ಮಡಿಕೇರಿ, ಆ.30 : ಕೊಯಮತ್ತೂರಿನ ಇಶಾ ಫೌಂಡೇಶನ್ ಹಮ್ಮಿಕೊಂಡಿರುವ ‘ರ್ಯಾಲಿ ಫಾರ್ ರಿವರ್ಸ್’ ಮತ್ತು ಕಾವೇರಿ ಕಾಲಿಂಗ್ ಅಭಿಯಾನದ ಮೂಲ ಆಶಯಗಳ ಬಗ್ಗೆ ಕುಶಾಲನಗರದ ಮೊಳ್ಳೇರ ಮಾಚಯ್ಯ ಅವರು ಸಂಶಯ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಲಕಾವೇರಿಯಲ್ಲಿ ಹುಟ್ಟಿ ತಮಿಳುನಾಡಿನಲ್ಲಿ ಹರಿದು ಬಂಗಾಳಕೊಲ್ಲಿಯನ್ನು ಸೇರುವ ಕಾವೇರಿ ನದಿಯ ಇಕ್ಕೆಲಗಳ 1 ಕಿ.ಮೀ. ವ್ಯಾಪ್ತಿಯ ಜಮೀನನ್ನು ‘ಸೂಕ್ಷ್ಮ ಪರಿಸರ ಪ್ರದೇಶ’ ವೆಂದು ಘೋಷಣೆ ಮಾಡಿಸುವದೇ ಅಭಿಯಾನದ ಪ್ರಮುಖ ಉದ್ದೇಶ ಎಂದು ಆರೋಪಿಸಿದರು.

ರ್ಯಾಲಿ ಫಾರ್ ರಿವರ್ಸ್ ಅಭಿಯಾನಕ್ಕೆ ಸಂಬಂಧಿಸಿದಂತೆ ಇಶಾ ಫೌಂಡೇಶನ್‍ನ ಪ್ರಮುಖರಾದ ಜಗ್ಗಿ ವಾಸುದೇವ್ ಅವರು ಭಾರತದಾದ್ಯಂತ ಸುಮಾರು 9 ಸಾವಿರ ಕಿ.ಮೀ. ಪ್ರಯಾಣಿಸಿ, ಪ್ರಧಾನಿಗಳಿಗೆ 760 ಪುಟಗಳ ಯೋಜನೆಯ ಮೂಲ ಉದ್ದೇಶಗಳನ್ನು ಒಳಗೊಂಡ ವರದಿಯನ್ನು ಸಲ್ಲಿಸಿದ್ದಾರೆ. ಇದರಲ್ಲಿ ನದಿಗಳ ಇಕ್ಕೆಲಗಳ ಒಂದು ಕಿ.ಮೀ. ವ್ಯಾಪ್ತಿಯ ಜಮೀನನ್ನು ಸೂಕ್ಷ್ಮ ಪರಿಸರ ಪ್ರದೇಶವೆಂದು ಘೋಷಣೆ ಮಾಡುವ ವಿಷಯವೂ ಅಡಕಗೊಂಡಿದೆ. ಈ ಸೂಕ್ಷ್ಮ ವಿಚಾರ ಜಾರಿಯಾದಲ್ಲಿ ತಲಕಾವೇರಿಯಿಂದ ಪೂಂಪುಹಾರ್ ವರೆಗೆ ಕಾವೇರಿ ನದಿ ಹರಿಯುವ ಸುಮಾರು 800 ಕಿ.ಮೀ. ಹಾಗೂ ಕೊಡಗಿನಲ್ಲಿ ಕಾವೇರಿ ಹರಿಯುವ ಅಂದಾಜು 80 ರಿಂದ 100ಕಿ.ಮೀ. ವ್ಯಾಪ್ತಿಯ ನದಿಯ ಇಕ್ಕೆಲಗಳಲ್ಲಿನ ಕೃಷಿಕರು, ಜನಸಾಮಾನ್ಯರು ಸಂಕಷ್ಟಕ್ಕೆ ಸಿಲುಕಲಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಈ ಅಭಿಯಾನ ಕೇವಲ ಕಾವೇರಿಗೆ ಮಾತ್ರ ಸೀಮಿತವಾಗಿಲ್ಲ. ಬದಲಾಗಿ, ರಾಷ್ಟ್ರದ ಎಲ್ಲಾ ನದಿಗಳಿಗೆ ಸಂಬಂಧಿಸಿದಂತೆ ನಡೆಸಲಾಗುತ್ತಿದೆ ಎಂದು ತಿಳಿಸಿದ ಮಾಚಯ್ಯ ಅವರು, ಪರಿಸರ ಸಂರಕ್ಷಣೆ ಕಾಯ್ದೆಯಡಿ ಸೂಕ್ಷ್ಮ ಪರಿಸರ ಪ್ರದೇಶವನ್ನು ಸುಮಾರು 10. ಕಿ.ಮೀ. ವರೆಗೂ ವಿಸ್ತರಿಸಬಹುದೆಂಬ ಸಲಹೆಯನ್ನು ಕೇಂದ್ರ ಸರ್ಕಾರಕ್ಕೆ ನೀಡಿರುವ ಶಿಫಾರಸ್ಸಿನ ವರದಿಯಲ್ಲಿ ತಿಳಿಸಲಾಗಿದೆ. ಇದು ಕೊಡಗಿನ ರೈತರು ಮತ್ತು ಶ್ರೀಸಾಮಾನ್ಯರನ್ನು ಇಕ್ಕಟ್ಟಿಗೆ ಸಿಲುಕಿಸುವ ಸಾಧ್ಯತೆಗಳು ಇದೆ ಎಂದರು.

ಪ್ರಧಾನಮಂತ್ರಿಗಳಿಗೆ ಇಶಾ ಫೌಂಡೇಶನ್ ನೀಡಿರುವ ಬೃಹತ್ ವರದಿಯ ಬಗ್ಗೆ ಜನ ಸಾಮಾನ್ಯರು ಕೃಷಿಕರಿಗೆ ಅರಿವಿದೆಯೇ ಎಂದು ಪ್ರಶ್ನಿಸಿದ ಅವರು, ರ್ಯಾಲಿ ಫಾರ್ ರಿವರ್ಸ್ ಅಭಿಯಾನದಡಿ ಪ್ರಸ್ತುತ ಪ್ರಮುಖವಾಗಿ ನದಿ ಪುನಶ್ಚೇತನ, ರೈತರ ಆದಾಯ 3 ರಿಂದ 5 ಪಟ್ಟು ಹೆಚ್ಚಳ, ರೈತರ ಸಾಲ ಬಾಧೆ ನಿಯಂತ್ರಣ, ಅರಣ್ಯ ವ್ಯಾಪ್ತಿ ವೃದ್ಧಿಯ ವಿಚಾರಗಳನ್ನು ಪ್ರಸ್ತಾಪಿಸಲಾಗಿದೆ. ಆದರೆ ಇಶಾ ಫೌಂಡೇಶನ್‍ನ 760 ಪುಟಗಳ ವರದಿಯಲ್ಲಿರುವ ಮೂಲ ಉದ್ದೇಶಗಳ ಅರಿವು ಬೆಂಬಲ ವ್ಯಕ್ತಪಡಿಸಿದ ಯಾರಿಗೂ ಇಲ್ಲ ಎಂದು ಮಾಚಯ್ಯ ತಿಳಿಸಿದರು.

ಅಭಿಯಾನದಡಿ ಕಾವೇರಿ ಜಲಾನಯನ ಪ್ರದೇಶದಲ್ಲಿ 242 ಕೋಟಿ ಗಿಡಗಳನ್ನು ಬೆಳೆಸುವ ಉದ್ದೇಶವನ್ನು ಅಭಿಯಾನ ಹೊಂದಿದೆ. ಈ ಯೋಜನೆಯಡಿ ಪ್ರತಿ ಸಸಿಗೆ 42 ರೂ.ಗಳಂತೆ ಉದ್ದೇಶಿತ ಸಸಿ ನೆಡಲು ಸುಮಾರು 10 ಸಾವಿರ ಕೊಟಿ ಹಣವನ್ನು ಸಾರ್ವಜನಿಕರಿಂದ ಸಂಗ್ರಹಿಸುವ ಕಾರ್ಯ ಆರಂಭವಾಗಿದೆ. ಆದರೆ, ನದಿ ಪಾತ್ರದಲ್ಲಿರುವ ಕೃಷಿಕರು ತಮ್ಮ ಈ ಯೋಜನೆಗೆ ಸಂಪೂರ್ಣ ಸಹಕಾರ ನೀಡುವ ಸಾಧ್ಯತೆಗಳು ಎಷ್ಟು ಮತ್ತು ಎಲ್ಲರೂ ಸಹಕರಿಸದಿದ್ದಲ್ಲಿ ಸಂಗ್ರಹಿಸಿದ ಹಣದ ಬಳಕೆಯ ಕುರಿತಾದ ಯಾವದೇ ಮಾಹಿತಿಗಳು ಇಲ್ಲ ಎಂದು ವಿಶ್ಲೇಷಿಸಿದರು.

ಕಾವೇರಿ ನದಿಯ ಇಕ್ಕೆಲಗಳ ಒಂದು ಕಿ.ಮೀ ವ್ಯಾಪ್ತಿಯ ಜಮೀನನ್ನು ಸೂಕ್ಷ್ಮ ಪರಿಸರ ಪ್ರದೇಶ ಎಂದು ಘೋಷಿಸಿದಲ್ಲಿ ಕೊಡಗು ಜಿಲ್ಲೆಯೊಂದರಲ್ಲೇ ಸುಮಾರು 50 ಸಾವಿರ ಎಕರೆ ಕೃಷಿ ಭೂಮಿ ಅದರ ವ್ಯಾಪ್ತಿಗೆ ಒಳಪಡಲಿದೆ. ಅಲ್ಲದೆ ಈ ಭೂಮಿ ತನ್ನ ಮೌಲ್ಯವನ್ನು ಕಳೆದುಕೊಳ್ಳಲಿದ್ದು, ಈ ಭೂಮಿಯ ಮಾಲೀಕರಿಗೆ ಪರ್ಯಾಯವಾಗಿ ಯಾವ ಆದಾಯದ ಮೂಲಗಳನ್ನು ಒದಗಿಸಲಾಗುತ್ತದೆ ಎಂದೂ ಅವರು ಪ್ರಶ್ನಿಸಿದರು.

ವಕೀಲ ಅಯ್ಯಪ್ಪ ಕೆ.ಜಿ. ಮಾತನಾಡಿ, ನದಿ ಪಾತ್ರದ ಇಕ್ಕೆಲಗಳಲ್ಲಿ ಸೂಕ್ಷ್ಮ ಪರಿಸರ ಪ್ರದೇಶವೆಂದು ಘೋಷಿಸಿದರೂ ಕೃಷಿ ಚಟುವಟಿಕೆÀ ಗಳಿಗೆ, ತೋಟಗಾರಿಕೆಗೆ ಅವಕಾಶವಿದೆ ಎಂದು ಹೇಳಲಾಗಿದೆಯಾದರೂ ಅದರಲ್ಲಿ ಕಾಫಿ, ಭತ್ತ, ಕಬ್ಬಿನ ಕೃಷಿಗಳ ಬಗ್ಗೆ ಉಲ್ಲೇಖವಿಲ್ಲ ಎಂದು ಹೇಳಿದರು.