ಮಡಿಕೇರಿ, ಸೆ. 5: ಇಡ್ಕಿದು ಗ್ರಾಮದ ಬ್ರಹ್ಮಶ್ರೀ ಮಿತ್ತೂರು ಪುರೋಹಿತ ತಿಮ್ಮಯ್ಯ ಭಟ್ಟ ಸಂಪ್ರತಿಷ್ಠಾನ ಕೊಡಗಿನ ಚೇರಂಬಾಣೆ ನಿವಾಸಿ ಡಾ. ಬೊವ್ವೇರಿಯಂಡ ಚೆಟ್ಟಿಚ್ಚ ಉತ್ತಯ್ಯ ಹಾಗೂ ತಂಗಮ್ಮ ದಂಪತಿ ‘ಕೊಡವ ಅರಿವೋಲೆ’ ಎಂಬ ಕೊಡವ ಭಾಷಾ ನಿಘಂಟು ರಚಿಸಿದ್ದು, ಸಂಪ್ರತಿಷ್ಠಾನದಿಂದ ಪ್ರತಿವರ್ಷ ನಿಘಂಟುಕಾರರಿಗೆ ನೀಡಲ್ಪಡುವ ‘ಪ್ರೊ. ಮರಿಯಪ್ಪ ಭಟ್ಟ ಪ್ರಶಸ್ತಿ’ಗೆ ಈ ವರ್ಷ ಡಾ. ಬಿ.ಸಿ. ಉತ್ತಯ್ಯ ದಂಪತಿ ಆಯ್ಕೆಯಾಗಿದ್ದಾರೆ.
ಡಾ. ಬಿ.ಸಿ. ಉತ್ತಯ್ಯ ತೋಟಗಾರಿಕಾ ವಿಷಯದಲ್ಲಿ ಡಾಕ್ಟರೇಟ್ ಪಡೆದಿದ್ದು, ಕೃಷಿ ವಿಶ್ವವಿದ್ಯಾಲಯದಲ್ಲಿ ಹಲವಾರು ವರ್ಷ ಸೇವೆ ಸಲ್ಲಿಸಿ, ಪೊನ್ನಂಪೇಟೆ ಕೃಷಿ ಕಾಲೇಜಿನಲ್ಲಿ ಹಿರಿಯ ಪ್ರಾಧ್ಯಾಪಕರಾಗಿ ನಿವೃತ್ತಿ ಹೊಂದಿದವರು. ನಿವೃತ್ತಿಯ ನಂತರ ಸುಮಾರು ಹದಿನೈದು ವರ್ಷಗಳ ಸತತ ಪ್ರಯತ್ನದಿಂದ ರಚಿಸಿದ ಕೊಡವ - ಕನ್ನಡ ನಿಘಂಟು ಮಂಗಳೂರು ವಿಶ್ವವಿದ್ಯಾಲಯದ ವತಿಯಿಂದ ಪ್ರಕಾಶನಗೊಂಡಿದೆ.
ತಾ.15ರಂದು ಪುತ್ತೂರು ಸಮೀಪದ ಪೋಳ್ಯ ಶ್ರೀನಿವಾಸ ಸಭಾಂಗಣದಲ್ಲಿ ನಡೆಯುವ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ನೀಡಲಾಗುವದು.
ಮದ್ರಾಸು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾಗಿಯೂ, ತುಳು - ಇಂಗ್ಲಿಷ್ ಹಾಗೂ ಹವ್ಯಕ - ಇಂಗ್ಲಿಷ್ ನಿಘಂಟುಕಾರರಾಗಿಯೂ ಪ್ರಸಿದ್ಧರಾಗಿದ್ದ, ಮೂಲತಃ ಪುತ್ತೂರು ಸಮೀಪದ ಮುಂಗ್ಲಿಮನೆಯ ಪ್ರೊ. ಎಂ. ಮರಿಯಪ್ಪ ಭಟ್ಟರ ಸ್ಮರಣಾರ್ಥ ನೀಡಲ್ಪಡುವ ಈ ಪ್ರಶಸ್ತಿಯು ರೂ. 10 ಸಾವಿರ ನಗದು ಮತ್ತು ಪ್ರಶಸ್ತಿ ಪತ್ರ ಒಳಗೊಂಡಿರುತ್ತದೆ ಎಂದು ಪ್ರಕಟಣೆ ತಿಳಿಸಿದೆ.