ಸುಂಟಿಕೊಪ್ಪ, ಸೆ. 1: ‘ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ’ ಎಂಬ ನಾಣ್ನುಡಿ ಇದೆ. ಇದನ್ನು ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಅಕ್ಷರಶಃ ಪಾಲಿಸುತ್ತಿದೆ.

ಸುಂಟಿಕೊಪ್ಪ ಗ್ರಾ.ಪಂ. ‘ಸೆಸ್ಕ್’ ಇಲಾಖೆಗೆ 38 ಲಕ್ಷ ರೂ. ಹಣ ಪಾವತಿಸಬೇಕಾಗಿದೆ. ಅದಕ್ಕಾಗಿ ಸೆಸ್ಕ್‍ನಿಂದ ಹಣ ಪಾವತಿಸಲು ನೋಟೀಸು ಜಾರಿ ಮಾಡಿದರೂ ಪಂಚಾಯಿತಿಯಿಂದ ಹಣ ಬಾರದೆ ಇದ್ದಾಗ ಗ್ರಾ.ಪಂ. ಕಛೇರಿಗೆ ವಿದ್ಯುತ್ ಕಡಿತಗೊಳಿಸ ಲಾಗಿದೆ. ಈ ಬಗ್ಗೆ ಪತ್ರಿಕೆಯಲ್ಲಿ ಸುದ್ದಿ ಪ್ರಕಟವಾಯಿತು. ಇದಕ್ಕೆ ಪ್ರತಿರೋಧವಾಗಿ ಗ್ರಾ.ಪಂ.ಯವರು ಸೆಸ್ಕ್ ಸಿಬ್ಬಂದಿಗಳ ವಸತಿ ಗೃಹಗಳಿಗೆ ಪಂಚಾಯಿತಿಯಿಂದ ನೀರು ಸರಬರಾಜು ಮಾಡುವದನ್ನು ಕಡಿತಗೊಳಿಸಿ ಸೇಡು ತೀರಿಸಿಕೊಂಡಿ ದ್ದಾರೆ. ಸೆಸ್ಕ್ ಸಿಬ್ಬಂದಿಗಳು ಇಲಾಖೆ ಅಧಿಕಾರಿಗಳ ಆದೇಶ ಪಾಲಿಸಬೇಕು. ಆದರೆ ಗ್ರಾ.ಪಂ.ಆಡಳಿತ, ಪಿಡಿಓ ಅವರ ದ್ವಂದ್ವ ನೀತಿ ಸೇಡಿಗೆ ಕಾರಣವಾಗಿರುವದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಸೆಸ್ಕ್ ಲೈನ್‍ಮೆನ್‍ಗಳು ಪ್ರತಿಕ್ರಿಯೆ ನೀಡಿ ನಾವು ನಮ್ಮ ವಸತಿಗೃಹಕ್ಕೆ ವೆಚ್ಚವಾಗುವ ವಿದ್ಯುತ್ ಬಿಲ್ ಅನ್ನು ಪ್ರತಿ ತಿಂಗಳು ವೈಯಕ್ತಿಕವಾಗಿ ಭರಿಸಿದರೂ ನಮಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪಂಚಾಯತ್‍ರಾಜ್ ಕಾಯ್ದೆಯಲ್ಲಿ ಜನರ ಮೂಲಭೂತ ಸೌಲಭ್ಯಗಳಲ್ಲಿ ಒಂದಾದ ಕುಡಿಯುವ ನೀರಿಗೆ ಪಂಚಾಯಿತಿಯವರು ತೊಂದರೆ ಉಂಟು ಮಾಡಬಾರದೆಂಬ ಸ್ಪಷ್ಟ ಉಲ್ಲೇಖವಿದೆ; ಅದನ್ನು ಸುಂಟಿಕೊಪ್ಪ ಗ್ರಾ.ಪಂ.ಯವರು ಉಲ್ಲಂಘಿಸಿದ್ದು, ಜಿ.ಪಂ. ಸಿಇಓ ಸೂಕ್ತ ಕ್ರಮಕೈಗೊಳ್ಳ ಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.