ಸೋಮವಾರಪೇಟೆ, ಸೆ. 3: ಇಲ್ಲಿಗೆ ಸಮೀಪದ ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇತಿಹಾಸ ಪ್ರಸಿದ್ಧ, ಹೊನ್ನಮ್ಮನ ಕೆರೆಗೆ ಬಾಗಿನ ಅರ್ಪಿಸುವ ಕಾರ್ಯಕ್ರಮ ಸಹಸ್ರಾರು ಭಕ್ತಾದಿಗಳ ಸಮ್ಮುಖದಲ್ಲಿ ನೆರವೇರಿತು.
ಶತಮಾನಗಳ ಹಿಂದೆ ಏಳುಸಾವಿರ ಸೀಮೆಯೆಂದು ಕರೆಯಲ್ಪಡುತ್ತಿದ್ದ ಪ್ರದೇಶದಲ್ಲಿ ಒಮ್ಮಿಂದೊಮ್ಮೆಲೆ ಭೀಕರ ಬರಗಾಲ ಬಂದು ಊರಿನಲ್ಲಿದ್ದ ಬೃಹತ್ ಕೆರೆಯಲ್ಲೂ ಹನಿ ನೀರು ಸಿಗದಾದಾಗ, ಸಾಕ್ಷಾತ್ ಜಲದೇವತೆಯಾಗಿ ಬೃಹತ್ ಕೆರೆಗೆ ಹಾರವಾದ ದೈವಿಕ ಇತಿಹಾಸ ಹೊಂದಿರುವ ಹೊನ್ನಮ್ಮನ ಕೆರೆಗೆ ಗೌರಿ ಹಬ್ಬದ ದಿನದಂದು ಜನಪ್ರತಿನಿಧಿಗಳೂ ಸೇರಿದಂತೆ ಭಕ್ತಾದಿಗಳು ಬಾಗಿನ ಅರ್ಪಿಸಿದರು.
ಸ್ವರ್ಣಗೌರಿ ಹಬ್ಬದ ದಿನದಂದು ಬೆಳಿಗ್ಗೆ ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ಕ್ಷೇತ್ರದಲ್ಲಿರುವ ಶ್ರೀ ಹೊನ್ನಮ್ಮ ತಾಯಿ, ಬಸವೇಶ್ವರ ಗುಡಿಯಲ್ಲಿ ವಿಶೇಷ ಪೂಜೆ ಸಲ್ಲಿಸಿ ಬಾಗಿನವನ್ನು ಕೆರೆಗೆ ಅರ್ಪಿಸಿದರು.
ಮಡಿಕೇರಿ ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಸದಸ್ಯರುಗಳಾದ ಕೆ.ಪಿ.ಚಂದ್ರಕಲಾ, ಬಿ.ಜೆ. ದೀಪಕ್, ಸರೋಜಮ್ಮ, ತಾಲೂಕು ಪಂಚಾಯಿತಿ ಸದಸ್ಯರಾದ ಕುಸುಮ ಅಶ್ವಥ್, ಲೀಲಾವತಿ, ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಳಿಮಳ್ತೆ ದಿವಾಕರ್, ಬಸವೇಶ್ವರ ಹಾಗೂ ಸ್ವರ್ಣಗೌರಿ ಹೊನ್ನಮ್ಮ ಸಮಿತಿ
ದೇವಾಲಯಕ್ಕೆ ಬಂದ ಭಕ್ತಾದಿಗಳು 900 ಅಡಿ ಎತ್ತರದ ಗವಿಬೆಟ್ಟ ಹಾಗೂ ಗುಹೆಗೆ ಭೇಟಿ ನೀಡಿದರು. ಗುಹೆಯೊಳಗೆ 20 ಮೀ. ಕ್ರಮಿಸಿ ಅಲ್ಲಿರುವ ಪುಟ್ಟಕೊಳದ ತೀರ್ಥವನ್ನು ಸ್ವೀಕರಿಸಿದರು. ದೇವಾಲಯ ಸಮಿತಿಯ ಆಶ್ರಯದಲ್ಲಿ ಅನ್ನದಾನ ಕಲ್ಪಿಸಲಾಗಿತ್ತು.
ದೇವಾಲಯ ಸಮಿತಿಯ ಅಧ್ಯಕ್ಷ ಯೋಗೇಶ್ ಅವರೊಂದಿಗೆ ಉಪಾಧ್ಯಕ್ಷ ಹೆಚ್.ವಿ. ರುದ್ರಪ್ಪ, ಕಾರ್ಯದರ್ಶಿ ಚಂದ್ರಶೇಖರ್, ಹರ್ಷಿತ್, ಲೋಕೇಶ್ ಸೇರಿದಂತೆ ಸಮಿತಿಯ ಪದಾಧಿಕಾರಿ ಗಳು ಪ್ರಸಕ್ತ ಸಾಲಿನ ಜಾತ್ರೋತ್ಸವದ ಉಸ್ತುವಾರಿ ವಹಿಸಿದ್ದರು. ಅರ್ಚಕ ಈರಯ್ಯ ಹಿರೇಮಠ್ ನೇತೃತ್ವದಲ್ಲಿ ವಿಶೇಷ ಪೂಜಾ ಕಾರ್ಯಗಳು ನೆರವೇರಿದವು.
ಭಕ್ತಾದಿಗಳು ವಾಹನಗಳಲ್ಲಿ ದೇವಾಲಯಕ್ಕೆ ಆಗಮಿಸಿದ ಹಿನ್ನೆಲೆ ಪೊಲೀಸ್ ಠಾಣಾಧಿಕಾರಿಗಳಾದ ಶಿವಶಂಕರ್, ಮರಿಸ್ವಾಮಿ ಸೇರಿದಂತೆ ಸಿಬ್ಬಂದಿಗಳು ಸಂಚಾರವನ್ನು ಸುಗಮಗೊಳಿಸಿದರು. ಇದರೊಂದಿಗೆ ಸೂಕ್ತ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.
ಪುಸ್ತಕ ಬಿಡುಗಡೆ: ಹೊನ್ನಮ್ಮನ ಕೆರೆಯ ಪೂರ್ವ ಇತಿಹಾಸವನ್ನು ಒಳಗೊಂಡಿರುವ ಪುಸ್ತಕವನ್ನು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಬಿಡುಗಡೆ ಮಾಡಿದರು.
ದೊಡ್ಡಮಳ್ತೆ ನಿವಾಸಿ, ಆದಾಯ ತೆರಿಗೆ ಇಲಾಖೆಯ ನಿವೃತ್ತ ಅಧಿಕಾರಿ ಡಿ.ಎಂ. ಕುಮಾರಪ್ಪ ಬರೆದಿರುವ ‘ಪುಣ್ಯಕ್ಷೇತ್ರ ಹೊನ್ನಮ್ಮನ ಕೆರೆ-ಒಂದು ಕ್ಷೇತ್ರ ದರ್ಶನ’ ಪುಸ್ತಕವನ್ನು ಶಾಸಕರು ಸೇರಿದಂತೆ ಇತರ ಜನಪ್ರತಿನಿಧಿಗಳು ಬಿಡುಗಡೆಗೊಳಿಸಿದರು.
ಪುಸ್ತಕದಲ್ಲಿ ಕೆರೆಗೆ ಆಹುತಿಯಾದ ಹೊನ್ನಮ್ಮನ ಕಥೆ, ಹಾಡು, ಮಣ್ಣೊಡ್ಡನ ಕುತಂತ್ರ, ಬಂಗಾರ ಕಲ್ಲಿನ ಪವಾಡ, ಬಾಗಿನ ಅರ್ಪಣೆಯ ವಿಶೇಷತೆ, ದೇವಾಲಯದಲ್ಲಿ ನಡೆಯುವ ನಿತ್ಯಪೂಜೆ, ವಿಶೇಷ ಪೂಜೆ, ಸಿದ್ದೇಶ್ವರನ ಗುಡಿ, ಗುಹೆ, ಬೆಟ್ಟದ ವಿಶೇಷತೆ, ಸುತ್ತಮುತ್ತಲಿನ ವಿಶೇಷತೆ, ಮತ್ಸ್ಯೋದ್ಯಮದ ಬಗ್ಗೆ ಬೆಳಕು ಚೆಲ್ಲಲಾಗಿದ್ದು, ಇಡೀ ಕ್ಷೇತ್ರದ ಬಗ್ಗೆ ಮಾಹಿತಿ ಹೊಂದಿದೆ ಎಂದು ಶಾಸಕ ಅಪ್ಪಚ್ಚು ರಂಜನ್ ಅಭಿಪ್ರಾಯಿಸಿದರು.
ಕೆರೆಗಳ ಪುನಶ್ಚೇತನ: ಕೆರೆಗಳ ಪುನಶ್ಚೇತನ ಮರೆತರೆ ಮಾನವನ ಬದುಕು ದುಸ್ತರವಾಗುತ್ತದೆ ಎಂದು, ಪಟ್ಟಣದ ಉದ್ಯಮಿ ಹರಪಳ್ಳಿ ರವೀಂದ್ರ ಅಭಿಪ್ರಾಯಿಸಿದರು.
ಹೊನ್ನಮ್ಮನ ಕೆರೆಗೆ ಬಾಗಿನ ಅರ್ಪಿಸಿದ ನಂತರ ಮಾತನಾಡಿದ ಅವರು, ಕೆರೆ ಕಟ್ಟೆಗಳನ್ನು ಉಳಿಸುವತ್ತ ಎಲ್ಲರೂ ಗಮನಹರಿಸಬೇಕು.
ಹೊನ್ನಮ್ಮನ ಕೆರೆಯ ಸುತ್ತಲೂ ಒಂದಿಷ್ಟು ಕೆಲಸಕಾರ್ಯಗಳು ಆಗಬೇಕಿದೆ. ಕೆರೆಯ ರಕ್ಷಣೆಗೆ ಹೆಚ್ಚಿನ ಗಮನ ಹರಿಸಬೇಕಿದೆ ಎಂದು ರವೀಂದ್ರ ತಿಳಿಸಿದರು. ಈ ಸಂದರ್ಭ ಒಕ್ಕಲಿಗರ ಬ್ರಿಗೇಡ್‍ನ ಸಂಚಾಲಕ ಮೋರಿಕಲ್ಲು ಗಿರೀಶ್ ಮಲ್ಲಪ್ಪ ಉಪಸ್ಥಿತರಿದ್ದರು.