*ಗೋಣಿಕೊಪ್ಪಲು, ಸೆ. 3: ಯಾವದೇ ಸಂಘಟನೆ ವೈಯಕ್ತಿಕ ಹಿತಾಸಕ್ತಿಗಳನ್ನು ದೂರಮಾಡಿ ನಿಸ್ವಾರ್ಥತೆಯಿಂದ ಕೆಲಸ ಮಾಡಿದಾಗ ಮಾತ್ರ ಹೆಚ್ಚು ಕಾಲ ತನ್ನ ಅಸ್ತಿತ್ವವನ್ನು ಕಾಪಾಡಿಕೊಳ್ಳಲಿದೆ ಎಂದು ಬಾಳೆಲೆ ವಿಜಯಲಕ್ಷ್ಮಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ. ಜೆ. ಸೋಮಣ್ಣ ಹೇಳಿದರು. ವೀರಾಜಪೇಟೆ ಜಯಪ್ರಕಾಶ್ ನಾರಾಯಣ ಪ್ರೌಢಶಾಲೆಯಲ್ಲಿ ನಡೆದ ತಾಲೂಕು ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಸಂಘಕ್ಕೆ ಯಾವದೇ ಅಪಾಯ ಎದುರಾಗಲಾರದು ಎಂದು ಅಭಿಪ್ರಾಯಪಟ್ಟರು. ದೈಹಿಕ ಶಿಕ್ಷಣ ಪರಿವೀಕ್ಷಕಿ ರತಿ ಕಾರ್ಯಕ್ರಮ ಉದ್ಘಾಟಿಸಿ ಸಂಘಟನೆ ಉತ್ತಮ ಶೈಕ್ಷಣಿಕ ಚಟುವಟಿಕೆ ನಡೆಸಲಿ ಎಂದರು.

ಇತ್ತೀಚಿಗೆ ನಿವೃತ್ತರಾದ ಸ್ಥಳೀಯ ಸೇಂಟ್ ಆನ್ಸ್ ಪ್ರೌಢಶಾಲೆಯ ಮಾರ್ಗರೇಟ್ ಹಾಗೂ ಕಳೆದ ಸಾಲಿನ ಎಸ್ ಎಸ್‍ಎಲ್‍ಸಿಯಲ್ಲಿ ಶೇ. 100 ಫಲಿತಾಂಶ ಪಡೆದ ತಾಲೂಕಿನ 12 ಶಾಲೆಗಳ ಮುಖ್ಯ ಶಿಕ್ಷಕರನ್ನು ಸನ್ಮಾನಿಸಲಾಯಿತು. ಜಿಲ್ಲಾ ಅಕ್ಷರ ದಾಸೋಹ ಅಧಿಕಾರಿ ಪಾಂಡು, ಕ್ಷೀರಭಾಗ್ಯ ಯೋಜನೆ ಅಧಿಕಾರಿ ಕೃಷ್ಣಪ್ಪ, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸುರೇಂದ್ರ ಹಾಜರಿದ್ದರು. - ಎನ್.ಎನ್. ದಿನೇಶ್