ಗೋಣಿಕೊಪ್ಪಲು, ಸೆ. 4: ಹುಲಿ ಸಂರಕ್ಷಣಾ ಕೇಂದ್ರವಾದ ನಾಗರಹೊಳೆ ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನದ ವನ್ಯಜೀವಿ ವಲಯದ ಮಧ್ಯದಲ್ಲಿ ಅಂತರರಾಜ್ಯ ಹೆದ್ದಾರಿ ಹಾದುಹೋಗಲಿದ್ದು, ಭವಿಷ್ಯದಲ್ಲಿ ರಾತ್ರಿ ವೇಳೆ ವಾಹನ ಓಡಾಟಕ್ಕೂ ಬ್ರೇಕ್ ಬೀಳುವ ಸಾಧ್ಯತೆ ಇದೆ ಎಂಬ ವದಂತಿಗಳಿಗೆ ತೆರೆಎಳೆಯುವ ಪ್ರಯತ್ನವಾಗಿ; ಜಿಲ್ಲಾಧಿಕಾರಿಗಳನ್ನು ಕೂಡಲೇ ಭೇಟಿ ಮಾಡುವ ನಿರ್ಧಾರವನ್ನು ಚೇಂಬರ್ ಆಫ್ ಕಾಮರ್ಸ್ ಕೈಗೆತ್ತಿಕೊಂಡಿದೆ.

ಇತ್ತೀಚೆಗೆ ಗೋಣಿಕೊಪ್ಪ ಸ್ಥಾನೀಯ ಚೇಂಬರ್ ಅಫ್ ಕಾಮರ್ಸ್ ಅಧ್ಯಕ್ಷ ಕಡೇಮಾಡ ಸುನೀಲ್ ಮಾದಪ್ಪ ಅಧ್ಯಕ್ಷತೆಯಲ್ಲಿ ಸ್ಥಾನೀಯ ಸಮಿತಿಯ ಪದಾಧಿಕಾರಿಗಳು ವಾಹನ ಸಂಚಾರ ನಿರ್ಬಂಧದ ಬಗ್ಗೆ ಚರ್ಚೆ ನಡೆಸಿದರು. ಒಂದು ವೇಳೆ ರಾತ್ರಿ ವೇಳೆಯಲ್ಲಿ ಸಂಚಾರ ಬಂದ್ ಆದಲ್ಲಿ ನಾಗರಿಕರ ಸಹಕಾರದಿಂದ ಉಗ್ರ ಹೋರಾಟ ನಡೆಸುವ ಬಗ್ಗೆ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು. ಜನರಲ್ಲಿರುವ ಗೊಂದಲಗಳ ಬಗ್ಗೆ ಜಿಲ್ಲಾಧಿಕಾರಿಗಳು ಸ್ಪಷ್ಟತೆ ನೀಡಲು ಕೋರಲಾಗುವದು ಎಂದು ಜಿಲ್ಲಾ ಚೇಂಬರ್‍ನ ಅಧ್ಯಕ್ಷ ಬಿ.ಎನ್.ಪ್ರಕಾಶ್ ಸಭೆಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಚೇಂಬರ್‍ನ ಉಪಾಧ್ಯಕ್ಷ ಪೊನ್ನಿಮಾಡ ಸುರೇಶ್, ಕಾರ್ಯದರ್ಶಿ ತೆಕ್ಕಡ ಕಾಶಿ, ನಿರ್ದೇಶಕರುಗಳಾದ ಕಿರಿಯಮಾಡ ಅರುಣ್ ಪೂಣಚ್ಚ, ಅಜಿತ್ ಅಯ್ಯಪ್ಪ, ಕೇಶವ್ ಕಾಮತ್, ರಾಜಶೇಖರ್, ಸುಮಿ ಸುಬ್ಬಯ್ಯ, ಟಿ.ಜೆ. ನಾಸಿರ್, ಅನಿತಾ ಮುಂತಾದವರು ಹಾಜರಿದ್ದರು.