಲಾಯಿತು. ನಂತರ ವಿದ್ಯಾರ್ಥಿಗಳು ಕಾಲೇಜಿನ ಆವರಣ ದಲ್ಲಿ ಗಿಡಗಳನ್ನು ನೆಟ್ಟು ಅವುಗಳನ್ನು ತಮ್ಮ ತರಬೇತಿ ಅವಧಿ ಮುಗಿಯುವ ವರೆಗೆ ದತ್ತು ತೆಗೆದುಕೊಂಡು ಸಾಮಾಜಿಕ ಹಾಗೂ ಪರಿಸರ ಕಾಳಜಿಯನ್ನು ತೋರಿಸಿದರು.

ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಡಾ. ವಿಶಾಲ್‍ಕುಮಾರ್, ಮುಖ್ಯ ಆಡಳಿತಾಧಿಕಾರಿ ಮೇರಿ ನಾಣಯ್ಯ, ಸ್ಥಾನೀಯ ವೈದ್ಯಾಧಿಕಾರಿ ಡಾ. ಮಂಜುನಾಥ್ ಎಸ್, ಅಕಾಡೆಮಿಕ್ ರಿಜಿಸ್ಟಾರ್ ಡಾ. ರವಿಕಿರಣ ಕಿಸಾನ್ ವೇದಿಕೆಯಲ್ಲಿದ್ದರು. ಸಂಸ್ಥೆಯ ವಿಭಾಗದ ಮುಖ್ಯಸ್ಥರುಗಳು, ಬೋಧಕ ವೃಂದದವರು ಮತ್ತು ಎಂಬಿಬಿಎಸ್ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳು ಕಾರ್ಯಕ್ರಮ ನೇರವೆರಿಸಿಕೊಟ್ಟರು.