ಸಂಪಾಜೆ, ಸೆ. 3 : ಅದು ಕೊಡಗಿನ ಪೆರಾಜೆ ಮತ್ತು ಕರಿಕೆ ಗ್ರಾಮಗಳ ಗಡಿ ಪ್ರದೇಶ ಅಲ್ಲಿ ಸಮೃದ್ಧವಾಗಿ ಬಾನೆತ್ತರಕ್ಕೆ ಬೆಳೆದ ಮರಗಳು, ಕಾಡಿನಲ್ಲಿ ಪ್ರಯಾಣಿಸಿದರೆ ಎಲೆ, ಹೂ, ಬಳ್ಳಿಗಳು, ವಿವಿಧ ಹಣ್ಣುಗಳಿಂದ ಕಂಗೊಳಿಸುವ ವೃಕ್ಷ ಗಳು, ವನ್ಯಜೀವಿಗಳು ಹಾಗೂ ಪಕ್ಷಿಸಂಕುಲಗಳು...

ಪುರಾಣದ ಪ್ರಕಾರ ಭಾಗಮಂಡಲದ ಬ್ರಹ್ಮಗಿರಿ ಬೆಟ್ಟಕ್ಕೆ ಸರಿಸಾಟಿಯಾಗಿ ನಿಲ್ಲುವ ಪೆರಾಜೆಯ ಕೊಳಿಕ್ಕಿಮಲೆ ಬೆಟ್ಟ ಇಂತಹ ಸಮೃದ್ಧ ಪ್ರಕೃತಿಯನ್ನು ಹೊಂದಿರುವ ಪಶ್ಚಿಮ ಘಟ್ಟದ ಸಾಲಿನ ಅರಣ್ಯ ಪ್ರದೇಶ ಮಳೆಗಾಲದ ಸಮಯದಲ್ಲಿ ಜಲಪಾತದ ಮೂಲಕ ವೈವಿಧ್ಯವಾದ ಸೊಬಗನ್ನು ರೂಪಿಸಿ ಪ್ರವಾಸಿಗರನ್ನು ಆಕರ್ಷಿಸುತ್ತಿದೆ ಈ ಕಾನನ.

ಪೆರಾಜೆಯ ನಿಡ್ಯಮಲೆ ಸಮೀಪದ ತೆಂಗಿನಡಿ ಜಲಪಾತವು ಕೊಳಿಕ್ಕಿಮಲೆ ಬೆಟ್ಟದ ಬುಡದಿಂದ ಸುಮಾರು 300 ಅಡಿ ಎತ್ತರದಿಂದ ಬೆಟ್ಟದ ಮೇಲಿನಿಂದ ಬಂಡೆಗಳ ಮೂಲಕ ಆಳವಾದ ಪ್ರಪಾತಕ್ಕೆ ಶುಭ್ರವಾದ ನೀರು ರಭಸದಿಂದ ಭೋರ್ಗರೆಯುವ ನಿಡ್ಯಮಲೆ ತೆಂಗಿನಡಿ ಜಲಪಾತದ ದೃಶ್ಯ ನಯನ ಮನೋಹರವಾಗಿದೆ. ಈ ಜಲಪಾತವು ದಟ್ಟಾರಣ್ಯದಲ್ಲಿ ಇದ್ದು ಮೂಲಸೌಕರ್ಯ ಹಾಗೂ ಪ್ರವಾಸಿಗರಿಗೆ ಮಾಹಿತಿ ಇಲ್ಲದ ಕಾರಣ ನಿರ್ಲಕ್ಷ್ಯಕ್ಕೊಳಗಾಗಿದೆ. ಇದ್ದನ್ನು ಸುಳ್ಯ ನಗರದ ಕೆಲವು ಕಡೆಗಳಲ್ಲಿ ದೂರದಿಂದ ವೀಕ್ಷಿಸಬಹುದಾಗಿದೆ.

ಮಡಿಕೇರಿ ತಾಲೂಕಿನ ಪೆರಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಬರುವ ಈ ತೆಂಗಿನಡಿ ಜಲಪಾತವನ್ನು ಹತ್ತಿರದಿಂದ ವೀಕ್ಷಣೆ ಮಾಡಬೇಕಾದರೆ ಮಡಿಕೇರಿ-ಸುಳ್ಯ ಮುಖ್ಯ ರಸ್ತೆಯ ಪೆರಾಜೆಯಲ್ಲಿ ಇಳಿದು ಅಲ್ಲಿಂದ 9 ಕಿ.ಮೀ ಎತ್ತರಕ್ಕೆ ಪ್ರಯಾಣಿಸಿ ನಿಡ್ಯಮಲೆ ಎಂಬಲ್ಲಿಗೆ ತೆರಳಿ ಅಲ್ಲಿಂದ ಸುಮಾರು ಒಂದು ಗಂಟೆ ಕಾಡಿನ ನಡುವೆ ಹೆಜ್ಜೆ ಹಾಕಿದಾಗ ಹಸಿರು ವೃಕ್ಷಗಳ ನಡುವೆ ಕಾಡಿನ ಇಳಿಜಾರಿನಲ್ಲಿ ಬಂಡೆಕಲ್ಲುಗಳ ಮೇಲೆ ಚೆಂದದ ಜಲಪಾತದ ಚೆಲುವಿನ ನೋಟವನ್ನು ಸವಿಯಬಹುದು. ಜಲಪಾತ ವೀಕ್ಷಣೆಗೆ ಪೆರಾಜೆಯಿಂದ ಯಾವದೇ ಬಸ್ಸಿನ ವ್ಯವಸ್ಥೆ ಇರುವದಿಲ್ಲ. ಹಾಗಾಗಿ ಸ್ವಂತ ವಾಹನದ ಮೂಲಕ ನಿಡ್ಯಮಲೆ ಎಂಬಲ್ಲಿಗೆ ಮಾತ್ರ ಹೋಗಬಹುದಷ್ಟೆ. ಅಲ್ಲಿಂದಾಚೆಗೆ ಟ್ರೆಕ್ಕಿಂಗ್ ಮಾಡಲೇಬೇಕು. ಈ ಜಲಪಾತವು ದಟ್ಟ ಅರಣ್ಯಪ್ರದೇಶದ ಮಧ್ಯೆ ಇರುವ ಕಾರಣ ಅತಿಯಾದ ಮಳೆಯಿಂದ ಕಾಡುದಾರಿ ಸಮರ್ಪಕವಾಗಿ ಇಲ್ಲದಿರುವದರಿಂದ ಜಲಪಾತ ವೀಕ್ಷಣೆಗೆ ತೆರಳುವವರು ಸ್ಥಳೀಯರ ಸಹಾಯ ಪಡೆದುಕೊಳ್ಳುವದು ಉತ್ತಮ. -ಕಿರಣ್ ಕುಂಬಳಚೇರಿ