ಮಡಿಕೇರಿ, ಸೆ. 4: ಕೊಡಗು ಜಿಲ್ಲೆಯಾದ್ಯಂತ ಮಳೆಯ ಅಬ್ಬರ ಹೆಚ್ಚಾಗಿದೆ. ಎಡೆಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಳ್ಳುತ್ತಿದ್ದು, ಆತಂಕದ ವಾತಾವರಣ ಸೃಷ್ಟಿಯಾಗಿದೆ. ರಭಸದೊಂದಿಗೆ ಸುರಿಯುತ್ತಿರುವ ಮಳೆಯಿಂದಾಗಿ ನದಿ - ತೊರೆಗಳಲ್ಲಿ ನೀರಿನಮಟ್ಟ ಏರಿಕೆಯಾಗುತ್ತಿದ್ದು, ಕಾವೇರಿ ಕ್ಷೇತ್ರ ಭಾಗಮಂಡಲದಲ್ಲಿ ತ್ರಿವೇಣಿ ಸಂಗಮ ಭರ್ತಿಯಾಗಿದೆ. ಭಾಗಮಂಡಲ- ಮಡಿಕೇರಿ ಮಾರ್ಗ ಹಾಗೂ ಭಾಗಮಂಡಲ - ಅಯ್ಯಂಗೇರಿ ರಸ್ತೆ ಸಂಪರ್ಕ ಕಡಿತಗೊಂಡಿದೆ. ಜಿಲ್ಲೆಯ ಅಲ್ಲಲ್ಲಿ ಮರಗಳು ಧರೆಗುರುಳುತ್ತಿವೆ. ಕೆಲಪ್ರದೇಶಗಳಲ್ಲಿ ಭೂಕುಸಿತವೂ ಸಂಭವಿಸಿದೆ. ತಾ. 5ರಂದು (ಇಂದು) ಕೂಡ ಮಳೆಯ ಪ್ರಮಾಣ ಹೆಚ್ಚಾಗಲಿರುವದಾಗಿ ಹವಾಮಾನ ಇಲಾಖೆ ಮಾಹಿತಿ ನೀಡಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ರೆಡ್ ಅಲರ್ಟ್ ಘೋಷಣೆಯೊಂದಿಗೆ ಜಿಲ್ಲೆಯ ಶಾಲಾ - ಕಾಲೇಜು, ಅಂಗನವಾಡಿಗಳಿಗೆ ತಾ. 5ರಂದು (ಇಂದು) ರಜೆ ನೀಡಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಆದೇಶ ಹೊರಡಿಸಿದ್ದಾರೆ. ಪ್ರಕೃತಿ ವಿಕೋಪ ಸಂಬಂಧಿತ ಯಾವದೇ ಸಮಸ್ಯೆಗಳಿಗೆ ತುರ್ತು ಸೇವೆಗೆ ಟೋಲ್‍ಫ್ರೀ ಸಂಖ್ಯೆ : 08272-221077 ಹಾಗೂ ವಾಟ್ಸ್ಯಾಪ್ 8550001077 ಅನ್ನು ಸಂಪರ್ಕಿಸಬಹುದೆಂದು ಅವರು ತಿಳಿಸಿದ್ದಾರೆ.

ದಕ್ಷಿಣ ಕೊಡಗಿನಲ್ಲೂ ಭಾರೀ ಮಳೆ

ಶ್ರೀಮಂಗಲ: ದಕ್ಷಿಣ ಕೊಡಗಿ ನಾದ್ಯಂತ ಮಂಗಳವಾರ ರಾತ್ರಿಯಿಂದ ಗಾಳಿ ಸಹಿತ ಭಾರೀ ಮಳೆಯಾ ಗುತ್ತಿದ್ದು, ಈ ವ್ಯಾಪ್ತಿಯ ಘಟ್ಟ ಪ್ರದೇಶದಲ್ಲಿ ನಿರಂತರ ಮಳೆ ಯಾಗುತ್ತಿದೆ.

(ಮೊದಲ ಪುಟದಿಂದ)

ಶ್ರೀಮಂಗಲ, ಹುದಿಕೇರಿ, ಟಿ.ಶೆಟ್ಟಿಗೇರಿ, ಬಿರುನಾಣಿ,ಬಿ.ಶೆಟ್ಟಿಗೇರಿ, ಕುಟ್ಟ, ಪೊನ್ನಂಪೇಟೆ, ಬಲ್ಯಮಂಡೂರು, ನಾಲ್ಕೇರಿ, ಕೆ.ಬಾಡಗ, ಕಾನೂರು, ನಿಟ್ಟೂರು, ಬಾಳೆಲೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಭಾರೀ ಮಳೆಯಾಗುತ್ತಿದೆ. ಈ ವ್ಯಾಪ್ತಿಗೆ ಬುಧವಾರ ನಿರಂತರ ಮಳೆಯಾಗಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದೆ.

ಘಟ್ಟ ಪ್ರದೇಶದ ಶ್ರೀಮಂಗಲ, ಹುದಿಕೇರಿ, ಟಿ.ಶೆಟ್ಟಿಗೇರಿ, ಬಿರುನಾಣಿ, ಬಿ.ಶೆಟ್ಟಿಗೇರಿ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಮಳೆಯಾಗಿದ್ದು, ಕಳೆದ 24 ಗಂಟೆಯಲ್ಲಿ 4.30 ರಿಂದ 5.50 ಇಂಚು (108 ರಿಂದ 137.5 ಮಿ.ಮೀ) ಮಳೆಯಾಗಿದೆ.

ಈಗಾಗಲೇ ಈ ವ್ಯಾಪ್ತಿಯಲ್ಲಿ ಆಗಸ್ಟ್ 2 ರಿಂದ 12 ರ ವರೆಗೆ ಸುರಿದ ಭಾರೀ ಮಳೆಯಿಂದ ಪ್ರವಾಹ, ಭೂ ಕುಸಿತಕ್ಕೆ ತುತ್ತಾಗಿ ಭಾರೀ ಪ್ರಮಾಣದಲ್ಲಿ ಆಸ್ತಿ ಪಾಸ್ತಿಗಳಿಗೆ ಮತ್ತು ಬೆಳೆಗಳಿಗೆ ಹಾನಿಯಾಗಿದೆ. ಇದೀಗ ಮತ್ತೆ ನಿರಂತರವಾಗಿ ಸುರಿಯುತ್ತಿರುವ ಮಹಾ ಮಳೆಗೆ ಜನರು ತೀವ್ರ ಆತಂಕದಲ್ಲಿದ್ದಾರೆ.

ದಕ್ಷಿಣ ಕೊಡಗಿನ ಘಟ್ಟ ಪ್ರದೇಶದಲ್ಲಿ ಹುಟ್ಟಿ ಹರಿಯುವ ಲಕ್ಷ್ಮಣ ತೀರ್ಥ, ಕಕ್ಕಟ್ಟ್ ಪೊಳೆ, ಕೊಂಗಣ ಪೊಳೆ ನದಿಗಳು ಭಾರೀ ಮಳೆಯಿಂದ ನೀರಿನ ಮಟ್ಟ ಏರಿಕೆಯಾಗಿದೆ.

ವೀರಾಜಪೇಟೆ ವಿಭಾಗಕ್ಕೆ ನಿನ್ನೆ ಬೆಳಗಿನಿಂದ ಇಂದು ಬೆಳಗಿನ 8 ಗಂಟೆಯ ತನಕ 1.8 ಇಂಚುಗಳಷ್ಟು ಮಳೆ ಸುರಿದಿದೆ.

ನಾಪೆÇೀಕ್ಲು ಧಾರಾಕಾರ ಮಳೆ

ಮಂಗಳವಾರ ಸಂಜೆಯಿಂದ ನಾಪೆÇೀಕ್ಲು ವ್ಯಾಪ್ತಿಯ ಗ್ರಾಮಗಳಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ.

ಮಳೆ, ಗಾಳಿಯ ಹಿನ್ನೆಲೆಯಲ್ಲಿ ಈ ಪ್ರದೇಶ ಮಂಜು ಮತ್ತು ಮೋಡ ತುಂಬಿದ ವಾತಾವರಣದಿಂದ ಕತ್ತಲಾವರಿಸಿ ಜನ ಚಿಂತಾಕ್ರಾಂತರಾಗಿ ದ್ದಾರೆ. ಬೆಟ್ಟ ಪ್ರದೇಶಗಳಿಗೆ ಹೊಂದಿ ಕೊಂಡಂತಿರುವ ಚೇಲಾವರ, ಮರಂದೋಡ, ಯವಕಪಾಡಿ, ನಾಲಡಿ, ನೆಲಜಿ, ಪೇರೂರು ಗ್ರಾಮಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿಯುತ್ತಿರುವದಾಗಿ ಗ್ರಾಮಸ್ಥರು ತಿಳಿಸಿದ್ದಾರೆ.

ಈ ವ್ಯಾಪ್ತಿಯಲ್ಲಿ ಕಳೆದ ಒಂದು ತಿಂಗಳಿನಿಂದ ಬಿಸಿಲು ಕಾಣಿಸಿಕೊಳ್ಳದ ಹಿನೆÀ್ನಲೆಯಲ್ಲಿ ಕಾಫಿ, ಕಾಳುಮೆಣಸು, ಶುಂಠಿ ಬೆಳೆಗಳಲ್ಲಿ ಕೊಳೆರೋಗ ಕಾಣಿಸಿಕೊಂಡಿದೆ. ಮಳೆಯ ಕಾರಣದಿಂದ ಕೊಳೆರೋಗ ನಿರೋಧಕ ಔಷಧಿ ಸಿಂಪಡಿಸಲು ಸಾಧ್ಯವಾಗುತ್ತಿಲ್ಲ ಎಂದು ಬೆಳೆಗಾರರು ತಮ್ಮ ಅಳಲು ತೋಡಿಕೊಂಡಿದ್ದಾರೆ. ಪ್ರಕೃತಿ ವಿಕೋಪಕ್ಕೆ ಸಿಲುಕಿ ಉಳಿದಿರುವ ಭತ್ತದ ಗದ್ದೆಗಳಲ್ಲಿ ನಾಟಿ ಮಾಡಿದ ಪೈರು ಹೆಚ್ಚಾದ ಮಳೆಯ ಕಾರಣದಿಂದ ಕೊಳೆಯಲು ಆರಂಭಿಸಿದೆ ಎನ್ನುತ್ತಾರೆ ಕೃಷಿಕರು.

ರಸ್ತೆಗೆ ಮರ: ಜೋಡುಪಾಲದಲ್ಲಿ ರಸ್ತೆ ಮೇಲೆ ಮರ ಬಿದ್ದು ಸಂಚಾರಕ್ಕೆ ಅಡಚಣೆಯಾಗಿತ್ತು. ನಂತರ ಮರ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

ಕಾವೇರಿ ಮಟ್ಟ ಏರಿಕೆ

ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿರುವ ಹಿನೆÀ್ನಲೆಯಲ್ಲಿ ಕಾವೇರಿ ನದಿಯಲ್ಲಿ ನೀರಿನ ಹರಿವಿನ ಮಟ್ಟ ಏರಿಕೆ ಕಂಡಿದೆ. ಕುಶಾಲನಗರ ವ್ಯಾಪ್ತಿಯಲ್ಲಿ ನಿರಂತರ ಮಳೆಯಾಗುತ್ತಿದ್ದು, ಜನಜೀವನ ಬಹುತೇಕ ಅಸ್ತವ್ಯಸ್ತಗೊಂಡಿದೆ. ಇತ್ತೀಚೆಗಷ್ಟೆ ಪ್ರವಾಹದಿಂದ ಮುಳುಗಿದ ಮನೆಗಳು ಸಾಮಾನ್ಯ ಸ್ಥಿತಿಗೆ ಮರಳಿದ ಬೆನ್ನಲ್ಲೇ ಮತ್ತೆ ಸುರಿಯುತ್ತಿರುವ ಮಳೆ ನಾಗರಿಕರಲ್ಲಿ ಆತಂಕ ಉಂಟುಮಾಡಿದೆ.

ಕರಿಕೆ: ಕಳೆದ ಕೆಲದಿನಗಳಿಂದ ಕೊಂಚ ಮಟ್ಟಿಗೆ ವಿರಾಮ ತೆಗೆದು ಕೊಂಡ ಮಳೆರಾಯ ಇದೀಗ ತನ್ನ ಪ್ರತಾಪವನ್ನು ತೋರುತ್ತಿದ್ದು, ಎರಡು, ಮೂರು ದಿನಗಳಿಂದ ಎಡೆಬಿಡದೆ ಸುರಿಯುತ್ತಿದೆ. ಇದರಿಂದಾಗಿ ಭಾಗಮಂಡಲ- ಕರಿಕೆ ಅಂತರ್ ರಾಜ್ಯ ಹೆದ್ದಾರಿ ಬದಿ ನಾಲ್ಕೈದು ಕಡೆ ಮರ ಉರುಳಿ ಬಿದ್ದ ಪರಿಣಾಮವಾಗಿ ರಸ್ತೆ ಸಂಚಾರಕ್ಕೆ ಅಡಚಣೆಯಾಗಿತ್ತು ‘ಶಕ್ತಿ’ ಸಿಬ್ಬಂದಿ ಕೂಡ ಎರಡು ಗಂಟೆ ಕಾಲ ಸ್ಥಳದಲ್ಲಿ ಸಿಲುಕಿದ ಘಟನೆ ನಡೆದಿದೆ. ಅಲ್ಲದೆ ಹತ್ತಾರು ಕಡೆಗಳಲ್ಲಿ ಅಲ್ಲಲ್ಲಿ ಭೂ ಕುಸಿತ ಸಂಭವಿಸಿದ್ದು, ಮತ್ತೆ ಕುಸಿಯುವ ಸಾಧ್ಯತೆ ಇದೆ. ಈ ರಸ್ತೆ ಪ್ರಯಾಣ ಅಪಾಯಕಾರಿಯಾಗಿದೆ. ರಾತ್ರಿ ವೇಳೆ ಸಂಚರಿಸುವ ಪ್ರಯಾಣಿಕರು ಎಚ್ಚರಿಕೆ ವಹಿಸಬೇಕಿದೆ. ರಸ್ತೆಗೆ ಬಿದ್ದ ಮರ ತೆರವುಗೊಳಿಸಲು ಪ್ರಯಾಣಿಕರೊಂದಿಗೆ ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದ ಸಿಬ್ಬಂದಿ ಕೈಜೋಡಿಸುತ್ತಿದ್ದು ಇವರಿಗೆ ಸುಸಜ್ಜಿತ ವಾಹನದ ಕೊರತೆಯಿದೆ. ಈ ಅಪಾಯಕಾರಿ ಸನ್ನಿವೇಶದಲ್ಲಿ ಬೈಕಿನಲ್ಲಿ ಓಡಾಟ ಮಾಡುತ್ತಿದ್ದು ಇವರಿಗೆ ಇಲಾಖೆಯ ಜೀಪು ಒದಗಿಸುವದು ಸೂಕ್ತವಾಗಿದೆ. ಈ ಬಗ್ಗೆ ಜಿಲ್ಲಾಡಳಿತ ಗಮನಹರಿಸಬೇಕಿದೆ.