ಸಿದ್ದಾಪುರ, ಸೆ. 3: ಪ್ರವಾಹದಿಂದಾಗಿ ಮನೆ ಕಳೆದುಕೊಂಡಿರುವ ಸಂತ್ರಸ್ತರಿಗೆ ತಾತ್ಕಾಲಿಕ ಶೆಡ್‍ಗಳನ್ನು ನಿರ್ಮಾಣ ಮಾಡುವ ಮೂಲಕ ಜಮಾಯತ್ ಇಸ್ಲಾಮಿ ಹಿಂದ್ ಸಂಘಟನೆ ಮಾನವೀಯತೆ ಮೆರೆದಿದೆ.

ಮನೆ ಕಳೆದುಕೊಂಡ ಸಂತ್ರಸ್ತರು ಕಳೆದ 20 ದಿನಗಳಿಂದ ಕರಡಿ ಗೋಡಿನ ನಿವಾಸಿಗಳು ಸ್ಥಳೀಯ ಸಮುದಾಯ ಭವನದಲ್ಲಿ ಇರುವ ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ ನೆಲ್ಲಿಹುದಿಕೇರಿ ಬೆಟ್ಟದ ಕಾಡು ಕುಂಬರಗುಂಡಿ ಸಂತ್ರಸ್ತರು ಸ್ಥಳೀಯ ಸರಕಾರಿ ಶಾಲೆಯಲ್ಲಿ ಇರುವ ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಈ ಮಂದಿಗೆ ಶಾಶ್ವತ ಸೂರು ಆಗುವವರೆಗೂ ಆಶ್ರಯ ಪಡೆಯಲು ಇದೀಗ ತಾತ್ಕಾಲಿಕ ಶೆಡ್‍ಗಳನ್ನು ನಿರ್ಮಾಣ ಮಾಡಿಕೊಡಲಾಗುತ್ತಿದೆ. ಜಮಾಅತೆ ಇಸ್ಲಾಮಿ ಹಿಂದ್ ಸ್ವಂತ ಖರ್ಚಿನಿಂದ ವಾಸಕ್ಕೆ ಯೋಗ್ಯವಾದ ಶೆಡ್‍ಗಳನ್ನು ನಿರ್ಮಿಸುತ್ತಿದೆ.

ಜಮಾಅತೆ ಇಸ್ಲಾಮೀ ಹಿಂದ್ ಸಂಘಟನೆಯ ಅಧೀನದಲ್ಲಿ ಸಿದ್ದಾಪುರದ ಎಂ.ಜಿ. ರಸ್ತೆಯಲ್ಲಿರುವ ಹಿರಾ ಮಸೀದಿಯ ಕಟ್ಟಡದಲ್ಲಿ ಹೆಚ್.ಆರ್.ಎಸ್. ಎಂಬ ಹೆಸರಿನಲ್ಲಿ ಸಂತ್ರಸ್ತರ ನೆರವು ಕೇಂದ್ರ ಪ್ರಾರಂಭಿಸಲಾಯಿತು. ರಾಜ್ಯದ ವಿವಿಧೆಡೆಗಳಿಂದ ಹಾಗೂ ಹೊರ ರಾಜ್ಯಗಳ ದಾನಿಗಳಿಂದ ವಸ್ತುಗಳನ್ನು ಹೆಚ್.ಆರ್.ಎಸ್. ತಂಡ ಸಂಗ್ರಹಿಸಿ ಎಲ್ಲಾ ವಸ್ತುಗಳನ್ನು ಒಂದೆಡೆ ಶೇಖರಿಸಿಟ್ಟು ಇದೀಗ ಸಾಮಗ್ರಿಗಳನ್ನು ಕಳೆದುಕೊಂಡ ಸಂತ್ರಸ್ತರಿಗೆ ಜಾತಿಬೇಧವಿಲ್ಲದೆ ಅರ್ಹರನ್ನು ಗುರುತಿಸಿ ಉಚಿತವಾಗಿ ವಿತರಿಸಲಾಗುತ್ತಿದೆ.