ಗೋಣಿಕೊಪ್ಪಲು, ಸೆ. 5 : ಈ ಭಾರಿ ಸುರಿದ ಮಳೆಯಿಂದ ವೀರಾಜಪೇಟೆ ತಾಲೂಕು ವ್ಯಾಪ್ತಿಯಲ್ಲಿ ಸಾಕಷ್ಟು ಹಾನಿಗಳಾಗಿದ್ದು, ಇಲಾಖೆಯ ಸಿಬ್ಬಂದಿಗಳು ಸಕಾಲದಲ್ಲಿ ಸಂತ್ರಸ್ತರ ಕಷ್ಟಗಳಿಗೆ ಸ್ಪಂಧಿಸುವ ಮೂಲಕ ಪರಿಹಾರ ಕಲ್ಪಿಸಿದ್ದಾಗಿ ತಾಲೂಕು ತಹಶೀಲ್ದಾರ್ ಪುರಂದರ ಮಾಹಿತಿ ಒದಗಿಸಿದರು.

ತಾಲೂಕಿನಲ್ಲಿ ಸಂತ್ರಸ್ತರಿಗೆ ನೀಡಿರುವ ಪರಿಹಾರ ವಿತರಣೆಯ ಅಂಕಿ ಅಂಶಗಳನ್ನು ‘ಶಕ್ತಿ’ಯೊಂದಿಗೆ ಹಂಚಿಕೊಂಡ ತಹಶೀಲ್ದಾರ್ ಈ ಬಾರಿ ಇಲಾಖೆಯು ಶರವೇಗದಲ್ಲಿ ಕೆಲಸ ನಿರ್ವಹಿಸಿದ್ದು, ಅರ್ಹರಿಗೆ ಪರಿಹಾರ ವಿತರಣೆಯನ್ನು ತ್ವರಿತಗತಿ ಯಲ್ಲಿ ವಿತರಿಸಲಾಗಿದೆ. ಹಗಲು ರಾತ್ರಿ ಎನ್ನದೆ ಸಿಬ್ಬಂದಿಗಳು ಕೆಲಸ ನಿರ್ವ ಹಿಸಿದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

1467 ಕುಟುಂಬಗಳು ಪರಿಹಾರ ಕೇಂದ್ರದಲ್ಲಿ ಉಳಿದು ಕೊಂಡಿದ್ದರು. ಪರಿಹಾರ ಕೇಂದ್ರದ ಹೊರಗೆ 361 ಕುಟುಂಬ ಗಳು ತಮ್ಮ ತಮ್ಮ ಬಂಧುಗಳ ಮನೆಗಳಲ್ಲಿ ಆಶ್ರಯ ಪಡೆದಿದ್ದರು. 1828 ಕುಟುಂಬಗಳಿಗೆ ತಲಾ 10 ಸಾವಿರದಂತೆ ಒಂದು ಕೋಟಿ 82 ಲಕ್ಷದ 80 ಸಾವಿರ ಪರಿಹಾರವನ್ನು ವಿತರಿಸಲಾಗಿದ್ದು, ನೊಂದ ಕುಟುಂಬ ಗಳಿಗೆ ತಲಾ ಎರಡು ಗುಣಮಟ್ಟದ ಆಹಾರ ಕಿಟ್‍ಗಳನ್ನು ವಿತರಿಸಲಾಗಿದೆ ಎಂದರು.

ಒಂದು ಪಟ್ಟಣ ಪಂಚಾಯಿತಿ ಸೇರಿದಂತೆ 27 ಪರಿಹಾರ ಕೇಂದ್ರಗಳಲ್ಲಿ ಸಂತ್ರಸ್ತರು ತಂಗಿದ್ದರು. ಪ್ರಸ್ತುತ ಕರಡಿಗೋಡು ಬಸವೇಶ್ವರ ಸಮುದಾಯ ಭವನದಲ್ಲಿ 31 ಜನರು ಆಶ್ರಯ ಪಡೆಯುತ್ತಿದ್ದಾರೆ. ಇನ್ನುಳಿದ ಎಲ್ಲ ಪರಿಹಾರ ಕೇಂದ್ರಗಳು ಮುಚ್ಚಲ್ಪಟ್ಟಿವೆ. ತಾಲೂಕಿ ನಾದ್ಯಂತ 362 ಮನೆಗಳಿಗೆ ಭಾಗಶಃ ಹಾನಿಗಳಾಗಿದ್ದು ತಲಾ 25 ಸಾವಿರದಂತೆ 90 ಲಕ್ಷದ 25 ಸಾವಿರ ಹಣವನ್ನು ವಿತರಿಸಲಾಗಿದೆ. ಅಣ್ಣ ತಮ್ಮಂದಿರಲ್ಲಿರುವ ವ್ಯತ್ಯಾಸದಲ್ಲಿರುವ ಒಂದು ಮನೆಗೆ ಪರಿಹಾರವನ್ನು ವಿತರಿಸಲಾಗಿಲ್ಲ.

ತೋರ ಗ್ರಾಮದಲ್ಲಿ 10 ಮಂದಿ ಕಾಣೆಯಾಗಿದ್ದು ಇದರಲ್ಲಿ 6 ಜನ ಮೃತ ಪಟ್ಟಿದ್ದಾರೆ. 3 ಜನರಿಗೆ ತಲಾ 5 ಲಕ್ಷ ಪರಿಹಾರ ವಿತರಿಸಲಾಗಿದೆ. ಇನ್ನು ವಾರಿಸುದಾರರು ಲಭ್ಯವಿಲ್ಲದ ಕಾರಣ ನ್ಯಾಯಾಲಯದಲ್ಲಿ ವಾರಿಸುದಾರರ ದೃಢೀಕರಣ ಪತ್ರ ತರುವ ವಾರಿಸುದಾರರಿಗೆ ಪರಿಹಾರ ಹಣ ನೀಡಲಾಗುವದು. ಕಾಣೆಯಾದ ವರಿಗೆ ರಾಜ್ಯ ಸರ್ಕಾರ ವಂತಿಕೆ ರೂಪದಲ್ಲಿ ನಾಲ್ಕು ಮಂದಿಗೆ ನಾಲ್ಕು ಲಕ್ಷ ಹಣವನ್ನು ಬಿಡುಗಡೆ ಮಾಡಿದೆ.

ಮಹಾ ಮಳೆಯಿಂದ ತಿತಿಮತಿ ಸಮೀಪದ ದೇವಮಚ್ಚಿಯ ಹೊಳೆಯಲ್ಲಿ ಎರಡು ಮಂದಿ ಕೊಚ್ಚಿ ಹೋದ ಪ್ರಕರಣಗಳಿಗೆ ತಲಾ 5 ಲಕ್ಷ ಹಣವನ್ನು ಮಂಜೂರು ಮಾಡ ಲಾಗಿದ್ದು ಒಟ್ಟು 8 ಶವ ಸಂಸ್ಕಾರಕ್ಕೆ 40 ಸಾವಿರ ಹಣವನ್ನು ನೀಡಲಾಗಿದೆ. ಹಾತೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹುದೂರು ಗ್ರಾಮದಲ್ಲಿರುವ 30 ಗುಡಿಸಲುಗಳು ಹಾನಿಯಾದ ಹಿನ್ನಲೆಯಲ್ಲಿ ತಲಾ 4,100ರಂತೆ ಒಟ್ಟು 1 ಲಕ್ಷದ 23 ಸಾವಿರ ಹಣವನ್ನು ನೀಡಲಾಗಿದೆ. ಪರಿಹಾರ ಕೇಂದ್ರದಲ್ಲಿ 50 ಲಕ್ಷಕ್ಕೂ ಹೆಚ್ಚಿನ ಹಣ ಖರ್ಚಾಗಿರುವದಾಗಿ ಮಾಹಿತಿ ನೀಡಿದ ತಹಶೀಲ್ದಾರ್ ಪುರಂದರ ದಾನಿಗಳು ನೀಡಿರುವ ಸಹಕಾರವನ್ನು ಇಲಾಖೆ ಶ್ಲಾಘಿಸುತ್ತದೆ ಎಂದರು.

-ಹೆಚ್.ಕೆ.ಜಗದೀಶ್