ನಾಪೋಕ್ಲು, ಸೆÀ. 1: ಖಾಸಗಿ ಶಾಲೆಯ ವಿದ್ಯಾರ್ಥಿಗಳಂತೆ ಸರಕಾರಿ ಶಾಲೆಯ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಪ್ರಗತಿ ಹೊಂದಬೇಕು ಹಾಗೂ ಶಿಕ್ಷಣದಲ್ಲಿ ಗುಣಮಟ್ಟವನ್ನು ಕಾಯ್ದುಕೊಳ್ಳುವ ಮಹತ್ತರ ಉದ್ದೇಶದೊಂದಿಗೆ ಕರ್ನಾಟಕ ಪಬ್ಲಿಕ್ ಶಾಲೆಯನ್ನು ಸರಕಾರ ಆರಂಭಿಸಿದ್ದು, ಇದಕ್ಕೆ ನಾಪೋಕ್ಲು ಶಾಲೆ ಆಯ್ಕೆಯಾಗಿರುವದು ಎಲ್ಲರೂ ಹೆಮ್ಮೆಪಡುವಂತಹ ವಿಷಯವೆಂದು ಕೆ.ಪಿ.ಎಸ್. ಸಮಿತಿಯ ಅಧ್ಯಕ್ಷರಾಗಿರುವ ಶಾಸಕ ಕೆ.ಜಿ.ಬೋಪಯ್ಯ ಹೇಳಿದರು.ನಾಪೋಕ್ಲುವಿನ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ನಡೆದ ಕೆಪಿಎಸ್ ಸಮಿತಿಯ ಸಮಗ್ರ ಯೋಜನಾ ಅನುಮೋದನಾ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.
ಸರಕಾರದ ಮೂಲ ಉದ್ದೇಶವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಶಾಲೆಯ ಶಿಕ್ಷಕರೊಂದಿಗೆ ಕೆಪಿಎಸ್ ಸಮಿತಿಯ ಎಲ್ಲಾ ಸದಸ್ಯರು ಸಹಕರಿಸಬೇಕೆಂದು ಸಲಹೆ ನೀಡಿದ ಶಾಸಕರು, ತಾ. 9 ರಂದು ನಾಪೋಕ್ಲುವಿನ ಕರ್ನಾಟಕ ಪಬ್ಲಿಕ್ ಶಾಲೆ ಉದ್ಘಾಟನೆಗೊಳ್ಳಲಿದ್ದು, ಸರಕಾರದಿಂದ ಬಿಡುಗಡೆಯಾದ ಅನುದಾನವನ್ನು ಅಗತ್ಯಾನುಸಾರ ಕ್ರಿಯಾಯೋಜನೆಯಲ್ಲಿದ್ದಂತೆ ಸೂಕ್ತ ರೀತಿಯಲ್ಲಿ ಬಳಸಿಕೊಳ್ಳಲು ಅನುಮೋದನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಮುರುಳಿ ಕರುಂಬಮ್ಮಯ್ಯ, ಸಮಿತಿಯ ಉಪಾಧ್ಯಕ್ಷೆ ಪ್ರಮೀಳ, ಸಮಿತಿ ಸದಸ್ಯರು, ಜನಪ್ರತಿನಿಧಿಗಳು, ಉಪನ್ಯಾಸಕರು, ಶಿಕ್ಷಕರು ಉಪಸ್ಥಿತರಿದ್ದರು. ಪ್ರಾಂಶುಪಾಲೆ ಶ್ರೀಲತಾ ಸ್ವಾಗತಿಸಿ, ಉಪಪ್ರಾಂಶುಪಾಲೆ ನಳಿನಿ ಸಿ.ಕೆ. ಪ್ರಾಸ್ತಾವಿಕವಾಗಿ ಮಾತನಾಡಿ ಕ್ರಿಯಾಯೋಜನೆಯನ್ನು ಮಂಡಿಸಿದರು. ಉಷಾರಾಣಿ ವರದಿ ವಾಚಿಸಿ, ಮಹಾಂತೇಶ್ ಕೋಠಿ ವಂದಿಸಿದರು.
-ದುಗ್ಗಳ