ವೀರಾಜಪೇಟೆ, ಸೆ. 3 : ಕೊಡಗಿನ ಜಳಪ್ರಳಯದ ಸಂತ್ರಸ್ತರಿಗಾಗಿ ಒಂದು ದಿನದ ಆರೋಗ್ಯ ಶಿಬಿರವು ಆಯೋಜನೆಗೊಂಡಿತ್ತು.

ಸಂತ ಜೋಸೆಫ್ ಸೇವಾ ಸಂಸ್ಥೆಗಳು ಮೈಸೂರು ಮತ್ತು ಸಂತ ಮೇರಿಸ್ ಆಸ್ಪತ್ರೆ ಪಿರಿಯಾಪಟ್ಟಣ ಹಾಗೂ ಕೆದಮುಳ್ಳೂರು ಗ್ರಾಮ ಪಂಚಾಯಿತಿ ಆಶ್ರಯದಲ್ಲಿ ತೋಮರ ಗ್ರಾಮದ ಸಮುದಾಯ ಭವನದಲ್ಲಿ ನೆರೆಪೀಡಿತ ಸಂತ್ರಸ್ತ ಕುಟುಂಬಗಳ ಆರೋಗ್ಯ ತಪಾಸಣೆ ಶಿಬಿರ ನಡೆಯಿತು.

ಭಾರತಮಾತಾ ಪಿ.ಯು. ಕಾಲೇಜು ಕೊಪ್ಪ ಪ್ರಾಂಶುಪಾಲ ಫಾ. ಜೋಸ್ ಅವರು, ಜಾತಿ ಮತ ಧರ್ಮಕ್ಕಿಂತ ಮಿಗಿಲು ಮಾನವ ಧರ್ಮವಾಗಿದೆ. ನೆರೆಹಾನಿಯಿಂದ ತಮ್ಮ ಮನೆಮಠಗಳನ್ನು ಕಳೆದುಕೊಂಡು ಕಂಗಾಲಾಗಿದ್ದಾರೆ. ಪ್ರಾಣ ಹಾನಿಯು ಸಂಭವಿಸಿದೆ. ಅವರಿಗೆ ಆರೋಗ್ಯದ ಸಮಸ್ಯೆಯು ಕಾಡುತ್ತಿದೆ; ಇವುಗಳನ್ನು ಮನಗಂಡು ಸಂಘ ಸಂಸ್ಥೆಗಳು ಶಿಬಿರ ಆಯೋಜಿಸಿದೆ ಎಂದು ಹೇಳಿದರು. ಜಿಲ್ಲಾ ಪಂಚಾಯಿತಿ ಸದಸ್ಯ ಅಚ್ಚಪಂಡ ಮಹೇಶ್ ಗಣಪತಿ, ಪ್ರಸ್ತುತ ವರ್ಷದಲ್ಲಿ ಜಳಪ್ರಳಯವು ಸಂಭವಿಸಿದ್ದು, ಪ್ರಾಣಹಾನಿಯು ಸೇರಿದಂತೆ ಅನಾರೋಗ್ಯದ ಸಮಸ್ಯೆಯು ಕಂಡು ಬಂದಿದೆ. ಇದನ್ನು ಮನಗಂಡು ಆರೋಗ್ಯವನ್ನು ಸುಧಾರಿಸಿಕೊಳ್ಳಲು ಆರೋಗ್ಯ ಶಿಬಿರವನ್ನು ಹಮ್ಮಿಕೊಂಡಿದೆ. ಸಂತ್ರಸ್ತರು ಇದರ ಉಪಯೋಗವನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.

ಕೆದಮುಳ್ಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕೆ.ಆರ್. ರೋಹಿಣಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ತೋರ ದುರ್ಘಟನೆಯಲ್ಲಿ ಮರಣಹೊಂದಿದ ವ್ಯಕ್ತಿಗಳಿಗೆ ಒಂದು ನಿಮಿಷಗಳ ಮೌನ ಆಚರಣೆ ನಂತರ ಶಿಬಿರ ಆರಂಭವಾಯಿತು. ಇದೇ ಸಂದರ್ಭ ಸೇವಾ ಸಂಸ್ಥೆಗಳು ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ಕಿಟ್ ವಿತರಿಸಿದರು.

ಸಮಾರಂಭದ ವೇದಿಕೆಯಲ್ಲಿ ಫಾ. ರೇನ್ನಿ ಜೋನ್, ಸೆಂಟ್ ಮೇರಿಸ್ ಆಸ್ಪತ್ರೆ ಡಾ. ಮರ್‍ಸ್ಸಿ, ಕನ್ಯಾಸ್ತ್ರೀಯರಾದ ಲಿಜ್ಜಿ, ಲಿಸ್ಸಿ ಪೌಲ್ ಮತ್ತು ನಿರ್ಮಲ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರಾದ ಬಿ.ಎಸ್. ಕಿರಣ್ ಕುಮಾರ್, ಪರಮೇಶ್ವರ ಎಂ.ಎಂ, ಬೋಜಮ್ಮ ಉಪಸ್ಥಿತರಿದ್ದರು. ಸ್ವಾಗತ ಮತ್ತು ನಿರೂಪಣೆಯನ್ನು ಗ್ರಾಮ ಪಂಚಾಯಿತಿ ಸದಸ್ಯ ಎಂ.ಎಂ. ಇಸ್ಮಾಯಿಲ್ ಮಾಡಿದರೆ, ಅಭಿವೃದ್ಧಿ ಅಧಿಕಾರಿ ಪ್ರಮೋದ್ ವಂದನಾರ್ಪಣೆ ಮಾಡಿದರು.