ಬ್ಯಾಂಕ್ ಉದ್ಯೋಗ ನಷ್ಟವಾಗಲ್ಲ
ಚೆನ್ನೈ, ಸೆ. 1: ಕರ್ನಾಟಕದ ಕೆನರಾ ಮತ್ತು ಸಿಂಡಿಕೇಟ್ ಬ್ಯಾಂಕುಗಳು ಸೇರಿದಂತೆ ಪ್ರಸ್ತಾವಿಕ ಸಾರ್ವಜನಿಕ ವಲಯದ ಬ್ಯಾಂಕ್ ಗಳ ವಿಲೀನದಿಂದ ಒಂದೇ ಒಂದು ಉದ್ಯೋಗವೂ ನಷ್ಟವಾಗುವದಿಲ್ಲ ಎಂದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಭರವಸೆ ನೀಡಿದ್ದಾರೆ. ಜಾಗತಿಕ ಮಟ್ಟದ ಬಲಿಷ್ಠ ಬ್ಯಾಂಕಿಂಗ್ ವಲಯ ನಿರ್ಮಿಸುವ ಉದ್ದೇಶದೊಂದಿಗೆ 10 ಬ್ಯಾಂಕುಗಳನ್ನು 4 ಬ್ಯಾಂಕ್‍ಗಳಲ್ಲಿ ವಿಲೀನಗೊಳಿಸಿದ್ದರು. ಇದರ ಬೆನ್ನಲ್ಲೇ ಬ್ಯಾಂಕ್ ಉದ್ಯೋಗಿಗಳಿಗೆ ಕೆಲಸ ಕಳೆದಕೊಳ್ಳುವ ಭಯ ಕಾಡುತ್ತಿದೆ. ಇದಕ್ಕೆ ಸ್ಪಷ್ಟಿಕರಣ ನೀಡಿರುವ ನಿರ್ಮಲಾ ಸೀತಾರಾಮನ್ ಅವರು ಬ್ಯಾಂಕುಗಳ ವಿಲೀನದಿಂದ ಉದ್ಯೋಗ ನಷ್ಟವಾಗುವದಿಲ್ಲ. ಯಾವ ಉದ್ಯೋಗಿಯನ್ನೂ ಮನೆಗೆ ಕಳುಹಿಸುವದಿಲ್ಲ ಎಂದು ಭರವಸೆ ನೀಡಿದ್ದಾರೆ. ಬ್ಯಾಂಕುಗಳ ವಿಲೀನದಿಂದ ಉದ್ಯೋಗ ನಷ್ಟವಾಗುತ್ತದೆ ಎಂಬದು ಸಂಪೂರ್ಣ ತಪ್ಪು ಮಾಹಿತಿ. ಈ ಬ್ಯಾಂಕ್‍ಗಳಲ್ಲಿರುವ ಪ್ರತಿಯೊಂದು ನೌಕರರ ಸಂಘಟನೆಗೂ ಪ್ರತಿಯೊಬ್ಬ ಉದ್ಯೋಗಿಗೂ ನೀಡಿದ ಭರವಸೆಯನ್ನೇ ಮತ್ತೊಮ್ಮೆ ನೆನಪಿಸುತ್ತಿದ್ದೇನೆ ಎಂದರು.
ಜೈಲಿನ ಮೇಲೆ ದಾಳಿ : 50 ಸಾವು
ನವದೆಹಲಿ, ಸೆ. 1: ಸನಾ ಸೌದಿ ನೇತೃತ್ವದ ಮೈತ್ರಿಕೂಟ ಪಡೆಗಳು ಯೆಮನ್‍ನ ಕೇಂದ್ರ ಪ್ರಾಂತ್ಯದ ಧಾಮರ್‍ನ ಜೈಲಿನ ಮೇಲೆ ನಡೆಸಿದ ವೈಮಾನಿಕ ದಾಳಿಯಲ್ಲಿ ಕನಿಷ್ಟ 50 ಯುದ್ಧ ಕೈದಿಗಳು ಸಾವನ್ನಪ್ಪಿದ್ದಾರೆ ಎಂದು ಹೌತಿ ನಿಯಂತ್ರಿತ ಆರೋಗ್ಯ ಸಚಿವಾಲಯ ತಿಳಿಸಿದೆ. ‘ಜೈಲಿನ ಮೇಲೆ ಮೈತ್ರಿಕೂಟದ ಯುದ್ಧ ವಿಮಾನಗಳು ಏಳು ವೈಮಾನಿಕ ದಾಳಿಗಳನ್ನು ನಡೆಸಿದ್ದು, ದಾಳಿಗಳಿಂದ ಕನಿಷ್ಟ 50 ಮಂದಿ ಸಾವನ್ನಪ್ಪಿದ್ದು, ಇನ್ನೂ 100 ಮಂದಿ ಗಾಯಗೊಂಡಿದ್ದಾರೆ. ರಕ್ಷಣಾ ತಂಡಗಳು ಬದುಕುಳಿದವರಿಗಾಗಿ ಕಲ್ಲು-ಮಣ್ಣು ಅವಶೇಷಗಳಡಿ ಇನ್ನೂ ಶೋಧ ನಡೆಸುತ್ತಿವೆ. ಅನೇಕ ಗಾಯಾಳುಗಳು ಸ್ಥಿತಿ ಗಂಭೀರವಾಗಿದ್ದು, ಸಾವಿನ ಸಂಖ್ಯೆ ಏರಿಕೆಯಾಗಬಹುದು ಎಂದು ಪ್ರಕಟಣೆ ತಿಳಿಸಿದೆ. ಈ ಮಧ್ಯೆ ದಾಳಿಗೆ ಗುರಿಯಾಗಿಸಿಕೊಂಡ ಜೈಲು ಧಮಾರ್‍ನ ಮಧ್ಯದಲ್ಲಿರುವ ಸಮುದಾಯ ಕಾಲೇಜಿನ ಸಂಕೀರ್ಣದೊಳಗಿದೆ. ಅಂತರರಾಷ್ಟ್ರೀಯ ರೆಡ್‍ಕ್ರಾಸ್ ಸಮಿತಿ ಇಲ್ಲಿಗೆ ಹಲವು ಬಾರಿ ಭೇಟಿ ನೀಡಿದೆ ಎಂದು ತಿಳಿಸಿದೆ. ಸುಮಾರು 170 ಕೈದಿಗಳು ಸರ್ಕಾರಿ ಪಡೆಗಳೊಡನೆ ಘರ್ಷಣೆ ನಡೆಯುವಾಗ ಸೆರೆಹಿಡಿಯಲ್ಪಟ್ಟು, ಈ ಜೈಲಿನಲ್ಲಿ ತಿಂಗಳುಗಟ್ಟಲೆ ಇದ್ದಾರೆ. ಈ ಕೈದಿಗಳು ವಿನಿಮಯ ಒಪ್ಪಂದದಂತೆ ಕೆಲವೇ ದಿನಗಳಲ್ಲಿ ಬಿಡುಗಡೆಯಾಗುವವರಿದ್ದರು ಎಂದು ಹೇಳಲಾಗಿದೆ.
ಲೆ.ಜ. ನಾರವಾನೆ ಸೇನಾ ಉಪ ಮುಖ್ಯಸ್ಥ
ನವದೆಹಲಿ, ಸೆ. 1: ಈಸ್ಟರ್ನ್ ಕಮಾಂಡ್ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಮನೋಜ್ ಮುಕುಂದ್ ನಾರವಾನೆ ಅವರು ಸೇನಾ ಸಿಬ್ಬಂದಿ ಉಪ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡರು. ಲೆಫ್ಟಿನೆಂಟ್ ಜನರಲ್ ದೇವರಾಜ್ ಅನ್ಬು ಅವರಿಂದ ಖಾಲಿಯಾದ ಸ್ಥಾನವನ್ನು ನಾರವಾನೆ ಅಲಂಕರಿಸಿದ್ದಾರೆ. ಲೆಫ್ಟಿನೆಂಟ್ ಜನರಲ್ ನಾರವಾನೆ, ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಮತ್ತು ಭಾರತೀಯ ಮಿಲಿಟರಿ ಅಕಾಡೆಮಿಯ ಹಳೆಯ ವಿದ್ಯಾರ್ಥಿ ಎಂದು ಭಾರತೀಯ ಸೇನೆಯ ವಕ್ತಾರ ಕರ್ನಲ್ ಅಮನ್ ಆನಂದ್ ಹೇಳಿದ್ದಾರೆ. ಜೂನ್ 1980ರಲ್ಲಿ ಅವರನ್ನು 7ನೇ ಬೆಟಾಲಿಯನ್, ದಿ ಸಿಖ್ ಲೈಟ್ ಇನ್ಫ್ಯಾಂಟ್ರಿ ರೆಜಿಮೆಂಟ್‍ಗೆ ನಿಯೋಜಿಸಲಾಯಿತು. ಅಧಿಕಾರಿ ಅತ್ಯಂತ ಸವಾಲಿನ ಪ್ರದೇಶಗಳಲ್ಲಿ ಸೇವೆ ಸಲ್ಲಿಸಿದ ಮನೋಜ್, ಅಪಾರ ಪ್ರಮಾಣದ ಅನುಭವವನ್ನು ಹೊಂದಿದ್ದಾರೆ. ಸುಮಾರು ನಾಲ್ಕು ದಶಕಗಳ ಕಾಲ ಮಿಲಿಟರಿ ವೃತ್ತಿಜೀವನದಲ್ಲಿ, ಈಶಾನ್ಯ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಮುಖ ನೇಮಕಾತಿಗಳನ್ನು ನಿರ್ವಹಿಸಿದ ಹೆಗ್ಗಳಿಕೆ ಹೊಂದಿದ್ದಾರೆ. ಮೂರು ವರ್ಷಗಳ ಕಾಲ ಮ್ಯಾನ್ಮಾರ್‍ನ ಭಾರತೀಯ ರಾಯಭಾರ ಕಚೇರಿಯಲ್ಲಿ ಡಿಫೆನ್ಸ್ ಅಟ್ಯಾಚ್ ಆಗಿ ಕಾರ್ಯನಿರ್ವಹಿಸುವ ಅವಕಾಶವನ್ನೂ ಅವರು ಪಡೆದಿದ್ದಾರೆ.
5 ರಾಜ್ಯಗಳಿಗೆ ರಾಜ್ಯಪಾಲರ ನೇಮಕ
ನವದೆಹಲಿ, ಸೆ. 1: ಮಹತ್ವದ ಬೆಳವಣಿಗೆಯಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ತೆಲಂಗಾಣ, ಕೇರಳ, ಹಿಮಾಚಲ ಪ್ರದೇಶ, ಸೇರಿ ಐದು ರಾಜ್ಯಗಳಿಗೆ ಹೊಸ ರಾಜ್ಯಪಾಲರನ್ನು ನೇಮಕ ಮಾಡಿದ್ದಾರೆ. ತಮಿಳುನಾಡು ರಾಜ್ಯ ಬಿಜೆಪಿ ಮುಖ್ಯಸ್ಥೆ ತಮಿಳುಸಾಯಿ ಸೌಂದರರಾಜನ್ ಅವರನ್ನು ತೆಲಂಗಾಣ ರಾಜ್ಯಪಾಲರನ್ನಾಗಿ ನೇಮಕ ಮಾಡಲಾಗಿದ್ದು, ಮಾಜಿ ಕೇಂದ್ರ ಸಚಿವ ಬಂಡಾರು ದತ್ತಾತ್ರಯ ಅವರು ಹಿಮಾಚಲ ಪ್ರದೇಶದ ರಾಜ್ಯಪಾಲರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಹಿಮಾಚಲ ಪ್ರದೇಶದ ರಾಜ್ಯಪಾಲರಾದ ಕಲ್ರಾಜ್ ಮಿಶ್ರಾ ಅವರನ್ನುರಾಜಸ್ಥಾನದ ರಾಜ್ಯಪಾಲರನ್ನಾಗಿ ವರ್ಗಾವಣೆ ಮಾಡಲಾಗಿದೆ. ಮಹಾರಾಷ್ಟ್ರದ ರಾಜ್ಯಪಾಲರಾಗಿ ಭಗತ್ ಸಿಂಗ್ ಕೋಶ್ಯರಿ ಅವರನ್ನು ನೇಮಕ ಮಾಡಿ ಆದೇಶಿಸಲಾಗಿದ್ದು ಕೇರಳ ರಾಜ್ಯಪಾಲರಾಗಿ ಆರಿಫ್ ಮೊಹಮ್ಮದ್ ಖಾನ್ ಆಯ್ಕೆಯಾಗಿದ್ದಾರೆ.
ಅಮೇರಿಕಾದಲ್ಲಿ ಭಾರತೀಯ ನ್ಯಾಯಾಧೀಶೆ
ವಾಷಿಂಗ್ಟನ್, ಸೆ. 1: ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮತ್ತೊಬ್ಬ ಭಾರತೀಯ-ಅಮೇರಿಕನ್ ವಕೀಲ ಶಿರೀನ್ ಮ್ಯಾಥ್ಯೂಸ್ ಅವರನ್ನು ಫೆಡರಲ್ ನ್ಯಾಯಾಧೀಶರನ್ನಾಗಿ ನೇಮಿಸಿದ್ದಾರೆ. ಇದಕ್ಕೂ ಮೊದಲು, ಅವರು ಕ್ಯಾಲಿಫೋರ್ನಿಯಾದ ಸಹಾಯಕ ಫೆಡರಲ್ ಪ್ರಾಸಿಕ್ಯೂಟರ್ ಆಗಿ, ಕ್ರಿಮಿನಲ್ ಹೆಲ್ತ್‍ಕೇರ್ ವಂಚನೆ ಪ್ರಕರಣಗಳ ಸಂಯೋಜಕರಾಗಿ ಸೇವೆ ಸಲ್ಲಿಸುತ್ತಿದ್ದರು. ಸ್ಯಾನ್ ಡಿಯಾಗೋದ ದಕ್ಷಿಣ ಕ್ಯಾಲಿಫೋರ್ನಿಯಾ ಸದರ್ನ್ ಡಿಸ್ಟ್ರಿಕ್ಟ್ ಫೆಡರಲ್ ನ್ಯಾಯಾಲಯಕ್ಕೆ ಅವರ ನಾಮನಿರ್ದೇಶನವನ್ನು ಶ್ವೇತಭವನವು ಘೋಷಣೆ ಮಾಡಿದ್ದು, ಅವರ ನೇಮಕಾತಿಯನ್ನು ಇನ್ನಷ್ಟೆ ಸೆನೆಟ್ ಅನುಮೋದಿಸಬೇಕಾಗಿದೆ.
ಯಶಸ್ವಿನಿ ಸಿಂಗ್ ವಿಶ್ವ ಚಾಂಪಿಯನ್
ರಿಯೋ ಡಿಜನೈರೋ, ಸೆ. 1: ಬ್ರೆಜಿಲ್‍ನ ರಿಯೋ ಡಿಜನೈರೊದಲ್ಲಿ ನಡೆಯುತ್ತಿರುವ ಶೂಟಿಂಗ್ ವಿಶ್ವಕಪ್‍ನಲ್ಲಿ ಭಾರತದ ಶೂಟರ್ ಯಶಸ್ವಿನಿ ಸಿಂಗ್ ದೇಸ್ವಾಲ್ ರಾಷ್ಟ್ರಕ್ಕಾಗಿ ಒಂಭತ್ತನೇ ಒಲಿಂಪಿಕ್ ಕೋಟಾವನ್ನು ಪಡೆದರು ಮತ್ತು ಭಾನುವಾರ ಮುಂಜಾನೆ ನಡೆದ ಐಎಸ್‍ಎಸ್‍ಎಫ್ ವಿಶ್ವಕಪ್ ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಚಿನ್ನ ಗೆದ್ದು ವಿಶ್ವ ಚಾಂಪಿಯನ್ ಆದರು. 22 ವರ್ಷದ ಯಶಸ್ವಿನಿ ಫೈನಲ್ ಹಂತದಲ್ಲಿ ವಿಶ್ವ ನಂ. 1 ಶೂಟರ್ ಉಕ್ರೇನ್‍ನ ಒಲಿನಾ ಕೋಸ್ಟೆವಿಚ್ ಅವರನ್ನು ಹಿಂದಿಕ್ಕಿ ಒಟ್ಟಾರೆ 236.7 ಪಾಯಿಂಟ್‍ಗಳೊಂದಿಗೆ ಚಿನ್ನದ ಪದಕ ಗೆದ್ದರು. ಕೋಸ್ಟೆವಿಚ್ 234.8 ಗಳಿಸಿ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದಾರೆ. ಸರ್ಬಿಯಾದ ಜಾಸ್ಮಿನಾ 215.7 ಅಂಕಗಳೊಡನೆ ಕಂಚಿನ ಪದಕ ಗಳಿಸಿಕೊಂಡಿರು. ಯಶಸ್ವಿನಿ ತಂದೆ ಐಪಿಎಸ್ ಎಸ್.ಎಸ್. ದೇಸ್ವಾಲ್ ಮತ್ತು ತಾಯಿ ಸರೋಜ್ ದೇಸ್ವಾಲ್ ಪಂಚಕುಲ ಮುಖ್ಯ ಆದಾಯ ತೆರಿಗೆ ಆಯುಕ್ತರಾಗಿದ್ದಾರೆ, ಚಂಡೀಘರ್ ಡಿಎವಿ ಕಾಲೇಜಿನ ವಿದ್ಯಾರ್ಥಿಯಾಗಿರುವ ಯಶಸ್ವಿನಿ ಅರ್ಹತಾ ಸುತ್ತಿನಲ್ಲಿ 582 ಅಂಕಗಳನ್ನುಗಳಿಸಿ ಫೈನಲ್ ತಲಪಿದ್ದರು.