ಮಡಿಕೇರಿ, ಸೆ. 3: ಕೊಡಗು ಜಿಲ್ಲೆಯಾದ್ಯಂತ ಶ್ರೀ ಗೌರಿ - ಗಣೇಶ ಚತುರ್ಥಿ ಪ್ರಯುಕ್ತ ದೇವಾಲಯಗಳಲ್ಲಿ, ವಿಘ್ನ ನಿವಾರಕನಿಗೆ ವಿಶೇಷ ಪೂಜೆಯೊಂದಿಗೆ; ಭಕ್ತರು ತಮ್ಮ ಮನೆಗಳು ಸೇರಿದಂತೆ ಸಾರ್ವಜನಿಕ ವಾಗಿ ಉತ್ಸವ ಮೂರ್ತಿಗಳನ್ನು ಕುಳ್ಳಿರಿಸಿ ಭಕ್ತಿಭಾವದೊಂದಿಗೆ ದೈವಿಕ ಕೈಂಕರ್ಯ ನೆರವೇರಿಸುವ ಮೂಲಕ ನಮಿಸಿದರು. ಭಾದ್ರಪದ ಶುಕ್ಲ ಚೌತಿಯಂದು ಮಳೆಯನ್ನು ಲೆಕ್ಕಿಸದೆ ಜಗನ್ಮಾತೆ ಗೌರಿಯ ಸಹಿತ ಗಣಪತಿಗೆ ಪೂಜೆ ನೆರವೇರಿಸಿದರು.
ಜಿಲ್ಲಾ ಕೇಂದ್ರ ಮಡಿಕೇರಿಯ ಶ್ರೀ ಕೋಟೆ ಮಹಾಗಣಪತಿ, ಶ್ರೀ ವಿಜಯ ವಿನಾಯಕ ದೇವಾಲಯ, ಶ್ರೀ ಓಂಕಾರೇಶ್ವರ ಸನ್ನಿಧಿ, ಶ್ರೀ ದೃಷ್ಠಿ ಗಣಪತಿ, ಶ್ರೀ ಪ್ರಸನ್ನ ಗಣಪತಿ, ಶ್ರೀ ಕೋದಂಡ ರಾಮ ಸನ್ನಿಧಿ, ಶ್ರೀ ಮುತ್ತಪ್ಪ ಸನ್ನಿಧಿ, ಶ್ರೀ ಬಸವೇಶ್ವರ, ಶ್ರೀ ಚೌಡೇಶ್ವರಿ, ಶ್ರೀ ಕನ್ನಿಕಾ ಪರಮೇಶ್ವರಿ, ದೇಚೂರು ಸೇರಿದಂತೆ ಇತರ ದೇವಾಲಯಗಳಲ್ಲಿನ ಪ್ರತಿಷ್ಠಾಪಿತ ವಿನಾಯಕ ಮೂರ್ತಿಗಳಿಗೆ ಚೌತಿ ಪ್ರಯುಕ್ತ ವಿಶೇಷ ಅಲಂಕಾರ ಪೂಜೆಗಳೊಂದಿಗೆ ಅಲ್ಲಲ್ಲಿ ಹೋಮ - ಹವನ ಬಳಿಕ ಭಕ್ತರಿಗೆ ಪ್ರಸಾದ ವಿತರಿಸಲಾಯಿತು.
ಈ ಪ್ತಯುಕ್ತ ದೇವಮಂದಿರಗಳಲ್ಲಿ ವಿಶೇಷವಾಗಿ ಅಲಂಕಾರದೊಂದಿಗೆ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಿ ಶ್ರೀ ಗಣೇಶನನ್ನು ಆರಾಧಿಸಲಾಯಿತು. ದೇವಮಂದಿರಗಳಿಗೆ ಅಧಿಕ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುವ ಮೂಲಕ ವಿಘ್ನನಿವಾರಕನಲ್ಲಿ ಪೂಜೆ, ಪ್ರಾರ್ಥನೆ ಸಲ್ಲಿಸಿದರು. ಆಯ ದೇವಾಲಯ ಸಮಿತಿ ಪ್ರಮುಖರು, ಸನ್ನಿಧಿ ಅರ್ಚಕರು ದೇವತಾ ಕೈಂಕರ್ಯಗಳಲ್ಲಿ ಪಾಲ್ಗೊಂಡಿದ್ದರು.
ಜಿಲ್ಲೆಯ ಕೊಡ್ಲಿಪೇಟೆ - ಶನಿವಾರಸಂತೆ, ಸೋಮವಾರಪೇಟೆ, ಮಾದಾಪುರ, ಸುಂಟಿಕೊಪ್ಪ, ಕುಶಾಲನಗರ, ಸಿದ್ದಾಪುರ, ಕುಡಿಗೆ, ಪೊನ್ನಂಪೇಟೆ, ವೀರಾಜಪೇಟೆ, ಗೋಣಿಕೊಪ್ಪಲು, ಕುಟ್ಟ, ತಲಕಾವೇರಿ, ಭಾಗಮಂಡಲ ಸಹಿತ ವಿವಿಧೆಡೆಯ ಶ್ರೀ ಮಹಾಗಣಪತಿ ಸನ್ನಿಧಿಗಳಲ್ಲಿ ಚೌತಿ ಪ್ರಯುಕ್ತ ವಿಶೇಷ ಪೂಜೆ ನಡೆದಿರುವ ಬಗ್ಗೆ ಮಾಹಿತಿ ಲಭಿಸಿದೆ. ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಒಟ್ಟು 30 ಸಾರ್ವಜನಿಕ ಉತ್ಸವ ಮೂರ್ತಿಗಳ ಪ್ರತಿಷ್ಠಾಪನೆಯೊಂದಿಗೆ; ಪ್ರಥಮ ದಿನವೇ 17 ಸಮಿತಿಗಳಿಂದ ಉತ್ಸವ ಗಣಪನನ್ನು ಮೆರವಣಿಗೆ ಮೂಲಕ ವಿಸರ್ಜಿಸಲಾಯಿತು.
ಮಡಿಕೇರಿ ಗ್ರಾಮಾಂತರ ಪ್ರದೇಶಗಳಲ್ಲಿ ಮೊದಲ ದಿವಸ, ಚತುರ್ಥಿ ಪ್ರಯುಕ್ತ ಪ್ರತಿಷ್ಠಾಪಿಸಿದ್ದ 70 ಮೂರ್ತಿಗಳಲ್ಲಿ, ನಿನ್ನೆಯೇ 51 ಮೂರ್ತಿಗಳ ವಿಸರ್ಜನೆಯೂ ನೆರವೇರಿದೆ.
ವೀರಾಜಪೇಟೆ ತಾಲೂಕಿನಲ್ಲಿ ನೂರಾರು ಸಾರ್ವಜನಿಕ ಗಣೇಶೋತ್ಸವ ಮೂರ್ತಿಗಳ ಪ್ರತಿಷ್ಠಾಪನೆಯೊಂದಿಗೆ ಪೂಜೆ ನಡೆಯುತ್ತಿದ್ದು; ಪ್ರಥಮ ದಿನದಂದು 14 ಉತ್ಸವ ಮೂರ್ತಿಗಳ ವಿಸರ್ಜನೆ ನಡೆಸಲಾಗಿದೆ. ಅಂತೆಯೇ ಸೋಮವಾರಪೇಟೆ ತಾಲೂಕಿನ ಅಲ್ಲಲ್ಲಿ ಉತ್ಸವಗಳೊಂದಿಗೆ ಪ್ರಸಕ್ತ ಉತ್ಸವ ಮೂರ್ತಿಗಳಲ್ಲಿ 15ಕ್ಕೂ ಅಧಿಕ ಮೂರ್ತಿಗಳನ್ನು ಪ್ರಥಮ ದಿನ ವಿಸರ್ಜಿಸಲಾಯಿತು.
ದ್ವಿತೀಯ ದಿನಗಳಲ್ಲಿ ವಿಸರ್ಜಿಸದೆ ಪೂಜಿಸುವ ಮಂದಿ ತಾ. 4 ರಂದು (ಇಂದು) ಅನೇಕ ಕಡೆಗಳಲ್ಲಿ ಮೆರವಣಿಗೆಯಲ್ಲಿ ಕೊಂಡೊಯ್ದು ವಿಸರ್ಜಿಸಲಿದ್ದಾರೆ. ವೀರಾಜಪೇಟೆ ನಗರವೂ ಸೇರಿದಂತೆ ಅನೇಕ ಕಡೆಗಳಲ್ಲಿ ಸಾರ್ವಜನಿಕ ಗೌರಿ - ಗಣೇಶೋತ್ಸವ ಮೂರ್ತಿಗಳ ಆರಾಧನೆ ಬಹುದಿನ ಮುಂದುವರಿಯಲಿವೆ.
ಪೊನ್ನಂಪೇಟೆ: ಇಲ್ಲಿನ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಗಣೇಶ ಚತುರ್ಥಿಯ ಪ್ರಯುಕ್ತ ಪೂಜಾ ಕಾರ್ಯಕ್ರಮ ವಿಜ್ರಂಭಣೆಯಿಂದ ನೆರವೇರಿತು. ಪೊನ್ನಂಪೇಟೆಯ ವಿವಿಧ ಭಾಗಗಳಿಂದ ಸಾವಿರಾರು ಜನರು ದೇವಸ್ಥಾನಕ್ಕೆ ಆಗಮಿಸಿ ಗಣೇಶನಿಗೆ ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು. ವಿವಿಧ ಬಡಾವಣೆಗಳ ಗೌರಿ ಗಣೇಶೋತ್ಸವ ಸಮಿತಿಯವರು ಗಣೇಶನ ಮೂರ್ತಿಯನ್ನು ಬಸವೇಶ್ವರ ದೇವಸ್ಥಾನಕ್ಕೆ ತಂದು ಪೂಜೆ ಸಲ್ಲಿಸಿದ ನಂತರ ತಮ್ಮ ತಮ್ಮ ಬಡಾವಣೆಗಳಿಗೆ ತೆಗೆದುಕೊಂಡು ಹೋಗಿ ಪ್ರತಿóಷ್ಠಾಪನೆ ಮಾಡಿದರು.
ಶ್ರೀ ಬಸವೇಶ್ವರ ದೇವಸ್ಥಾನ, ಕೃಷ್ಣ ನಗರದ ಶ್ರೀ ಕೃಷ್ಣ ಯುವಕರ ಸಂಘ, ಶಿವ ಕಾಲೋನಿಯ ಶಿವ ಯುವಕರ ಸಂಘ, ಕಾಟ್ರಕೊಲ್ಲಿಯ ಗಜಮುಖ ಗೆಳೆಯರ ಬಳಗ, ಮುಖ್ಯ ರಸ್ತೆಯ ವಿಘ್ನೇಶ್ವರ ವಾಹನ ಚಾಲಕ ಮತ್ತು ಮಾಲೀಕರ ಸಂಘ, ಮಹಾತ್ಮ ಗಾಂಧಿ ನಗರದ ಯವ ಶಕ್ತಿ ಯುವಕರ ಸಂಘ ಹಾಗೂ ಜೋಡುಬೀಟಿ ನೆಹರು ನಗರದ ವಿನಾಯಕ ಯುವಕರ ಸಂಘ ಸೇರಿದಂತೆ 7 ಕಡೆಗಳಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ಬಸವೇಶ್ವರ ದೇವಸ್ಥಾನದ ಅರ್ಚಕ ನಾಗರಾಜ್ ಭಟ್, ರಮೇಶ್ ಹಗೂ ನಾಗೇಶ್ ಭಾರಧ್ವಾಜ್ ಪೂಜಾ ಕಾರ್ಯಕ್ರಮ ನೆರವೇರಿಸಿದರು. ಈ ಸಂದರ್ಭ ಶ್ರೀ ಬಸವೇಶ್ವರ ದೇವಸ್ಥಾನ ಸಮಿತಿಯ ಅಧ್ಯಕ್ಷ ಬಿ.ಎನ್. ಕಾಂತರಾಜ್, ಕಾರ್ಯದರ್ಶಿ ವಿ.ಜಿ. ಮಂಜುನಾಥ್, ಸಮಿತಿಯ ಸದಸ್ಯರು ಹಾಗೂ ಎಲ್ಲಾ ಗಣೇಶೋತ್ಸವ ಸಂಘದ ಪದಾಧಿಕಾರಿಗಳು, ಸದಸ್ಯರು ಇದ್ದರು.
ಹುದುಗೂರು: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹುದುಗೂರು ಗ್ರಾಮ ಉಮಾಮಹೇಶ್ವರ ದೇವಾಲಯ ಅವರಣದಲ್ಲಿ ಗಣೇಶೋತ್ಸವ ಹಬ್ಬವನ್ನು ಆಚರಿಸಲಾಯಿತು. ದೇವಾಲಯ ಸಮಿತಿಯ ವತಿಯಿಂದ ಗಣಪತಿ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಿ ದೇವಾಲಯ ಅವರಣದಲ್ಲಿ 3 ದಿನಗಳವರೆಗೆ ಕುಳ್ಳಿರಿಸಿ ನಂತರ ವಿಸರ್ಜನೆ ಮಾಡಲಾಗುವದು ಎಂದು ದೇವಾಲಯ ಸಮಿತಿ ಅಧ್ಯಕ್ಷ ಟಿ, ಎಂ. ಚಾಮಿ ತಿಳಿಸಿದ್ದಾರೆ. ಪೂಜಾ ಕಾರ್ಯಕ್ರಮದಲ್ಲಿ ಸುತ್ತಮುತ್ತಲಿನ ಗ್ರಾಮಗಳ ನೂರಾರು ಭಕ್ತಾದಿಗಳು ಭಾಗವಹಿಸಿದ್ದರು.