ಮಡಿಕೇರಿ, ಸೆ. 4: ಪ್ರತಿ ವರ್ಷದಂತೆ ಐತಿಹಾಸಿಕ ಮಡಿಕೇರಿ ದಸರಾ ನಾಡಹಬ್ಬ ಆಚರಣೆ ಸಂಬಂಧ ಸಾಂಪ್ರದಾಯಿಕವಾಗಿ ಇಲ್ಲಿನ ಪೇಟೆ ಶ್ರೀ ರಾಮ ಮಂದಿರದಲ್ಲಿ ಪೂಜೆ ಯೊಂದಿಗೆ, ದಸರಾ ಸಮಿತಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯ ಪ್ರಥಮ ಸಭೆಯು ಕಾರ್ಯಾಧ್ಯಕ್ಷ ಸ್ಥಾನಕ್ಕೆ ಯಾರಾಗಬೇಕೆಂಬ ಗೊಂದಲದಿಂದ ತಾ. 6 ಕ್ಕೆ ಮುಂದೂಡಲಾಯಿತು.ಮಡಿಕೇರಿ ನಗರಸಭೆ ಆಡಳಿತಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರ ಅಧ್ಯಕ್ಷತೆಯಲ್ಲಿ ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಜರುಗಿದ ಸಭೆಯಲ್ಲಿ ದಸರಾ ಸಮಿತಿ ಕಾರ್ಯಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯ ಬಗ್ಗೆ ಬೈಲಾದಲ್ಲಿರುವ ಗೊಂದಲದಿಂದಾಗಿ ಇಂದಿನ ಸಭೆಯನ್ನು ಅವರು ಮುಂದೂಡಿದರು.ಇಂದಿನ ಸಭೆಯ ಆರಂಭದಲ್ಲಿ ಹಿಂದಿನ ಕಾರ್ಯಾಧ್ಯಕ್ಷ ಮಹೇಶ್ ಜೈನಿ, ದಸರಾ ಆಚರಣೆಯ ಹಿನ್ನೆಲೆ ಯನ್ನು ಪ್ರಸ್ತಾಪಿಸಿ ಮಾತನಾಡಿದರು. ಜಿಲ್ಲಾಧಿಕಾರಿಗಳು ನಗರಸಭೆ ಆಡಳಿತ ಮಂಡಳಿ ಇಲ್ಲದಿರುವ ಕಾರಣ ತಾವು ಮಹಾ ಪೋಷಕರು, ದಸರಾ ಸಮಿತಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದು, ಇನ್ನುಳಿದ ಪದಾಧಿಕಾರಿಗಳ ಆಯ್ಕೆಯನ್ನು ಈ ಸಭೆಯಲ್ಲಿ ಮಾಡಬೇಕಿದೆ ಎಂದು ನೆನಪಿಸಿದರು.

ಈ ವೇಳೆ ದಸರಾ ಸಮಿತಿ ಕಾರ್ಯಾಧ್ಯಕ್ಷರಾಗಿ ರಾಬಿನ್ ದೇವಯ್ಯ ಅವರನ್ನು ದಶಮಂಟಪ ಸಮಿತಿಯಿಂದ ಚುನಾವಣೆ ಮೂಲಕ ಆಯ್ಕೆ ಮಾಡಲಾಗಿದೆ ಎಂದು ದಶಮಂಟಪ ಸಮಿತಿ ಅಧ್ಯಕ್ಷ ರಂಜಿತ್ ವಿವರಣೆ ನೀಡಿದರು. ಆ ಕುರಿತು ಆಕ್ಷೇಪಿಸಿದ ನಗರಸಭೆ ಮಾಜಿ ಅಧ್ಯಕ್ಷ ಹೆಚ್.ಎಂ. ನಂದಕುಮಾರ್ ಅವರು, ಕಾರ್ಯಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಕುರಿತು ಹಳೆಯ ಬೈಲಾದಲ್ಲಿ ನಿಖರ ನಿರ್ದೇಶನ ಇಲ್ಲದೆ ಗೊಂದಲಕ್ಕೆ ಎಡೆಯಾಗಿದೆ ಎಂದು ನೆನಪಿಸಿದರು.

ದಸರಾ ಸಮಿತಿಗೆ ಪದಾಧಿಕಾರಿ ಗಳ ಆಯ್ಕೆ ನಗರಸಭಾಧ್ಯಕ್ಷರ ಅಧ್ಯಕ್ಷತೆಯಲ್ಲಿ ಇಂದು ನಡೆಯುತ್ತಿರುವ ಮಹಾಸಭೆಯಲ್ಲಿ ಆಗಬೇಕೇ ವಿನಃ ಬೇರೆಲ್ಲೂ ಅಲ್ಲವೆಂದು ವಿವರಿಸಿದರು. ಇಂದು ಈ ಬಗ್ಗೆ ಚುನಾವಣೆ ನಡೆಯಬೇಕಿದ್ದು, ಬೈಲಾದಲ್ಲಿ ಚುನಾವಣೆ ಬಗ್ಗೆ ಪ್ರಸ್ತಾಪವಿದ್ದರೂ ಮತದಾರರು ಯಾರು ಎಂಬ ಬಗ್ಗೆ ಪ್ರಸ್ತಾಪವಿಲ್ಲ, ಹಾಗಾಗಿ ಬೈಲಾ ತಿದ್ದುಪಡಿ ಆಗುವ ತುರ್ತು ಅಗತ್ಯವಿದೆ ಎಂದು ಅವರು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.

ಪತ್ರಕರ್ತ ಜಿ. ಚಿದ್ವಿಲಾಸ್ ಅವರು ಮಾತನಾಡಿ, ದಶಮಂಟಪ ಸಮಿತಿಯಿಂದ ಆಯ್ಕೆಯಾಗುವ ವ್ಯಕ್ತಿ ಕಾರ್ಯಾಧ್ಯಕ್ಷ ಸ್ಥಾನದ ಅಭ್ಯರ್ಥಿಯೇ ಹೊರತು ಮಹಾಸಭೆಯಲ್ಲಿ ಚುನಾಯಿತನಾಗುವವರೆಗೆ ಕಾರ್ಯಾ ಧ್ಯಕ್ಷರಾಗಲು ಸಾಧ್ಯವಿಲ್ಲವೆಂದು ವಿವರಿಸಿದರು.

ಈ ಸಂದರ್ಭ ಮಾಜಿ ನಗರಸಭಾ ಸದಸ್ಯ ಎಸ್.ಐ.

(ಮೊದಲ ಪುಟದಿಂದ) ಮುನೀರ್ ಅಹಮ್ಮದ್ ಮಾತನಾಡಿ, ಎಲ್ಲರೂ ಮಡಿಕೇರಿ ದಸರಾ ನಾಡಹಬ್ಬ ಚೆನ್ನಾಗಿ ಜರುಗಲಿ ಎಂಬ ಅಭಿಲಾಷೆಯಿಂದ ಸರ್ವ ಸಮ್ಮತವಾಗಿ ಕಾರ್ಯಾಧ್ಯಕ್ಷರ ಆಯ್ಕೆಯೂ ಆಗಬೇಕಿದೆ. ಇಂದು ಚುನಾವಣೆ ನಡೆಯಬೇಕಿದ್ದು, ಆ ಸಲುವಾಗಿ ತಾವು ಜಿ. ಚಿದ್ವಿಲಾಸ್ ಅವರ ಹೆಸರು ಸೂಚಿಸುವದಾಗಿ ನುಡಿದರು.

ಅಷ್ಟರಲ್ಲಿ ಬಿ.ಎಂ. ರಾಜೇಶ್, ಆರ್.ಬಿ. ರವಿ, ಉಮೇಶ್ ಸುಬ್ರಮಣಿ, ರವಿ ಸೇರಿದಂತೆ ಕೆಲವರು ಈಗಾಗಲೇ ರಾಬಿನ್ ದೇವಯ್ಯ ಅವರನ್ನು ದಶಮಂಟಪ ಸಮಿತಿಯಿಂದ ಕಾರ್ಯಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಸಮರ್ಥಿಸಿ ಅವರೇ ಅಂತಿಮ ಆಯ್ಕೆಯಾಗ ಬೇಕೆಂದು ಒತ್ತಾಯಿಸಿದರು.

ಈ ವೇಳೆ ಮಾತನಾಡಿದ ಚಿದ್ವಿಲಾಸ್ ಅವರು, ತಾವು ವ್ಯವಸ್ಥೆ ಸರಿಹೋಗಬೇಕೆಂಬ ಸದಾಶಯ ಹೊಂದಿದ್ದು, ಈ ಹಿನ್ನೆಲೆಯಲ್ಲಿ ಹಿಂದೆ ತನ್ನ ನೇತೃತ್ವದಲ್ಲಿ ಬೈಲಾ ತಿದ್ದುಪಡಿಗೆ ಪ್ರಯತ್ನಿಸಿದ ಸಂದರ್ಭ ಅದಕ್ಕೆ ಸಹಕಾರ ಸಿಗದ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಹಿಂದಿನ ವ್ಯವಸ್ಥೆಗೆ ಸರಿಯಾಗಿ 1987 ರಲ್ಲಿ ಬೈಲಾ ರಚಿಸಿದ್ದು, ಅದರಲ್ಲಿ ಚುನಾವಣೆ ಬಗ್ಗೆ ಪ್ರಸ್ತಾಪವಿದ್ದರೂ, ಚುನಾವಣಾ ಪ್ರಕ್ರಿಯೆ, ಮತದಾನ, ಮತದಾರರು ಯಾರು ಎಂಬ ಬಗ್ಗೆ ಇಲ್ಲೇಖವಿಲ್ಲದ್ದರಿಂದ ಮುಂದಿನ ವರ್ಷಗಳಲ್ಲಿ ದಸರಾ ನಡೆಸುವವರಿಗೆ ಕಷ್ಟವಾಗುತ್ತದೆ ಎಂದರು. ಗೊಂದಲದ ವಾತಾವರಣದಲ್ಲಿ ದಸರಾ ನಡೆಯುವದನ್ನು ತಪ್ಪಿಸಿ ಅದಕ್ಕೊಂದು ಖಚಿತ ರೂಪ ನೀಡುವಂತಾಗಬೇಕೆಂಬ ಇಚ್ಛೆಯಿಂದ, ತಾನು ಮುನೀರ್ ಅವರ ಸೂಚನೆಯನ್ನು ಮನ್ನಿಸಿ ಚುನಾವಣೆಯಲ್ಲಿ ಮುಂದುವರಿಯುವದಾಗಿ ಘೋಷಿಸಿದರು. ಮಡಿಕೇರಿ ದಸರಾ ನಾಡಹಬ್ಬಕ್ಕೆ ಮುಕ್ತ ಆಚರಣೆಯ ಸಲುವಾಗಿ ಬೈಲಾ ಕೂಡ ತಮ್ಮ ಅವಧಿಯಲ್ಲಿ ರಚಿಸುವಂತಾಗ ಬೇಕೆಂದರು.

ಅಷ್ಟರಲ್ಲಿ ಜಿಲ್ಲಾಧಿಕಾರಿಗಳು ರಾಬಿನ್ ದೇವಯ್ಯ ಹಾಗೂ ಚಿದ್ವಿಲಾಸ್ ಪರಸ್ಪರ ಮಾತುಕತೆಯಿಂದ ಕಾರ್ಯಾಧ್ಯಕ್ಷ ಸ್ಥಾನದ ಗೊಂದಲ ಸರಿಪಡಿಸಿಕೊಳ್ಳುವಂತೆ ಸಲಹೆ ಮಾಡಿದರಲ್ಲದೆ, ಈಗ ಸಮಯಾಭವದಿಂದ ಮುಂದಿನ ನವೆಂಬರ್‍ನಲ್ಲಿ ಹೊಸ ಬೈಲಾವನ್ನು, ಈಗಾಗಲೇ ತಮ್ಮ ನೇತೃತ್ವದ ಸಮಿತಿಯಿಂದ ರೂಪಿಸಿರುವ ಮೇರೆಗೆ ಚರ್ಚಿಸಿ ಅನುಷ್ಠಾನಗೊಳಿಸೋಣ ಎಂದು ನುಡಿದರು.

ಕಾರ್ಯಾಧ್ಯಕ್ಷ ಸ್ಥಾನಕ್ಕೆ ಯಾವದೇ ಪರಿಹಾರ ಕಾಣದಿದ್ದುದರಿಂದ, ಹಿಂದೆ ನಡೆದುಕೊಂಡು ಬಂದ ರೀತಿ ದಶಮಂಟಪ ಸಮಿತಿ ಅಭ್ಯರ್ಥಿ ರಾಬಿನ್ ದೇವಯ್ಯ ಅವರು ಕಾರ್ಯಾಧ್ಯಕ್ಷರಾಗಲಿ ಎಂದು ಜಿಲ್ಲಾಧಿಕಾರಿಗಳು ಅಭಿಪ್ರಾಯಪಟ್ಟರು.

ಈ ಸಂದರ್ಭ ಎದ್ದುನಿಂತ ಚಿದ್ವಿಲಾಸ್ ಅವರು, ಚುನಾವಣಾ ಪ್ರಕ್ರಿಯೆಯಲ್ಲಿ ಇಬ್ಬರು ಅಭ್ಯರ್ಥಿಗಳು ಇರುವಾಗ ಒಬ್ಬರ ಹೆಸರನ್ನು ಘೋಷಿಸಲು ಸಾಧ್ಯವಿಲ್ಲ ಎಂದು ಜಿಲ್ಲಾಧಿಕಾರಿಗಳಿಗೆ ಮನವರಿಕೆ ಮಾಡಿದರಲ್ಲದೆ, ಅಂತಹಾ ಸಂದರ್ಭ ಬಂದರೆ ತಾನು ನ್ಯಾಯಾಲಯದ ಮೊರೆ ಹೋಗಲು ಸಿದ್ಧವಿದ್ದು, ದಸರಾ ವ್ಯವಸ್ಥೆ ಸರಿಯಾಗಲೇ ಬೇಕೆಂದು ಪಟ್ಟು ಹಿಡಿದರು.

ಈಗಾಗಲೇ ಕಾರ್ಯಾಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಯಾಗಿ ಆಯ್ಕೆಗೊಂಡಿದ್ದ ರಾಬಿನ್ ದೇವಯ್ಯ ಮಾತನಾಡಿ, ದಶಮಂಟಪ ಸಮಿತಿಯು ಸಮ್ಮತಿಸಿದರೆ ತಾವು ಕಾರ್ಯಾಧ್ಯಕ್ಷ ಸ್ಥಾನವನ್ನು ತ್ಯಜಿಸಲು ಸಿದ್ಧವಿರುವದಾಗಿ ನುಡಿದರಲ್ಲದೆ, ಜಿಲ್ಲಾಧಿಕಾರಿಗಳ ಸಮ್ಮುಖ ಸಭೆಯಲ್ಲಿ ಗೊಂದಲ ಸೃಷ್ಟಿಸಲೆಂದೇ ಕೆಲವರು ಬಂದಿರುವದಾಗಿ ವ್ಯಾಖ್ಯಾನಿಸಿದರು.

ಪರಿಸ್ಥಿತಿಯ ಸೂಕ್ಷ್ಮತೆ ಅರಿತ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು, ಅಂತಿಮವಾಗಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು ತಾ. 6 ಕ್ಕೆ ಮುಂದೂಡಿ ನಿರ್ಗಮಿಸಿದರು. ಸಭೆಯಲ್ಲಿ ನಗರಸಭೆ ಮಾಜಿ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ, ದಶಮಂಟಪ ಸಮಿತಿ ಅಧ್ಯಕ್ಷ ರಂಜಿತ್ ಸೇರಿದಂತೆ ದಸರಾ ಸಮಿತಿ ಮಾಜಿ ಕಾರ್ಯದರ್ಶಿ ಚುಮ್ಮಿ ದೇವಯ್ಯ ಅವರುಗಳು ಅಭಿಪ್ರಾಯ ವ್ಯಕ್ತಪಡಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ., ಜಿ.ಪಂ. ಮುಖ್ಯ ಕಾಂiÀರ್iನಿರ್ವಹಣಾಧಿಕಾರಿ ಕೆ. ಲಕ್ಷ್ಮಿಪ್ರಿಯ, ನಗರಸಭಾ ಆಯುಕ್ತ ಎಲ್. ರಮೇಶ್‍ಕುಮಾರ್ ಉಪಸ್ಥಿತರಿದ್ದರು.

ನಗರ ಪೊಲೀಸ್ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ, ಇನ್ಸ್‍ಪೆಕ್ಟರ್ ಐ.ಪಿ. ಮೇದಪ್ಪ ಅವರುಗಳು ಪಾಲ್ಗೊಂಡಿದ್ದರು.