ಒಡೆಯನಪುರ, ಆ. 30: ವಿದ್ಯಾರ್ಥಿಗಳಲ್ಲಿ ರಾಷ್ಟ್ರ ಜಾಗೃತಿ, ದೇಶಭಕ್ತಿ, ಪರೋಪಕಾರ ಮುಂತಾದ ಸಾಮಾಜಿಕ ಕಳಕಳಿಯ ಮನೋಭಾವನೆಗಳನ್ನು ಅಳವಡಿಸಿಕೊಳ್ಳಲು ರಾಷ್ಟ್ರೀಯ ಸೇವಾ ಯೋಜನೆ ಪೂರಕ ವೇದಿಕೆಯಾಗುತ್ತದೆ ಎಂದು ಸಮೀಪದ ಶನಿವಾರಸಂತೆ ಪ.ಪೂ. ಕಾಲೇಜಿನ ಉಪ ಪ್ರಾಂಶುಪಾಲ ಪಿ.ಎನ್. ನರಸಿಂಹಮೂರ್ತಿ ಅಭಿಪ್ರಾಯಪಟ್ಟರು.

ಸ್ಥಳೀಯ ಭಾರತಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಉದ್ಘಾಟನೆ ಮತ್ತು ರಾಷ್ಟ್ರೀಯ ಸದ್ಭಾವನಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳು ರಾಷ್ಟ್ರದ ಸಂಪತ್ತು ಹಾಗೂ ನವ ಸಮಾಜದ ನಿರ್ಮಾಣ ವಿದ್ಯಾರ್ಥಿ ಸಮೂಹದಿಂದ ಮಾತ್ರ ಸಾಧ್ಯವಾಗುತ್ತದೆ ಈ ಹಿನ್ನೆಲೆ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಪಾಲ್ಗೊಳ್ಳುವಿಕೆ ಪ್ರೇರಣಾಶಕ್ತಿಯಾಗಿದೆ ಎಂದರು. ಘಟಕದ ಯೋಜನಾಧಿಕಾರಿ ಎಂ.ಎನ್. ಹರೀಶ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಸದ್ಭಾವನೆಯ ಮನೋಭಾವನೆ ಬೆಳೆಸಿಕೊಳ್ಳಲು ರಾಷ್ಟ್ರೀಯ ಸೇವಾ ಯೋಜನೆಯ ಪಾಲ್ಗೊಳ್ಳುವಿಕೆ ಸಹಕಾರಿಯಾಗಿದೆ ಎಂದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ವಿದ್ಯಾಸಂಸ್ಥೆ ಪ್ರಭಾರ ಪ್ರಾಂಶುಪಾಲ ಕುಮಾರಸ್ವಾಮಿ, ಗಾಂಧೀಜಿ ಅವರ ಗ್ರಾಮೋದ್ಧಾರ ಪರಿಕಲ್ಪನೆಯಡಿಯಲ್ಲಿ 1969ರಲ್ಲಿ ಪದವಿ ಕಾಲೇಜು ಮಟ್ಟದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯನ್ನು ಸ್ಥಾಪಿಸಲಾಗಿದೆ ವಿದ್ಯಾರ್ಥಿಗಳು ಘಟಕದಲ್ಲಿ ಪಾಲ್ಗೊಳ್ಳುವದ್ದರಿಂದ ಸ್ವಚ್ಛ ಸಮಾಜ ನಿರ್ಮಾಣವಾಗುತ್ತದೆ ಎಂದರು. ಸ್ವಚ್ಛ ಭಾರತ ಯಶಸ್ವಿಯಾಗಬೇಕಾದರೆ ಮೊದಲು ಪ್ರತಿಯೊಬ್ಬ ವಿದ್ಯಾವಂತರು ಹಾಗೂ ನಾಗರಿಕರ ಮನಸು ಸ್ವಚ್ಛವಾಗಬೇಕಾಗಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ರಾಷ್ಟ್ರೀಯ ಸೇವಾ ಯೋಜನೆಯ ಘಟಕದಲ್ಲಿ ತೊಡಗಿಸಿಕೊಂಡರೆ ಮನಸು ಸ್ವಚ್ಛಗೊಳ್ಳುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕ ಚಂದ್ರಕಾಂತ್ ಮುಂತಾದವರು ಹಾಜರಿದ್ದರು.