ಮಡಿಕೇರಿ, ಸೆ. 1: ಕಳೆದ ಆಗಸ್ಟ್ 9 ರಂದು ಕೆದಮುಳ್ಳೂರು ಗ್ರಾ.ಪಂ. ವ್ಯಾಪ್ತಿಯ ತೋರ ಗ್ರಾಮದ ಕೊರ್ತಿಕಾಡು ಎಂಬಲ್ಲಿ; ಕಲ್ಲುಮೊಟ್ಟೆ ಬೆಟ್ಟ ಸಾಲು ಕುಸಿತದಿಂದ; ಇಬ್ಬರು ಸ್ಥಳದಲ್ಲೇ ಸಾವನ್ನಪ್ಪುವದರೊಂದಿಗೆ; ಎಂಟು ಮಂದಿ ಕಣ್ಮರೆಯಾಗಿದ್ದರು. ಈ ಪೈಕಿ ನಿರಂತರ ಶೋಧ ಕಾರ್ಯ ದಿಂದ ಭೂಸಮಾಧಿ ಗೊಂಡಿದ್ದ ನಾಲ್ವರ ಶವಗಳು ಇದುವರೆಗೆ ಪತ್ತೆಯಾಗಿವೆ. ನಿರಂತರ 22 ದಿನಗಳ ಕಾರ್ಯಾಚರಣೆ ಬಳಿಕವೂ; ಇನ್ನುಳಿದ ಇಬ್ಬರು ಮಹಿಳೆಯರು ಹಾಗೂ ಇಬ್ಬರು ಬಾಲಕಿಯರ ಬಗ್ಗೆ ಯಾವದೇ ಸುಳಿವು ಲಭಿಸದಿರುವ ಕಾರಣ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ.ಆ. 9 ರಂದು ಭೂಕುಸಿತ ಸಂದರ್ಭ; ತೋರ ನಿವಾಸಿ ಪ್ರಭು ಕುಮಾರ್ ಅವರ ತಾಯಿ ದೇವಕಿ (65), ಇಬ್ಬರು ಪುತ್ರಿಯರಾದ ಅಮೃತ (13) ಹಾಗೂ ಅಧಿತ್ಯ (10) ಕಣ್ಮರೆಯೊಂದಿಗೆ ಈತನಕ ಯಾವದೇ ಮಾಹಿತಿ ಲಭಿಸಿಲ್ಲ. ಅಂತೆಯೇ ಅಲ್ಲಿನ ಕಾರ್ಮಿಕ ಪಿರಿಯಾಪಟ್ಟಣ ಮೂಲದ ಹರೀಶ್ ಎಂಬವರ ಪತ್ನಿ, ತುಂಬು ಗರ್ಭಿಣಿ ವೀಣಾ (35) ಎಂಬವರ ಬಗ್ಗೆಯೂ ಇದುವರೆಗೆ ಏನೊಂದು ಸುಳಿವು ಗೋಚರಿಸದ್ದರಿಂದ ಶೋಧ ಕಾರ್ಯ ನಿಲ್ಲಿಸಲಾಗಿದೆ.

ನಿರಂತರ ಶೋಧ : ಕಳೆದ 22 ದಿನಗಳಿಂದ ದುರಂತದ ಸ್ಥಳದಲ್ಲಿ ಕೇಂದ್ರ ಸರಕಾರದ ಎನ್‍ಡಿಆರ್‍ಎಫ್ ತಂಡ, ಮಿಲಿಟರಿ, ಕೊಡಗು ಪೊಲೀಸ್, ಅಗ್ನಿಶಾಮಕ ದಳ, ಕಂದಾಯ ಇಲಾಖೆ ಸೇರಿದಂತೆ ಸಾರ್ವಜನಿಕರ ನೆರವಿನಿಂದ ಜಂಟಿ ಕಾರ್ಯಾಚರಣೆ ಮುಂದುವರಿದಿತ್ತು.

ನಾಲ್ಕು ಶವ ಹೊರಕ್ಕೆ : ಇದುವರೆಗಿನ ಕಾರ್ಯಾಚರಣೆಯಿಂದ, ದುರಂತ ಸಂಭವಿಸಿದ ದಿನದಂದು; ಅಲ್ಲಿನ ನಿವಾಸಿ ಪರಮೇಶ್ ಎಂಬವರ ಪತ್ನಿ ಮಮತ (40) ಹಾಗೂ ಅವರ ಪುತ್ರಿ ಲಿಖಿತ (15) ಇವರಿಬ್ಬರ ಶವಗಳು ಗೋಚರಿಸಿತ್ತು. ಇನ್ನುಳಿದಂತೆ ಭೂಸಮಾಧಿಯಾಗಿದ್ದ ಶಂಕರ್ (55), ಅಪ್ಪು (55) ಹಾಗೂ ಅವರ ಪತ್ನಿ ಲೀಲಾ (45) ಶವಗಳನ್ನು ಶೋಧ ಕಾರ್ಯದಿಂದ ಪತ್ತೆ ಹಚ್ಚಲಾಗಿತ್ತು. ಇನ್ನೊಂದೆಡೆ ನತದೃಷ್ಟ ಪ್ರಭುಕುಮಾರ್ ಅವರ ಪತ್ನಿ ಅನಸೂಯ (35) ಅವರ ಮೃತದೇಹವೂ ಮಣ್ಣಿನೊಳಗೆ ಸಿಲುಕಿಕೊಂಡಿದ್ದನ್ನು ಹೊರತೆಗೆ ಯಲಾಗಿತ್ತು.

(ಮೊದಲ ಪುಟದಿಂದ)

ಲಭಿಸದ ಸುಳಿವು : ಆ ಬಳಿಕವೂ ಇದುವರೆಗಿನ ಕಾರ್ಯಾಚರಣೆಯಲ್ಲಿ; ಇಬ್ಬರು ಮಹಿಳೆಯೊಂದಿಗೆ ಮಕ್ಕಳಿಬ್ಬರ ಬಗ್ಗೆ ಯಾವದೇ ಮಾಹಿತಿ ಲಭಿಸದ್ದರಿಂದ ಅನಿವಾರ್ಯವಾಗಿ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ.

ಬಂಧುಗಳ ಒಪ್ಪಿಗೆ : ಈ ಬಗ್ಗೆ ಜಿಲ್ಲಾಡಳಿತಕ್ಕೆ ಕಾಣೆಯಾಗಿರುವ ದುರ್ದೈವಿಗಳ ಪರವಾಗಿ ಪ್ರಭುಕುಮಾರ್ ಹಾಗೂ ಹರೀಶ್ ಇಬ್ಬರು ಲಿಖಿತ ಸಮ್ಮತಿ ಸೂಚಿಸಿದ್ದಾರೆ. ಆ ಮೇರೆಗೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು; ರಾಜ್ಯದ ಮುಖ್ಯಮಂತ್ರಿಗಳಿಗೆ ವಿಸ್ತøತ ವರದಿ ಸಲ್ಲಿಸಿದ್ದಾರೆ. ಅಲ್ಲದೆ ಈಗಾಗಲೇ ಈ ಕುಟುಂಬಗಳಿಗೆ ಕಣ್ಮರೆಯಾದವರ ಪರವಾಗಿ ತಲಾ ರೂ. ಒಂದೊಂದು ಲಕ್ಷದಂತೆ ತುರ್ತು ನೆರವು ನೀಡಿದ್ದಾರೆ.

ಶೋಧ ಕಾರ್ಯಕ್ಕೆ ಅಡ್ಡಿ : ಈ ಬಗ್ಗೆ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು; ತೋರದ ದುರಂತ ಸ್ಥಳದಲ್ಲಿ ನಿರಂತರ ಮಳೆಯ ನಡುವೆ ಇಡೀ ಪ್ರದೇಶ ಕೆಸರುಮಯಗೊಂಡಿರುವ ಕಾರಣ; ಕಾರ್ಯಾಚರಣೆಗೆ ತೊಡಕಾಗಿದೆ ಎಂದು ಸ್ಪಷ್ಟಪಡಿಸಿದರು.

ಎನ್‍ಡಿಆರ್‍ಎಫ್, ಮಿಲಿಟರಿ, ಪೊಲೀಸ್ ಹಾಗೂ ಇತರ ಇಲಾಖೆಗಳ ಸುಮಾರು 120 ಮಂದಿ, ಇಟಾಚಿಯಂತಹ ಯಂತ್ರ ಸಹಿತ ನಿರಂತರ ಶೋಧ ಕೈಗೊಂಡರೂ; ಯಾವದೇ ಫಲ ಲಭಿಸದೆ, ಕಾಣೆಯಾದವರ ಕುಟುಂಬಸ್ಥರ ಒಪ್ಪಿಗೆಯಂತೆ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ವಿವರಿಸಿದರು. ಅಲ್ಲದೆ ಸರಕಾರದ ಮುಂದಿನ ನಿರ್ದೇಶನದಂತೆ ಜಿಲ್ಲಾಡಳಿತ ಸೂಕ್ತ ಕ್ರಮ ತೆಗೆದುಕೊಳ್ಳಲಿದೆ ಎಂದು ಸ್ಪಷ್ಟಪಡಿಸಿದರಲ್ಲದೆ, ಉಭಯ ಕುಟುಂಬಸ್ಥರಿಗೆ ಭವಿಷ್ಯದಲ್ಲಿ ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ಪರಿಹಾರ ಮೊತ್ತ ಕಲ್ಪಿಸುವದಾಗಿಯೂ ಭರವಸೆ ನೀಡಿದರು.

ಸಮ್ಮತಿ ನೀಡಿದ್ದೇವೆ : ನೂರಾರು ಎಕರೆ ಭೂಕುಸಿತದ ಪ್ರದೇಶದಲ್ಲಿ ಕೆಸರುಮಯ ಪರಿಸ್ಥಿತಿ ನಡುವೆ; ಕಾರ್ಯಾಚರಣೆ ಮುಂದುವರೆಸಿದರೂ ಕಣ್ಮರೆಯಾದವರ ಪತ್ತೆ ಕಾರ್ಯ ಕ್ಲಿಷ್ಟಕರ ಎಂಬ ತೀರ್ಮಾನದೊಂದಿಗೆ; ಕಾರ್ಯಾಚರಣೆ ನಿಲ್ಲಿಸುವಂತೆ ತಾವಿಬ್ಬರು ಸಮ್ಮತಿ ನೀಡಿದ್ದೇವೆ ಎಂದು ಪ್ರಭುಕುಮಾರ್ ಹಾಗೂ ಹರೀಶ್ ‘ಶಕ್ತಿ’ಯೊಂದಿಗೆ ನೋವಿನಿಂದ ನುಡಿದರು. ಜಿಲ್ಲಾಡಳಿತದಿಂದ ಮರಣಪತ್ರ ಇತ್ಯಾದಿ ಅಗತ್ಯ ದಾಖಲೆ ಕಲ್ಪಿಸುವ ಭರವಸೆ ಲಭಿಸಿದೆ ಎಂದು ಪ್ರತಿಕ್ರಿಯಿಸಿದರು.