ವೀರಾಜಪೇಟೆ, ಸೆ. 5: ವೀರಾಜಪೇಟೆ ಮೀನುಪೇಟೆಯ ಚೈತನ್ಯ ಮಠಪುರ ಮುತ್ತಪ್ಪ ಕಲಾ ಮಂಟಪದಲ್ಲಿ ತಾ. 22 ರಂದು ಮುತ್ತಪ್ಪನ್ ಓಣಂ ಆಚರಣಾ ಸಮಿತಿ ವತಿಯಿಂದ 11ನೇ ವರ್ಷದ ಓಣಂ ಹಬ್ಬವನ್ನು ಸರಳ ರೀತಿಯಲ್ಲಿ ಆಚರಿಸಲಾಗುವದು ಎಂದು ಓಣಂ ಹಬ್ಬದ ಆಚರಣಾ ಸಮಿತಿ ಅಧ್ಯಕ್ಷ ಇ.ಸಿ. ಜೀವನ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಬಾರಿ ಮಡಿಕೇರಿ ಹಾಗೂ ಸೋಮವಾರಪೇಟೆ ತಾಲೂಕಿನಲ್ಲಿ ಪ್ರಕೃತಿ ವಿಕೋಪ ಉಂಟಾದ ಕಾರಣ ಓಣಂ ಆಚರಣೆಯನ್ನು ರದ್ದುಗೊಳಿಸಿ ರೂ. 2 ಲಕ್ಷ ನಗದನ್ನು ಸಂತ್ರಸ್ತರಿಗೆ ನೀಡಲಾಗಿತ್ತು. ಈ ಬಾರಿ ವೀರಾಜಪೇಟೆ ತಾಲೂಕಿನಲ್ಲಿ ಪ್ರಕೃತಿ ವಿಕೋಪದ ದುರಂತ ಉಂಟಾಗಿ ನಮ್ಮ ಸಂಘದ ಹಲವಾರು ಸದಸ್ಯರು ಮನೆ-ಮಠ, ಆಸ್ತಿ-ಪಾಸ್ತಿಗಳನ್ನು ಕಳೆದುಕೊಂಡಿದ್ದಾರೆ. ಆದ್ದರಿಂದ ಈ ವರ್ಷ ಓಣಂ ಹಬ್ಬವನ್ನು ಸರಳವಾಗಿ ಆಚರಿಸಲು ನಿರ್ಧರಿಸಲಾಗಿದೆ. ಓಣಂ ಸದ್ಯ ಹಾಗೂ ಸಾಂಸ್ಕøತಿಕ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಪ್ರಕೃತಿ ವಿಕೋಪಕ್ಕೆ ತುತ್ತಾದ 10 ಕುಟುಂಬದವರಿಗೆ ಸಹಾಯ ಹಸ್ತ ನೀಡಲಾಗುವದು ಎಂದು ಹೇಳಿದರು.
ತಾ. 22 ರಂದು ಬೆಳಿಗ್ಗೆ 9 ಗಂಟೆಗೆ ಮುತ್ತಪ್ಪ ಸನ್ನಿಧಿಯಲ್ಲಿ ದೀಪ ಬೆಳಗಿಸುವದರೊಂದಿಗೆ ವೇದಿಕೆಯ ಉದ್ಘಾಟನೆ ನಡೆಯಲಿದೆ. ಕಾರ್ಯದರ್ಶಿ ಸಿ.ಆರ್. ಬಾಬು ಮಾತನಾಡಿ, 2017-18, 2018-19 ಸಾಲಿನಲ್ಲಿ ಎಸ್‍ಎಸ್‍ಎಲ್‍ಸಿ ಹಾಗೂ ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಮೂರು ಹಿಂದೂ ಮಲೆಯಾಳಿ ಮಕ್ಕಳಿಗೆ ಬಹುಮಾನವನ್ನು ನೀಡಲಾಗುವದು. ವಿದ್ಯಾರ್ಥಿಗಳು ಅಂಕಪಟ್ಟಿ ತಲಪಿಸಲು ಹಾಗೂ ಸಾಂಸ್ಕøತಿಕ ಕಾರ್ಯಕ್ರಮಕ್ಕೆ ಹೆಸರು ನೋಂದಾಯಿಸಲು ತಾ. 10 ಕೊನೆಯ ದಿನಾಂಕವಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊ. 9731258197 ಸಂಪರ್ಕಿಸಬಹುದೆಂದು ಹೇಳಿದರು.
ಗೋಷ್ಠಿಯಲ್ಲಿ ಸಹಕಾರ್ಯದರ್ಶಿ ಸತೀಶ್, ಖಜಾಂಚಿ ಸಿ.ಆರ್. ಸಜೀವನ್, ಸದಸ್ಯ ಉಪೇಂದ್ರ ಉಪಸ್ಥಿತರಿದ್ದರು.
ಸಿದ್ದಾಪುರ: ಪ್ರವಾಹದ ಹಿನ್ನೆಲೆ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿಯನ್ನು ಸರಳವಾಗಿ ಆಚರಿಸಲಾಗುವದು ಎಂದು ಎಸ್.ಎನ್.ಡಿ.ಪಿ. ಯೂನಿಯನ್ ಕನ್ವೀನಿಯರ್ ಕೆ.ಎನ್. ವಾಸು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್.ಎನ್.ಡಿ.ಪಿ. ಕೊಡಗು ಯೂನಿಯನ್ ವತಿಯಿಂದ ವರ್ಷಂಪ್ರತಿ ಬ್ರಹ್ಮರ್ಶಿ ಶ್ರೀ ನಾರಾಯಣ ಗುರುಗಳ ಜಯಂತಿಯನ್ನು ವಿಜೃಂಭಣೆಯಿಂದ ನಡೆಸಲಾಗುತ್ತಿದ್ದು, ಕಳೆದ ವರ್ಷ ಜಿಲ್ಲೆಯಲ್ಲಿ ಸಂಭವಿಸಿದ ಭೂಕುಸಿತದಿಂದ ಕಾರ್ಯಕ್ರಮವನ್ನು ಸರಳವಾಗಿ ಆಚರಿಸಲಾಗಿತ್ತು. ಪ್ರಸಕ್ತ ವರ್ಷ ಕಾವೇರಿ ನದಿಯ ಪ್ರವಾಹದಿಂದಾಗಿ ನೂರಾರು ಮನೆಗಳು ನೆಲಕ್ಕುರುಳಿದ್ದು, ಈ ಹಿನ್ನೆಲೆ ಸರಳ ಕಾರ್ಯಕ್ರಮ ಮಾಡಬೇಕೆಂದು ಆಚರಣಾ ಸಮಿತಿ ಹಾಗೂ ಆಡಳಿತ ಮಂಡಳಿ ತೀರ್ಮಾನಿಸಿದೆ ಎಂದರು.
ಪ್ರವಾಹದಿಂದ ಮನೆಯನ್ನು ಕಳೆದುಕೊಂಡ ಕುಟುಂಬಕ್ಕೆ ಶಾಶ್ವತ ಪರಿಹಾರ ಹಾಗೂ ಸೂರನ್ನು ಒದಗಿಸಿಕೊಡಬೇಕೆಂದು ಒತ್ತಾಯಿಸಿ ಮುಖ್ಯಮಂತ್ರಿಗಳು ಹಾಗೂ ಜಿಲ್ಲಾಧಿಕಾರಿಗಳಿಗೆ ಎಸ್.ಎನ್.ಡಿ.ಪಿ. ವತಿಯಿಂದ ಮನವಿಪತ್ರವನ್ನು ಸಲ್ಲಿಸಲಾಗಿದೆ. ಪ್ರವಾಹದಲ್ಲಿ ಮನೆ ಕಳೆದುಕೊಂಡ ನಿರಾಶ್ರಿತರಿಗೆ ಸರಕಾರ ಕೂಡಲೇ ಶಾಶ್ವತ ಸೂರು ಒದಗಿಸಿ ಕೊಡಬೇಕೆಂದು ಒತ್ತಾಯಿಸಿದರು.
ಗೋಷ್ಠಿಯಲ್ಲಿ ಯೂನಿಯನ್ ಅಧ್ಯಕ್ಷ ಬಾಲಕೃಷ್ಣ, ನಿರ್ದೇಶಕರಾದ ಕಿಶೋರ್, ಕೆ. ವಾಸು, ಆಚರಣಾ ಸಮಿತಿ ಅಧ್ಯಕ್ಷ ರೆಜಿತ್ ಕುಮಾರ್, ಕಾರ್ಯದರ್ಶಿ ವಿ.ಕೆ. ಗಿರೀಶ್, ದಿಲೀಪ್ ಕುಮಾರ್ ಇದ್ದರು.