ಸಿದ್ದಾಪುರ, ಸೆ, 5: ಜಿಲ್ಲೆಯಲ್ಲಿ ಉಂಟಾದ ಪ್ರವಾಹಕ್ಕೆ ಇಲ್ಲಿನ ನಿವಾಸಿಗಳು ತಮ್ಮ ಮನೆ ಮಠಗಳನ್ನು ಕಳೆದುಕೊಂಡು ಪರಿಹಾರ ಕೇಂದ್ರಗಳಲ್ಲಿ ತಂಗಿದ್ದರೂ ಕೂಡ ಈ ಭಾಗದ ಜಿಲ್ಲಾ ಪಂಚಾಯಿತಿ ಸದಸ್ಯರು ಈವರೆಗೂ ಇಲ್ಲಿಗೆ ಆಗಮಿಸದ ಬಗ್ಗೆ ಸಾರ್ವಜನಿಕರು ಹಾಗೂ ಸಂತ್ರಸ್ತರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ .

ಸಿದ್ದಾಪುರ ಕರಡಿಗೋಡು ಗುಹ್ಯ ಗೂಡುಗದ್ದೆ ಗ್ರಾಮಗಳು ಕಾವೇರಿ ನದಿಯಲ್ಲಿ ಉಂಟಾದ ಪ್ರವಾಹದಿಂದ ಅಲ್ಲಿನ ನದಿ ದಡದ ನಿವಾಸಿಗಳು ತಮ್ಮ ಮನೆ ಮಠಗಳನ್ನು ಕಳೆದುಕೊಂಡು ನಿರಾಶ್ರಿತರಾಗಿ ಸಂತ್ರಸ್ತರ ಕೇಂದ್ರದಲ್ಲಿ ತಂಗಿರುವಾಗ ಈ ಭಾಗದ ಜನಪ್ರತಿನಿಧಿಯಾಗಿರುವ ಜಿಲ್ಲಾ ಪಂಚಾಯಿತಿ ಸದಸ್ಯೆ ಸರಿತಾ ಪೂಣಚ್ಚ ಕೇವಲ ಕಾಟಾಚಾರಕ್ಕೆ ಆಗಮಿಸಿ ಮುಖ ತೋರಿಸಿ ತೆರಳಿದ್ದಲ್ಲದೆ ಇವರಿಗೆ ಯಾವದೇ ಪರಿಹಾರ ಕಾರ್ಯಗಳಲ್ಲಿ ಕೈಜೋಡಿಸಿಲ್ಲ ಹಾಗೂ ಶಾಶ್ವತ ಸೂರು ದೊರಕಿಸುವ ಬಗ್ಗೆ ಕೂಡ ಎಲ್ಲಿಯೂ ಧ್ವನಿ ಎತ್ತಲಿಲ್ಲ ಎಂದು ಎಂಬ ಮಾತುಗಳು ಸಂತ್ರಸ್ತರು ಸೇರಿದಂತೆ ಇತರರಿಂದ ಇದೀಗ ಕೇಳಿ ಬರುತ್ತಿದೆ. ಗ್ರಾಮಗಳೆಲ್ಲ ನೀರು ತುಂಬಿ ಜನರು ಕಷ್ಟದಲ್ಲಿರುವಾಗ ಸ್ಪಂದಿಸಿಬೇಕಾದ ಜನಪ್ರತಿನಿಧಿಯ ನಡೆಯ ಬಗ್ಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದು ನೆರೆ ಬಾಧಿತ ಪ್ರದೇಶಗಳಿಗೆ ಉಸ್ತುವಾರಿ ಸಚಿವರು ಬಂದಾಗಲೂ ಬರಲಿಲ್ಲ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರದ ನೆರೆ ಅಧ್ಯಯನ ತಂಡ ಆಗಮಿಸಿದ ಸಂದರ್ಭದಲ್ಲೂ ಕೂಡ ಸರಿತಾ ಕಾಣಿಸಿಕೊಂಡಿಲ್ಲ ಎಂಬ ಆಕ್ರೋಶ ಕೇಳಿ ಬರತೊಡಗಿದೆ. ಸಂತ್ರಸ್ತರಿಗೆ ಸಂಘ ಸಂಸ್ಥೆಗಳು ಪರಿಹಾರವನ್ನು ವಿತರಿಸುವ ಸಂದರ್ಭ ಕೂಡ ಇವರು ಈ ಬಾಗಗಳಿಗೆ ಆಗಮಿಸಿದೆ ಜನ ವಿರೋಧಿ ನಡೆ ಅನುಸರಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಚುನಾವಣೆ ಸಂದರ್ಭದಲ್ಲಿ ದಿನಕ್ಕೆ ಎರಡು ಮೂರು ಬಾರಿ ಆಗಮಿಸಿ ನಮ್ಮ ಮತ ಪಡೆದು ಜಯಶಾಲಿಯಾದ ನಂತರ ತಿರುಗಿ ಕೂಡ ನೋಡದೆ ಇರುವದು ಎಷ್ಟು ಸರಿ ಎಂದು ಸಾರ್ವಜನಿಕರು ಹಾಗೂ ಸಂತ್ರಸ್ತರು ಪ್ರಶ್ನಿಸುತ್ತಿದ್ದಾರೆ.

-ಸುಬ್ರಮಣಿ, ಸಿದ್ದಾಪುರ.