ಮಡಿಕೇರಿ, ಸೆ. 4: ಕೊಡಗು ಜಿಲ್ಲೆಯಲ್ಲಿ ಮಳೆ ಹಾಗೂ ಪ್ರವಾಹ, ಭೂಕುಸಿತದಿಂದ ಹಾನಿಗೊಂಡಿರುವ ರಸ್ತೆಗಳು, ಸೇತುವೆ ಹಾಗೂ ಮೋರಿಗಳ ಸಹಿತ ಶಾಲಾ-ಕಾಲೇಜು, ವಸತಿ ನಿಲಯ, ಕಟ್ಟಡಗಳ ಸಹಿತ ಕೊಡಗಿನ ಸಮಗ್ರ ಅಭಿವೃದ್ಧಿಗೆ ರಾಜ್ಯ ಸರಕಾರ ಕಾಳಜಿ ಹೊಂದಿದೆ ಎಂದು ಕರ್ನಾಟಕ ಉಪ ಮುಖ್ಯಮಂತ್ರಿಯಾಗಿರುವ ಲೋಕೋಪಯೋಗಿ ಮತ್ತು ಸಮಾಜ ಕಲ್ಯಾಣ ಸಚಿವ ಗೋವಿಂದ ಎಂ. ಕಾರಜೋಳ ಭರವಸೆ ನೀಡಿದರು. ಕೊಡಗಿನಲ್ಲಿ ಪ್ರಾಕೃತಿಕ ವಿಕೋಪ ಸಂಬಂಧ ಉಪಮುಖ್ಯಮಂತ್ರಿಗಳು ನಿನ್ನೆ ರಾತ್ರಿ ನಗರಕ್ಕೆ ಆಗಮಿಸುವದರೊಂದಿಗೆ, ಇಲ್ಲಿನ ಸುದರ್ಶನ ಅತಿಥಿ ಗೃಹದಲ್ಲಿ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು. ಅಲ್ಲದೆ, ಇಂದು ಬೆಳಿಗ್ಗೆ ಕೆಲವೆಡೆ ಹೆದ್ದಾರಿ ಸ್ಥಿತಿಗತಿ ವೀಕ್ಷಿಸಿದ ಬಳಿಕ ಕೊಡಗಿನ ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತದೊಂದಿಗೆ ಖುದ್ದು ಚರ್ಚಿಸಿದರು. ಈ ವೇಳೆ ಕೊಡಗಿನ ಬೇಕು-ಬೇಡಿಕೆಗಳನ್ನು ಸರಕಾರ ಪರಿಗಣಿಸಿ ಅಗತ್ಯ ನೆರವು ಕಲ್ಪಿಸಲಿದೆ ಎಂದು ಆಶ್ವಾಸನೆಯಿತ್ತರು.ಉಪ ಮುಖ್ಯಮಂತ್ರಿ ಗೋವಿಂದ ಎಂ. ಕಾರಜೋಳ, ಶಾಸಕರಾದ ಕೆ.ಜಿ. ಬೋಪಯ್ಯ, ಎಂ.ಪಿ. ಅಪ್ಪಚ್ಚುರಂಜನ್, ಸುನಿಲ್ ಸುಬ್ರಮಣಿ,(ಮೊದಲ ಪುಟದಿಂದ) ಜಿ.ಪಂ. ಅಧ್ಯಕ್ಷ ಬಿ.ಎ.ಹರೀಶ್ ಮತ್ತಿತರರ ಉಪಸ್ಥಿತಿಯಲ್ಲಿ ನಗರದ ಅತಿಥಿ ಗೃಹದಲ್ಲಿ ಸಭೆ ನಡೆಯಿತು.

ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಂದ ರಸ್ತೆ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಮಾಹಿತಿ ಪಡೆದರು. ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಂದ ವಿದ್ಯಾರ್ಥಿ ನಿಲಯ ಗಳ ನಿರ್ವಹಣೆ ಮತ್ತು ಸುಧಾರಣೆ ಮತ್ತಿತರ ಬಗ್ಗೆ ಮಾಹಿತಿಯನ್ನು ಉಪ ಮುಖ್ಯಮಂತ್ರಿ ಪಡೆದರು.

ಜಿಲ್ಲೆಯಲ್ಲಿ ರಸ್ತೆಗಳನ್ನು ಶಾಶ್ವತವಾಗಿ ಪುನರ್ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಗಮನಹರಿಸು ವಂತೆ ಸಂಬಂಧಪಟ್ಟ ಎಂಜಿನಿಯರ್ ಗಳಿಗೆ ಅವರು ಸೂಚಿಸಿದರು.

ಎಸ್‍ಸಿಪಿ/ಟಿಎಸ್‍ಪಿ ಕಾಮಗಾರಿ ಗಳು, ನಬಾರ್ಡ್ ಕಾಮಗಾರಿಗಳು, ಕೊಡಗು ವಿಶೇಷ ಪ್ಯಾಕೇಜ್ ಹಾಗೂ ಕಟ್ಟಡಗಳು ಹೀಗೆ ಹಲವು ಕಾಮಗಾರಿಗಳನ್ನು ತ್ವರಿತವಾಗಿ ಕೈಗೊಳ್ಳುವದು, ರಾಜ್ಯ ಹೆದ್ದಾರಿ ನವೀಕರಣ ಮಾಡುವದು, ಮತ್ತಿತರ ಕಾಮಗಾರಿಗಳನ್ನು ಕೈಗೊಳ್ಳುವಂತೆ ಗೋವಿಂದ ಎಂ. ಕಾರಜೋಳ ನಿರ್ದೇಶನ ನೀಡಿದರು.

ವಿದ್ಯಾರ್ಥಿ ನಿಲಯಗಳಲ್ಲಿ ನಿರ್ವಹಣೆ ಉತ್ತಮವಾಗಿರಬೇಕು. ವಿದ್ಯಾರ್ಥಿಗಳು ಹುಷಾರಿಲ್ಲದ ಸಂದರ್ಭದಲ್ಲಿ ಔಷಧೋಪಚಾರ ಒದಗಿಸಬೇಕು. ತಂದೆ ತಾಯಂದಿರಂತೆ ಮಕ್ಕಳನ್ನು ಗಮನಿಸುವಂತೆ ಸೂಚಿಸಿದರಲ್ಲದೆ, ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ, ವಾಜಪೇಯಿ ವಸತಿ ಶಾಲೆ ಸೇರಿದಂತೆ ಎಲ್ಲಾ ವಸತಿ ಶಾಲೆಗಳು ಮತ್ತು ಆಶ್ರಮ ಶಾಲೆಗಳಲ್ಲಿ ಸ್ವಂತ ಜಾಗ ಇರಬೇಕು. ಜಾಗ ಇಲ್ಲದ ಕಡೆಗಳಲ್ಲಿ ತಕ್ಷಣ ಜಾಗ ಗುರುತಿಸಿ ಮಂಜೂರು ಮಾಡುವಂತೆ ಜಿಲ್ಲಾಧಿಕಾರಿ ಅವರಿಗೆ ಉಪ ಮುಖ್ಯಮಂತ್ರಿ ಅವರು ತಿಳಿಸಿದರು.

ಅಭಿವೃದ್ಧಿ ಕಾರ್ಯಗಳ ಬಗ್ಗೆ ಶಾಸಕರ ಗಮನಕ್ಕೆ ತರಬೇಕು. ಆ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುವಂತೆ ಲೋಕೋಪಯೋಗಿ ಮತ್ತು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಸಲಹೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಕೆ.ಜಿ. ಬೋಪಯ್ಯ ಅವರು ಗಿರಿಜನ ಹಾಡಿಗಳಲ್ಲಿ ರಸ್ತೆ, ವಿದ್ಯುತ್ ಸಂಪರ್ಕ, ಕುಡಿಯುವ ನೀರು ಹೀಗೆ ಹಲವು ಮೂಲ ಸೌಲಭ್ಯ ಕಲ್ಪಿಸಬೇಕಿದ್ದು, ಸುಮಾರು 15 ಕೋಟಿ ರೂ. ಕಾಮಗಾರಿ ಆಗಬೇಕಿದೆ. ಆದರೆ ಅರಣ್ಯ ಇಲಾಖೆ ಅಧಿಕಾರಿಗಳಿಂದ ತೊಂದರೆಯಾಗಿದೆ ಎಂದು ಗಮನಕ್ಕೆ ತಂದರು.

ಜಿಲ್ಲೆಯಲ್ಲಿ ತೀವ್ರ ಅತಿವೃಷ್ಟಿ ಯಿಂದ ರಸ್ತೆ, ಸೇತುವೆಗಳು ಹದ ಗೆಟ್ಟಿದ್ದು, ಇವುಗಳನ್ನು ಸರಿಪಡಿಸ ಬೇಕಿದೆ. ಆದ್ದರಿಂದ ಹೆಚ್ಚಿನ ಅನುದಾನ ಬಿಡುಗಡೆ ಮಾಡುವಂತೆ ಅವರು ಉಪ ಮುಖ್ಯಮಂತ್ರಿಯವರಲ್ಲಿ ಕೋರಿದರು.

ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರು ಮಾತನಾಡಿ ತೀವ್ರ ಅತಿವೃಷ್ಟಿ ಯಿಂದಾಗಿ ರಸ್ತೆಗಳು, ಸೇತುವೆಗಳು ತುಂಬಾ ಹದಗೆಟ್ಟಿದ್ದು, ಸೇತುವೆಗಳು ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಅಗತ್ಯ ಕ್ರಮ ಕೈಗೊಳ್ಳಬೇಕಿದೆ. ಲೋಕೋಪಯೋಗಿ ಇಲಾಖೆಯಿಂದ ಹೆಚ್ಚಿನ ಹಣ ಬಿಡುಗಡೆ ಮಾಡುವಂತೆ ಕೋರಿದರು.

ವಿಧಾನ ಪರಿಷತ್ ಸದಸ್ಯರಾದ ಸುನಿಲ್ ಸುಬ್ರಮಣಿ ಅವರು ಕೊಡಗು ಜಿಲ್ಲೆಗೆ ವಿಶೇಷ ಆದ್ಯತೆ ನೀಡಿ ರಸ್ತೆ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡಬೇಕಾಗಿ ಮನವಿ ಮಾಡಿದರು.

ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಜಿಲ್ಲಾಡಳಿತ ಭವನ ಬಳಿ ಮಂಗಳೂರು ರಸ್ತೆ ಕಡೆಗೆ ತಡೆಗೋಡೆ ನಿರ್ಮಾಣಕ್ಕಾಗಿ ಈಗಾಗಲೇ ಟೆಂಡರ್ ಆಹ್ವಾನಿಸ ಲಾಗಿದ್ದು, ಕಾಮಗಾರಿಯನ್ನು ಕೈಗೊಳ್ಳಬೇಕಿದೆ ಎಂದು ಮಾಹಿತಿ ನೀಡಿದರು.

ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ ಗುರುಪ್ರಸಾದ್, ಮುಖ್ಯ ಎಂಜಿನಿಯರ್ ರಮೇಂದ್ರ, ಮಂಗಳೂರು ವಿಭಾಗದ ಅಧೀಕ್ಷಕ ಇಂಜಿನಿಯರ್ ಕಾಂತರಾಜು, ಕಾರ್ಯ ಪಾಲಕ ಎಂಜಿನಿಯರ್ ಇಬ್ರಾಹಿಂ ಅವರು ರಸ್ತೆ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಹಲವು ಮಾಹಿತಿ ನೀಡಿದರು.

ರಾಷ್ಟ್ರೀಯ ಹೆದ್ದಾರಿ ವಿಭಾಗದ ಮುಖ್ಯ ಎಂಜಿನಿಯರ್ ಗಣೇಶ್, ಅಧೀಕ್ಷಕ ಎಂಜಿನಿಯರ್ ರಾಘವನ್, ಕಾರ್ಯಪಾಲಕ ಎಂಜಿನಿಯರ್ ಹೊಳ್ಳ ಅವರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಮಾಹಿತಿ ನೀಡಿದರು.

ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಭಾರತಿ ಅವರು ವಿದ್ಯಾರ್ಥಿ ನಿಲಯಗಳ ನಿರ್ವಹಣೆ, ವಸತಿ ಶಾಲೆಗಳಿಗೆ ಸ್ವಂತ ಜಾಗ ಮತ್ತಿತರ ಬಗ್ಗೆ ಉಪ ಮುಖ್ಯಮಂತ್ರಿ ಅವರ ಗಮನಕ್ಕೆ ತಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ., ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ. ಲಕ್ಷ್ಮೀಪ್ರಿಯಾ, ಉಪ ವಿಭಾಗಾಧಿಕಾರಿ ಟಿ.ಜವರೇಗೌಡ, ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ ಗುರುಪ್ರಸಾದ್, ಮುಖ್ಯ ಇಂಜಿನಿಯರ್ ರಮೇಂದ್ರ, ಮಂಗಳೂರು ವಿಭಾಗದ ಅಧೀಕ್ಷಕರ ಇಂಜಿನಿಯರ್ ಕಾಂತರಾಜು, ಕಾರ್ಯಪಾಲಕ ಇಂಜಿನಿಯರ್ ಇಬ್ರಾಹಿಂ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಶಿವರಾಮ್, ಸುರೇಶ್, ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಚಿಕ್ಕ ಬಸವಯ್ಯ, ಶೇಖರ್, ದೇವರಾಜು ಇತರರು ಇದ್ದರು.

ಮಡಿಕೇರಿ-ಸಂಪಾಜೆ ಹೆದ್ದಾರಿ ವೀಕ್ಷಣೆ

ಉಪ ಮುಖ್ಯಮಂತ್ರಿ, ಲೋಕೋಪಯೋಗಿ ಮತ್ತು ಸಮಾಜ ಕಲ್ಯಾಣ ಸಚಿವರಾದ ಗೋವಿಂದ ಎಂ.ಕಾರಜೋಳ ಅವರು ಇಂದು ಬೆಳಿಗ್ಗೆ ಮಡಿಕೇರಿ-ಸಂಪಾಜೆ ಮಾರ್ಗ ರಾಷ್ಟ್ರೀಯ ಹೆದ್ದಾರಿಯನ್ನು ವೀಕ್ಷಿಸಿದರು.

ಮಡಿಕೇರಿ, ಕಾಟಕೇರಿ, 2 ನೇ ಮೊಣ್ಣಂಗೇರಿ ಬಳಿ ಕುಸಿದಿರುವ ರಾಷ್ಟ್ರೀಯ ಹೆದ್ದಾರಿಯನ್ನು ಉಪ ಮುಖ್ಯಮಂತ್ರಿ ಪರಿಶೀಲಿಸಿದರು.

ಬಳಿಕ ಮಾತನಾಡಿದ ಉಪ ಮುಖ್ಯಮಂತ್ರಿ ಗೋವಿಂದ ಎಂ. ಕಾರಜೋಳ ಅವರು ಧಾರಾಕಾರ ಮಳೆ ಹಾಗೂ ಪ್ರವಾಹದಿಂದಾಗಿ ಮಡಿಕೇರಿ-ಸಂಪಾಜೆ, ಕೊಣನೂರು-ಮಾಕುಟ್ಟ, ವೀರಾಜಪೇಟೆ-ಕೊಡ್ಲಿಪೇಟೆ ಹೀಗೆ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿ ರಸ್ತೆಗಳು ಕುಸಿದಿವೆ, ಸೇತುವೆಗಳು ಹದಗೆಟ್ಟಿವೆ ಆ ನಿಟ್ಟಿನಲ್ಲಿ ರಸ್ತೆ, ಸೇತುವೆಗಳನ್ನು ಪುನರ್ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಸರ್ಕಾರ ಮುಂದಾಗಿದ್ದು, ಈಗಾಗಲೇ ಮುಖ್ಯಮಂತ್ರಿ ಅವರು 536 ಕೋಟಿ ರೂ. ವಿಶೇಷ ಪ್ಯಾಕೇಜ್‍ನ್ನು ಘೋಷಿಸಿದ್ದು, ಲೋಕೋಪಯೋಗಿ ಇಲಾಖೆಯಿಂದ ಹೆಚ್ಚುವರಿಯಾಗಿ 58 ಕೋಟಿ ರೂ. ಬಿಡುಗಡೆ ಮಾಡಲಾಗುವದು ಎಂದು ತಿಳಿಸಿದರು.

ರಸ್ತೆ, ಸೇತುವೆ ಮತ್ತಿತರ ಕಾಮಗಾರಿಗಳನ್ನು ಕೈಗೊಳ್ಳಲು ರಾಜ್ಯದಲ್ಲಿ ಸುಮಾರು ಒಂದು ಸಾವಿರ ಕೋಟಿ ರೂ.ಗೂ ಹೆಚ್ಚು ಹಣ ಬೇಕಿದೆ. ಆ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವದು ಎಂದು ಉಪ ಮುಖ್ಯಮಂತ್ರಿ ಹೇಳಿದರು.

ಶಾಸಕ ಕೆ.ಜಿ. ಬೋಪಯ್ಯ ತೀವ್ರ ಅತಿವೃಷ್ಟಿಯಿಂದಾಗಿ ಜಿಲ್ಲೆಯಲ್ಲಿ ರಸ್ತೆ ಮತ್ತು ಸೇತುವೆಗಳು ಹದಗೆಡುತ್ತಿವೆ. ಆದ್ದರಿಂದ ಶಾಶ್ವತ ಕಾಮಗಾರಿ ನಿರ್ಮಾಣ ಮಾಡಬೇಕಿದೆ ಎಂದು ಉಪ ಮುಖ್ಯಮಂತ್ರಿ ಅವರಲ್ಲಿ ಮನವಿ ಮಾಡಿದರು.

ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್, ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಜಿ.ಪಂ. ಸಿಇಒ ಕೆ.ಲಕ್ಷ್ಮೀ ಪ್ರಿಯಾ, ಉಪ ವಿಭಾಗಾಧಿಕಾರಿ ಟಿ.ಜವರೇಗೌಡ, ಲೋಕೋಪ ಯೋಗಿ ಇಲಾಖೆ ಕಾರ್ಯದರ್ಶಿ ಗುರುಪ್ರಸಾದ್, ಮುಖ್ಯ ಇಂಜಿನಿಯರ್ ರಮೇಂದ್ರ, ಮಂಗಳೂರು ವಿಭಾಗದ ಅಧೀಕ್ಷಕರ ಇಂಜಿನಿಯರ್ ಕಾಂತರಾಜು, ಕಾರ್ಯಪಾಲಕ ಇಂಜಿನಿಯರ್ ಇಬ್ರಾಹಿಂ, ಸಹಾಯಕ ಕಾರ್ಯ ಪಾಲಕ ಇಂಜಿನಿಯರ್‍ಗಳಾದ ಶಿವರಾಮ್, ಸುರೇಶ್, ರಾಷ್ಟ್ರೀಯ ಹೆದ್ದಾರಿ ವಿಭಾಗದ ಮುಖ್ಯ ಇಂಜಿನಿಯರ್ ಗಣೇಶ್, ಅಧೀಕ್ಷಕ ಇಂಜಿನಿಯರ್ ರಾಘವನ್, ಕಾರ್ಯಪಾಲಕ ಇಂಜಿನಿಯರ್ ಎಸ್. ಹೊಳ್ಳ ಇತರರು ಇದ್ದರು.