ಕೂಡಿಗೆ, ಆ. 31: ಜಿಲ್ಲೆಯ ಪ್ರಮುಖ ಅಣೆಕಟ್ಟೆ ಹಾರಂಗಿ ಜಲಾಶಯ ಭರ್ತಿಯಾದ ಹಿನ್ನೆಲೆಯಲ್ಲಿ ಇಂದು ಸಚಿವ ಸುರೇಶ್‍ಕುಮಾರ್ ಮತ್ತು ಅವರ ಪತ್ನಿ ಸಾವಿತ್ರಿ ಅವರು ಭೇಟಿ ನೀಡಿ ಸಂಪ್ರದಾಯದಂತೆ ಅಣೆಕಟ್ಟೆಯ ಮುಂಭಾಗದಲ್ಲಿರುವ ಕಾವೇರಿ ಪ್ರತಿಮೆಗೆ ಪೂಜೆ ಸಲ್ಲಿಸಿ, ಹಾರಂಗಿ ನದಿಗೆ ಬಾಗಿನ ಅರ್ಪಿಸಿದರು.

ನಂತರ ಸುದ್ಧಿಗಾರರೊಂದಿಗೆ ಮಾತನಾಡಿದ ಸಚಿವ ಸುರೇಶ್‍ಕುಮಾರ್ ಅವರು, ಕಾವೇರಿ ತಾಯಿಯ ಋಣ ತೀರಿಸುವ ಸುಸಂದರ್ಭ ಒದಗಿಬಂದಿದೆ. ನಾಡು ಸಮೃದ್ಧಿಯಿಂದಿರಲು ಕಾಲ ಕಾಲಕ್ಕೆ ಉತ್ತಮ ಮಳೆಯಾಗಿ ಜಲಾಶಯಗಳು ಭರ್ತಿಯಾಗಬೇಕು. ಜಲಾಶಯಗಳು ಭರ್ತಿಯಾದಲ್ಲಿ ನಾಡಿನ ಜನತೆಗೆ ಸಮರ್ಪಕವಾಗಿ ನೀರು ಸಿಗುತ್ತದೆ. ತಮಿಳುನಾಡಿಗೆ ನೀರು ಹರಿಸುವ ಕೆಲಸವೂ ಆಗುತ್ತದೆ. ಉತ್ತಮವಾಗಿ ಬೆಳೆ ಬೆಳೆದು ರೈತರು ಸಮೃದ್ಧಿಯಾಗಿರಲು ತಾಯಿಯ ಕರುಣೆ ಬೇಕಾಗಿದೆ. ಆದರೆ, ಇತ್ತೀಚಿನ ಕೆಲವು ವರ್ಷಗಳಿಂದ ಅತಿವೃಷ್ಟಿಯಿಂದ ಜನ ಸಂಕಷ್ಟ ಪಡುವಂತಹ ಸ್ಥಿತಿ ಎದುರಾಗಿದೆ. ಇನ್ನು ಮುಂದೆ ಈ ರೀತಿ ಆಗದಂತೆ ಆ ಕಾವೇರಿ ಮಾತೆಯಲ್ಲಿ ಪ್ರಾರ್ಥಿಸಿದ್ದೇನೆ ಎಂದರು.

ಜಿಲ್ಲೆಯಲ್ಲಿ ಆದ ಅತಿವೃಷ್ಟಿ ಮತ್ತು ಅನಾವೃಷ್ಟಿಗಳಿಂದ ಸಂಕಷ್ಟಕೊಳಗಾಗಿ ರುವವರಿಗೆ ಸರ್ಕಾರ ಮತ್ತು ಜಿಲ್ಲಾಡಳಿತ ಕೈಗೊಂಡಿರುವ ಎಲ್ಲಾ ಯೋಜನೆಗಳನ್ನು ಪೂರ್ಣ ಪ್ರಮಾಣದಲ್ಲಿ ಕಾರ್ಯಗತಗೊಳಿಸಲಾಗಿದೆ. ಜಿಲ್ಲೆಗೆ ಆಗಮಿಸಿದ ಮುಖ್ಯಮಂತ್ರಿಯವರು 100 ಕೋಟಿ ರೂ. ವಿಶೇಷ

(ಮೊದಲ ಪುಟದಿಂದ) ಅನುದಾನವು ಘೋಷಿಸಿದ್ದು, ಜಿಲ್ಲೆಯ ಅಭಿವೃದ್ಧಿಗೆ ಅಧಿಕಾರಿಗಳು ಕಾರ್ಯೋನ್ಮುಖರಾಗಲು ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಮಾಡಲಾಗಿದ್ದು, ಹಂತ ಹಂತವಾಗಿ ಇದು ಕಾರ್ಯಗತಗೊಳ್ಳಲಿದೆ. ನದಿತಟದಲ್ಲಿರುವ ಮನೆಗಳ ಸ್ಥಳಾಂತರ ಮತ್ತು ವಿಶೇಷ ಅಧ್ಯಯನದ ಮೂಲಕ ಶಾಶ್ವತ ಪರಿಹಾರವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಜಿಲ್ಲಾಡಳಿತ ಈಗಾಗಲೇ ಕಾರ್ಯೋನ್ಮುಖವಾಗಿದೆ. ಮೊದಲ ಹಂತದಲ್ಲಿ 300 ಮನೆಗಳು ಮತ್ತು ಇನ್ನುಳಿದ ನಿರಾಶ್ರಿತರಿಗೆ ಮನೆಗಳನ್ನು ನಿರ್ಮಾಣ ಮಾಡಿಕೊಡುವ ಕಾರ್ಯವನ್ನು ಮಾಡಲಾಗುವದು ಎಂದರು.

ಈ ಸಂದರ್ಭ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಅವರು ಮಾತನಾಡಿ ಪ್ರತಿವರ್ಷದಂತೆ ಈ ಬಾರಿಯು ಜಲಾಶಯಕ್ಕೆ ಬಾಗಿನ ಅರ್ಪಿಸಲಾಗಿದೆ. ತಾಯಿ ಕಾವೇರಿಯ ಆಶೀರ್ವಾದದೊಂದಿಗೆ ಯಾವದೇ ರೀತಿಯಲ್ಲೂ ಜಿಲ್ಲೆಗೆ ತೊಂದರೆಯಾಗದಂತೆ ಬಾಗಿನವನ್ನು ಅರ್ಪಿಸಲಾಗಿದೆ. ಹಾರಂಗಿ ಜಲಾಶಯದ ಹೂಳೆತ್ತುವ ಕಾಮಗಾರಿಯನ್ನು ಡಿಸೆಂಬರ್ ಅಂತ್ಯದಿಂದ ಪ್ರಾರಂಭಿಸಲಾಗುವದು ಎಂದರು.

ಈ ಸಂದರ್ಭ ಅರಕಲಗೂಡು ಕ್ಷೇತ್ರದ ಶಾಸಕ ಎ.ಟಿ.ರಾಮಸ್ವಾಮಿ, ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ.ಮೇದಪ್ಪ, ತಾಲೂಕು ಪಂಚಾಯ್ತಿ ಉಪಾಧ್ಯಕ್ಷ ಅಭಿಮನ್ಯುಕುಮಾರ್, ಜಿಲ್ಲಾ ಪಂಚಾಯ್ತಿ ಸದಸ್ಯೆ ಮಂಜುಳಾ, ತಾ.ಪಂ. ಸದಸ್ಯರಾದ ತಂಗಮ್ಮ, ಗಣೇಶ್, ಕೂಡಿಗೆ ಗ್ರಾ.ಪಂ ಉಪಾಧ್ಯಕ್ಷ ಗಿರೀಶ್, ಗ್ರಾ.ಪಂ. ಸದಸ್ಯ ಬಾಸ್ಕರ್, ರಾಮಚಂದ್ರ, ದುರ್ಗಾಂಬೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಬಿ.ಭಾರತೀಶ್, ಪಕ್ಷದ ಪ್ರಮುಖರಾದ ರಾಬಿನ್‍ದೇವಯ್ಯ, ಚಂದ್ರುಮೂಡ್ಲಿಗೌಡ, ರವಿಕುಶಾಲಪ್ಪ, ಕೃಷ್ಣಪ್ಪ, ಜಿಲ್ಲಾಧಿಕಾರಿ ಅನೀಸ್ ಕಣ್ಮಣಿಜಾಯ್, ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮಿಪ್ರಿಯಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ , ಕಾವೇರಿ ನೀರಾವರಿ ಮಹಾಮಂಡಲದ ಅಧ್ಯಕ್ಷ ಚೌಡೇಗೌಡ, ನೀರಾವರಿ ಇಲಾಖೆಯ ಎಸ್‍ಇ ಮಂಜುನಾಥ್, ಸಹಾಯಕ ಅಭಿಯಂತರ ವಿನೋದ್‍ಕುಮಾರ್, ಕಾರ್ಯಪಾಲಕ ಅಭಿಯಂತರ ರಾಜೇಗೌಡ, ಸಹಾಯಕ ಕಾರ್ಯಪಾಲಕ ಅಭಿಯಂತರ ನಾಗರಾಜ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು, ಸ್ಥಳೀಯ ಗ್ರಾಮಸ್ಥರು ಇದ್ದರು.