ಮಡಿಕೇರಿ, ಸೆ. 3: ಯಾವದೇ ರೈತ ಹಾಗೂ ಬೆಳೆಗಾರ ತನ್ನ ಜಾಗದಲ್ಲಿ ಬೆಳೆಯುವ ಯಾವದೇ ರೀತಿಯ ಮರಗಳ ಮೇಲಿನ ಹಕ್ಕನ್ನು ತಾನೆ. ಹೊಂದಿರುವಂತಾಗಬೇಕು ಎಂಬದು ತನ್ನ ಅಭಿಲಾಷೆಯಾಗಿದ್ದು, ಈ ಬಗ್ಗೆ ಸರ್ಕಾರಗಳೊಂದಿಗೆ ಚರ್ಚಿಸುತ್ತಿರುವದಾಗಿ ಕೊಯಮುತ್ತೂರು ಈಶಾ ಫೌಂಡೇಶನ್ ಸಂಸ್ಥಾಪಕ ಹಾಗೂ ಕಾವೇರಿ ಕೂಗು ಆಂದೋಲನದ ರೂವಾರಿ ಆಧ್ಯಾತ್ಮಿಕ ಗುರು ಹಾಗೂ ಚಿಂತಕ ಸದ್ಗುರು ಜಗ್ಗಿ ವಾಸುದೇವ್ ಹೇಳಿದರು.ಇಂದು ಮುಂಜಾನೆ ತಲಕಾವೇರಿಯಲ್ಲಿ ಪ್ರಾರಂಭಿಸಿದ ಕಾವೇರಿ ಕೂಗು ಆಂದೋಲನದ ಬೈಕ್‍ರ್ಯಾಲಿ ಮಡಿಕೇರಿಗೆ ತಲಪಿದ ಬಳಿಕ ಕ್ರಿಸ್ಟಲ್ ಹಾಲ್‍ನಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಅವರು ಮಾತನಾಡಿದರು. ಉದ್ಯಮಿಗಳು ತಯಾರಿಸಿದ ವಸ್ತುಗಳನ್ನು ಯಾವದೇ ರೂಪದಲ್ಲಿ ಯಾರಿಗಾದರೂ ಅಧಿಕೃತವಾಗಿ ಮಾರಾಟ ಮಾಡಬಹುದಾದರೆ ರೈತರು ಬೆಳೆದ ಮರವನ್ನು ಯಾಕೆ ಮಾರುವಂತಿಲ್ಲ ಎಂದು ಪ್ರಶ್ನಿಸಿದ ಸದ್ಗುರು ಮರ ಉತ್ಪಾದನೆಯನ್ನು ಅರಣ್ಯ ಉತ್ಪನ್ನ ಎಂದು ಉಲ್ಲೇಖಿಸಿದ್ದು, ಅದು ಕೃಷಿ ಉತ್ಪನ್ನವಾದರೆ ಮಾತ್ರ ರೈತರಿಗೆ ಅದರ ಅನುಕೂಲವಿರುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. ತನ್ನ ಅರಿವಿಗಿರುವಂತೆ ಕರ್ನಾಟಕದಲ್ಲಿ ಸುಮಾರು 28 ವಿವಿಧ ರೀತಿಯ ಮರಗಳು, ತಮಿಳುನಾಡಿನಲ್ಲಿ 10 ರೀತಿಯ ಮರಗಳು ಹಾಗೂ ಕೇಂದ್ರ ಸರ್ಕಾರ ಸುಮಾರು 18 ಜಾತಿಯ ಮರಗಳ ಮೇಲಿನ ಹಕ್ಕನ್ನು ಬೆಳೆಗಾರನಿಗೆ ನೀಡಿದ್ದು, ಎಲ್ಲಾ ರೀತಿಯ ಮರಗಳನ್ನು ವಿಲೇವಾರಿ ಮಾಡುವ ಸ್ವಾತಂತ್ರ್ಯ ಬೆಳೆಗಾರನಿಗೆ ನೀಡಿದರೆ, ಮಾತ್ರ ಗಿಡಗಳನ್ನು ನೆಡುವ, ಬೆಳೆಸುವ ಹಾಗೂ ಅಭಿವೃದ್ಧಿ ಪಡಿಸುವ ಆಸಕ್ತಿಯನ್ನು ಆತ ಹೊಂದಿರುತ್ತಾನೆ ಎಂದು ಜಗ್ಗಿ ಪ್ರತಿಪಾದಿಸಿದರು.

(ಮೊದಲ ಪುಟದಿಂದ)

ನರ್ಸರಿಗೆ ಜಾಗ ಕೊಡಿ

ತಾವು ಉದ್ದೇಶಿಸಿರುವ 242 ಕೋಟಿ ಮರಗಳನ್ನು ಕರ್ನಾಟಕ ಮತ್ತು ತಮಿಳುನಾಡಿನ ಕಾವೇರಿ ಜಲಾನಯನ ಪ್ರದೇಶದಲ್ಲಿ ನೆಡಲು 350 ನರ್ಸರಿಗಳನ್ನು ಹೆಚ್ಚುವರಿಯಾಗಿ ಮಾಡಬೇಕಿದ್ದು, ಕೊಡಗಿನ ಹವಾಗುಣ ಅತ್ಯಂತ ಸೂಕ್ತವಾಗಿರುವದರಿಂದ ತಾತ್ಕಾಲಿಕವಾಗಿ ಜಾಗಗಳನ್ನು ನೀಡಿ ಕಾವೇರಿಯನ್ನು ರಕ್ಷಿಸುವ ಕಾರ್ಯದಲ್ಲಿ ಕೈಜೋಡಿಸುವಂತೆ ಸದ್ಗುರು ಕೊಡಗಿನ ಜನತೆಗೆ ಕರೆ ನೀಡಿದರು.

ತಲಕಾವೇರಿಯಲ್ಲಿ ಹುಟ್ಟಿ ತಮಿಳುನಾಡಿನಲ್ಲಿ ಸಮುದ್ರ ಸೇರುವ ಕಾವೇರಿ ಕೇವಲ 5-6 ತಿಂಗಳು ಮಾತ್ರ ಪೂರ್ಣ ಪ್ರಮಾಣದಲ್ಲಿ ಹರಿಯುತ್ತಿದ್ದು, ಸಮುದ್ರಕ್ಕಿಂತ ಸುಮಾರು 175 ಕಿ.ಮೀ. ಹಿಂದೆಯೇ ಬತ್ತಿ ಹೋಗುತ್ತಿರುವದು ದುರಂತ ಎಂದು ಬಣ್ಣಿಸಿದ ಸದ್ಗುರುಗಳು ಕಾವೇರಿ ಸದಾಕಾಲ ಹರಿಯುವಂತೆ ಮಾಡುವದೇ, ಕಾವೇರಿ ಕೂಗು ಅಭಿಯಾನದ ಉದ್ದೇಶ ಎಂದರು. ಗಿಡ ನೆಡುವದು ಕೇವಲ ಸಸಿ ನೆಡುವ ಕಾರ್ಯಕ್ರಮವಾಗಿರದೆ ರೈತರಿಗೆ ಆರ್ಥಿಕ ಬೆಳವಣಿಗೆಯನ್ನು ಒದಗಿಸುವ ಪ್ರಕ್ರಿಯೆ ಆಗಿದೆ ಎಂದು ವಿವರಣೆ ನೀಡಿದ ಅವರು ಕೊಡಗಿನಿಂದ ಹರಿಯುವ ನೀರು ಮಣ್ಣು ಮಿಶ್ರಣಗೊಂಡು ಕೆಂಪು ನೀರಾಗಿ ಕೆಆರ್‍ಎಸ್‍ಗೆ ಸೇರುತ್ತಿರುವದು ಆತಂಕಕಾರಿ ಎಂದರಲ್ಲದೆ, ಕೊಡಗು ಹಸಿರಾಗಿದ್ದರೂ ಮಣ್ಣು ನೀರಿನೊಂದಿಗೆ ಸೇರುತ್ತಿರುವದು ತಡೆಗಟ್ಟಬೇಕಿದೆ ಎಂದರು.

ತಪ್ಪು ಮಾಹಿತಿ

ಸಭಾಕಾರ್ಯಕ್ರಮದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಸದ್ಗುರು ಕಾವೇರಿ ಜಲಾನಯನ ಪ್ರದೇಶವನ್ನು ಸೂಕ್ಷ್ಮ ಪರಿಸರ ಪ್ರದೇಶವನ್ನಾಗಿ ಮಾಡುವಂತೆ ತಾವು ಸರ್ಕಾರಕ್ಕೆ ಈ ಹಿಂದೆ ವರದಿ ಸಲ್ಲಿಸಿದ್ದೇನೆ ಎನ್ನುವದು ತಪ್ಪು ಮಾಹಿತಿಯಾಗಿದ್ದು, ಸುಮಾರು 760 ಪುಟಗಳ ವರದಿಯನ್ನು ಸಂಪೂರ್ಣ ವಾಗಿ ಅಧ್ಯಯನ ಮಾಡಿದರೆ ತಮ್ಮ ಉದ್ದೇಶದ ಅರಿವಾಗುತ್ತದೆ ಎಂದು ತಮ್ಮನ್ನು ಪ್ರಶ್ನಿಸಿದ ಮಂದಿಗೆ ಮಾರುತ್ತರ ನೀಡಿದರು.

ಆಧ್ಯಾತ್ಮಿಕಕ್ಕೆ ಭಿನ್ನವಾದ ಸಸಿ ನೆಡುವ ಕಾರ್ಯಕ್ರಮದ ಬಗ್ಗೆ ಪ್ರಶ್ನಿಸಿದಾಗ ಆಧ್ಯಾತ್ಮಿಕ ನೆಮ್ಮದಿಗೆ ಪ್ರತಿಯೊಬ್ಬರೂ ಲೌಖಿಕ ಸುಖದಲ್ಲಿರಬೇಕು ಆ ಸುಖಕ್ಕೆ ನೀರು ಕೂಡ ಅವಶ್ಯ ಎಂದು ಸಮರ್ಥಿಸಿದರಲ್ಲದೆ, ಜೀವನ ವಿನೂತನ ರೀತಿಯದ್ದು ಎಂದು ವಿಶ್ಲೇಷಿಸಿದರು.

ಅತಿಥಿಯಾಗಿ ಪಾಲ್ಗೊಂಡಿದ್ದ ಚಿಕ್ಕಮಂಗಳೂರು ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ಕಾವೇರಿ ನದಿಯನ್ನು ಸಂರಕ್ಷಿಸುವ ನಿಟ್ಟಿನಲ್ಲಿ ನದಿ ತಟದಲ್ಲಿ ಆಗಿರುವಂತಹ ಒತ್ತುವರಿಯನ್ನು ತೆರವುಗೊಳಿಸುವ ಕೆಲಸವನ್ನು ಸರ್ಕಾರಗಳು ಮಾಡಬೇಕಿದೆ ಎಂದರು. ಕಾವೇರಿ ಕೂಗು ಅಭಿಯಾನಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬೆಂಬಲ ನೀಡಲಿವೆ. ಕರ್ನಾಟಕದಲ್ಲಿ ನೀರಿನ ಕೊರತೆಯಿದೆ. ಆದರೆ ತಮಿಳುನಾಡಿನವರಿಗೆ ಈ ವಾಸ್ತವದ ಅರಿವಿಲ್ಲವಾದ್ದರಿಂದ ನೀರಿಗಾಗಿ ಒತ್ತಾಯಿಸುತ್ತಾರೆ. ಇಲ್ಲಿನ ನೀರಿನ ಕೊರತೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಜಾಗೃತಗಾರಬೇಕಿದೆ ಎಂದು ಅಭಿಪ್ರಾಯಿಸಿದರು.

ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಕೊಡಗಿನ ಕಾವೇರಿ ನದಿ ಮಲೀನವಾಗಿದೆ. ಇದು ಇಂದು ನಿನ್ನೆಯ ಸತ್ಯವಲ್ಲ. ಪವಿತ್ರವಾದ ಕಾವೇರಿ ನದಿ ಕಸ ವಿಲೇವಾರಿ ಸ್ಥಳವಾಗಿ ಮಾರ್ಪಾಡಾಗುತ್ತಿದೆ ಎಂದು ವಿಷಾದಿಸಿದರು. ಕಾವೇರಿ ನದಿ ಹುಟ್ಟುವ ವ್ಯಾಪ್ತಿಯಲ್ಲಿ ಎಂದಿಗೂ ಮಳೆಗೆ ಕೊರತೆ ಉಂಟಾಗಿಲ್ಲ. ಏಕೆಂದರೆ ಈ ವ್ಯಾಪ್ತಿಯಲ್ಲಿ ಅರಣ್ಯ ಸಂರಕ್ಷಿಸಲ್ಪಟ್ಟಿದೆ. ಉಳಿದೆಡೆ ಅರಣ್ಯ ನಾಶವಾಗುತ್ತಿದೆ. ಕೊಡಗಿನಲ್ಲಿ ಪೂರ್ವಿಕರು ಆರಾಧಿಸಿಕೊಂಡು ಬಂದ ದೇವರ ಕಾಡುಗಳು ಕೂಡ ವೈಜ್ಞಾನಿಕತೆ ಬೆಳೆದಂತೆ ಕಣ್ಮರೆಯಾಗುತ್ತಿದ್ದು, ದೇವರ ಕಾಡುಗಳನ್ನು ಸಂರಕ್ಷಿಸಲೇಬೇಕಾದ ಅನಿವಾರ್ಯತೆ ಇದೆ ಎಂದು ಅಭಿಪ್ರಾಯಪಟ್ಟರು.

ನಿವೃತ್ತ ಏರ್ ಮಾರ್ಷಲ್ ಕೆ.ಸಿ. ಕಾರ್ಯಪ್ಪ ಮಾತನಾಡಿ, ಅಭಿವೃದ್ಧಿ ಹೆಸರಿನಲ್ಲಿ ಅರಣ್ಯ ನಾಶ ಸರಿಯಲ್ಲ. ಕಾಡುಗಳನ್ನು ಉಳಿಸುವದು ಪ್ರತಿಯೊಬ್ಬರ ಜವಾಬ್ದಾರಿ. ಪಶ್ಚಿಮ ಘಟ್ಟ ಹಾಗೂ ಕಾವೇರಿ ನದಿ ಭಾರತದ ಆಸ್ತಿಯಾಗಿದ್ದು, ಅವುಗಳನ್ನು ಕಳೆದುಕೊಂಡರೆ ಭವಿಷ್ಯವಿಲ್ಲ ಎಂದರು. ಈಗಾಗಲೇ ಕೊಡಗು ಪ್ರಾಕೃತಿಕ ವಿಕೋಪಕ್ಕೆ ಒಳಗಾಗಿದೆ. ಹೀಗಿರುವಾಗ ಕೊಡಗಿಗೆ ರಾಷ್ಟ್ರೀಯ ಹೆದ್ದಾರಿ ಹಾಗೂ ರೈಲ್ವೇ ಯೋಜನೆಯ ಅಗತ್ಯವಿದೆಯೆ ಎಂದು ಪ್ರಶ್ನಿಸಿದ ಅವರು ಈ ಯೋಜನೆಗಳಿಂದ ಅರಣ್ಯಗಳು ವಿನಾಶದತ್ತ ಸಾಗುತ್ತವೆ ಎಂದು ಆತಂಕ ವ್ಯಕ್ತಪಡಿಸಿದರು. ಮಾಜಿ ಕ್ರೀಡಾಪಟು ಅಶ್ವಿನಿ ನಾಚಪ್ಪ ಮಾತನಾಡಿ, ನದಿಗಳ ರಕ್ಷಣೆ ಎಲ್ಲರ ಕರ್ತವ್ಯ. ನದಿಗಳು ಹರಿಯುವ ಕಡೆಗಳಲ್ಲಿ ಮಾನವರಿಗೆ ಎಲ್ಲಾ ರೀತಿಯ ಫಲತಂದುಕೊಡುತ್ತವೆ. ಆದ್ದರಿಂದ ನದಿಗಳನ್ನು ಉಳಿಸಿಕೊಳ್ಳುವಲ್ಲಿ ಪ್ರತಿಯೊಬ್ಬರು ಪಾಲುದಾರರಾಗ ಬೇಕೆಂದರು. ಚಿತ್ರ ನಟರಾದ ರಕ್ಷಿತ್ ಶೆಟ್ಟಿ ಹಾಗೂ ದಿಗಂತ್ ಕಾವೇರಿ ಕೂಗು ಅಭಿಯಾನಕ್ಕೆ ಸಂಪೂರ್ಣ ಬೆಂಬಲ ನೀಡುವದಾಗಿ ಹೇಳಿದರು. ತಮ್ಮ ಬಳಗ 1 ಲಕ್ಷ ಸಸಿಯನ್ನು ಖರೀದಿಸುವದಾಗಿ ರಕ್ಷಿತ್ ಶೆಟ್ಟಿ ಘೋಷಿಸಿದರು.

ಈಶಾ ಫೌಂಡೇಶನ್ ವಾದ್ಯವೃಂದದಿಂದ ಗೀತ ಗಾಯನ ಹಾಗೂ ನೃತ್ಯ ವೈಭವ ನೆರೆದಿದ್ದವರನ್ನು ರಂಜಿಸಿತು. ಫೌಂಡೇಶನ್‍ನ ಸ್ವಯಂ ಸೇವಕ ಸುಬ್ರಮಣ್ಯ ಕಾರ್ಯಕ್ರಮ ನಿರೂಪಿಸಿದರು.

3 ರಿಂದ 17ರವರೆಗೆ

ಇಂದು ತಲಕಾವೇರಿಯಿಂದ ಚಾಲನೆಗೊಂಡಿರುವ ಕಾವೇರಿ ಕೂಗು ಅಭಿಯಾನದ ಬೈಕ್ ಜಾಥಾ ತಾ. 17ರವರೆಗೆ ನಡೆಯಲಿದ್ದು, ಕಾವೇರಿ ನದಿ ಹರಿಯುವ ಪ್ರದೇಶಗಳ ಮೂಲಕ ಸಾಗಿ ಪೊಂಪ್‍ಹಾರ್‍ನಲ್ಲಿ ಅಂತ್ಯಗೊಳ್ಳಲಿದೆ.