ಕರಿಕೆ/ ಭಾಗಮಂಡಲ, ಆ. 30: ದಶಕದ ಹಿಂದೆ ಹಲವೆಡೆ ಕಳ್ಳತನ ಎಸಗುವದರೊಂದಿಗೆ; ಪೊಲೀಸ್ ಮೊಕದ್ದಮೆ ಎದುರಿಸುತ್ತಿರುವ ವ್ಯಕ್ತಿಯೋರ್ವ ಮತ್ತೆ ತನ್ನ ಚಾಳಿ ಮುಂದುವರೆಸಿರುವ ವೇಳೆ; ನಿನ್ನೆ ತಡರಾತ್ರಿ ಗುಂಡೇಟಿಗೆ ಬಲಿಯಾ ಗಿರುವ ಘಟನೆ ಸಂಭವಿಸಿದೆ. ಕರಿಕೆ ಗ್ರಾ.ಪಂ. ವ್ಯಾಪ್ತಿಯ ಚೆತ್ತುಕಾಯದ ಕುಂಡತ್ತಿಕಾನ ನಿವಾಸಿ ದೇವಂಗೋಡಿ ಸಿ. ಗಣೇಶ್ (39) ಗುಂಡೇಟಿನಿಂದ ಸಾವನ್ನಪ್ಪಿರುವ ಕಳ್ಳ ಎಂದು ಪೊಲೀಸರು ಖಚಿತಪಡಿಸಿದ್ದಾರೆ.
ದಶಕದ ಹಿಂದೆ ಹಲವಷ್ಟು ಅಪರಾಧಗಳನ್ನು ಎಸಗಿರುವ ಗಣೇಶ್, ನಿನ್ನೆ ತಡರಾತ್ರಿ 12.45ರ ಸುಮಾರಿಗೆ ತನ್ನ ಮನೆಯಿಂದ ನಾಲ್ಕಾರು ಕಿ.ಮೀ. ದೂರದಲ್ಲಿರುವ; ಕರಿಕೆ ನಿವಾಸಿ ಮಂದೋಡಿ ಹೊನ್ನಣ್ಣ (65) ಎಂಬವರ ಮನೆಯ ಬಳಿ ಗೋದಾಮುವಿನಲ್ಲಿ ದಾಸ್ತಾನು ಇರಿಸಿದ್ದ ಅಡಿಕೆ ಮೂಟೆ ಕಳ್ಳತನಕ್ಕೆ ಯತ್ನಿಸಿದ್ದಾನೆ.
ಈ ವೇಳೆ ಗೋದಾಮು ಬಾಗಿಲು ತೆರೆದ ಶಬ್ದ ಕೇಳಿ ನಿದ್ದೆಯಿಂದ ಎಚ್ಚರಗೊಂಡಿರುವ ಹೊನ್ನಣ್ಣ ಕೋವಿ ಸಹಿತ ಹೊರಗೆ ಬಂದು ನೋಡಲಾಗಿ; ಅಂಗಳದಲ್ಲಿ ಮುಸುಕುಧಾರಿ ವ್ಯಕ್ತಿಯೊಬ್ಬ ಅಡಿಕೆ ಮೂಟೆ ಯೊಂದನ್ನು ಹೊತ್ತುಕೊಂಡು ತೆರಳುತ್ತಿದ್ದದ್ದು ಕಂಡು ಬಂದಿದೆ ಈ ಸಂದರ್ಭ ಹೊನ್ನಣ್ಣ ಬೊಬ್ಬೆ ಹಾಕಿದರೆನ್ನಲಾಗಿದೆ. ಅಷ್ಟರಲ್ಲಿ ಆರೋಪಿ ಗಣೇಶ್ ತಾನು ಹೊತ್ತೊಯ್ಯುತ್ತಿದ್ದ ಅಡಿಕೆ ಮೂಟೆಯನ್ನು ಅಂಗಳದಲ್ಲಿ ಎಸೆದು; ತನ್ನ ಬಳಿ ಇರಿಸಿಕೊಂಡಿದ್ದನೆನ್ನಲಾದ ಕತ್ತಿಯಿಂದ ಹೊನ್ನಣ್ಣ ಅವರ ಕಡೆಗೆ ಧಾಳಿಗೆ ಯತ್ನಿಸಿರುವದಾಗಿ ತಿಳಿದು ಬಂದಿದೆ.
(ಮೊದಲ ಪುಟದಿಂದ) ಈ ಸಂದರ್ಭ ಗಾಬರಿಗೊಂಡಿರುವ ಹೊನ್ನಣ್ಣ ಆತ್ಮರಕ್ಷಣೆಗಾಗಿ ತಮ್ಮ ಬಳಿಯಿದ್ದ ಕೋವಿಯಿಂದ ಗಣೇಶನತ್ತ ಗುಂಡು ಹಾರಿಸಿದ್ದಾಗಿ ಹೇಳಲಾಗುತ್ತಿದೆ. ಪರಿಣಾಮ ಗಣೇಶ್‍ನ ಎಡತೊಡೆಯ ಭಾಗಕ್ಕೆ ಗುಂಡೇಟು ತಗುಲಿದೆ. ಈ ವೇಳೆ ತೀವ್ರ ರಕ್ತಸ್ರಾವಗೊಂಡು ನೆಲಕ್ಕೆ ಉರುಳಿದ ಆತ ಒದ್ದಾಟ ನಡೆಸಿದ್ದು; ಹೊನ್ನಣ್ಣ ಭಾಗಮಂಡಲ ಪೊಲೀಸ್ ಠಾಣೆಗೆ ದೂರವಾಣಿ ಮುಖಾಂತರ ವಿಷಯ ತಿಳಿಸಿದ್ದಾರೆ. ಆ ಮೇರೆಗೆ ಪೊಲೀಸರು ಘಟನೆ ಸ್ಥಳಕ್ಕೆ ತಲಪುವಷ್ಟರಲ್ಲಿ ಆತ ಕೊನೆಯುಸಿರು ಎಳೆದಿದ್ದಾಗಿದೆ.
ಈ ಸಂಬಂಧ ಭಾಗಮಂಡಲ ಪೊಲೀಸರು ಸ್ಥಳ ಮಹಜರು ನಡೆಸುವದರೊಂದಿಗೆ, ಹೊನ್ನಣ್ಣ ಬಳಸಿರುವ ಒಂಟಿ ನಳಿಕೆ ಕೋವಿ, ಗಣೇಶ್ ಮೇಲೆ ಗುಂಡು ಹಾರಿಸಲಾಗಿದ್ದ ಮದ್ದುಗುಂಡಿನ ಖಾಲಿ ತೋಟ ಸಹಿತ; ಮೃತನ ಬಳಿ ಇದ್ದಂತಹ ಕತ್ತಿಯನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೆ ಮೃತನ ಪತ್ನಿ ಹಾಗೂ ಮಕ್ಕಳನ್ನು ಕರೆಸಿ; ಹೊನ್ನಣ್ಣ ಅಂಗಳದಲ್ಲಿದ್ದ ಶವವು ಗಣೇಶನದ್ದು ಎಂದು ಖಾತರಿಪಡಿಸಿಕೊಂಡಿದ್ದಾರೆ. ಮೃತದೇಹವನ್ನು ಮಡಿಕೇರಿಗೆ ಸಾಗಿಸಿ; ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಬಳಿಕ ಸಂಬಂಧಿಕರಿಗೆ ಹಸ್ತಾಂತರಿಸಿದ್ದಾರೆ.
ಪ್ರಕರಣ ದಾಖಲು : ಅಡಿಕೆ ಕಳ್ಳತನಕ್ಕೆ ಯತ್ನಿಸಿದ್ದ ಗಣೇಶ್ ಮೇಲೆ, ಆತ್ಮರಕ್ಷಣೆಗಾಗಿ ಯಾವದೇ ಉದ್ದೇಶವಿಲ್ಲದಿದ್ದರೂ ಗುಂಡು ಹಾರಿಸಿದಾಗ; ಕಳ್ಳನು ಸಾವನ್ನಪ್ಪಿರುವ ಕಾರಣ ಪೊಲೀಸ್ ಕಾಯ್ದೆ 304 ಹಾಗೂ ಶಸ್ತ್ರಾಸ್ತ್ರ ಕಾಯ್ದೆ 25 ಹಾಗೂ 3ರ ಅಡಿಯಲ್ಲಿ ಹೊನ್ನಣ್ಣ ವಿರುದ್ಧ ಮೊಕದ್ದಮೆ ದಾಖಲಾಗಿದೆ.
ಮೃತ ಗಣೇಶ್ ಕಳೆದ ಹಲವಾರು ವರ್ಷಗಳಿಂದ ಗ್ರಾಮ ಸೇರಿದಂತೆ ಜಿಲ್ಲೆಯ ಹಾಗೂ ಹೊರಜಿಲ್ಲೆಗಳ ಠಾಣೆಯಲ್ಲಿ ಹಲವು ಕಳವು ಪ್ರಕರಣ ಎದುರಿಸುತ್ತಿದ್ದು ಭಾಗಮಂಡಲ- ಪೊಲೀಸ್ ಠಾಣೆಯಲ್ಲಿ ನಾಲ್ಕು, ಪ್ರಕರಣ ಸುಳ್ಯ ಠಾಣೆಯಲ್ಲಿ ಎರಡು ಸೇರಿದಂತೆ ಕೇರಳರಾಜ್ಯದಲ್ಲಿ ಕೂಡ ಪ್ರಕರಣ ದಾಖಲಾಗಿರುವದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ. ಮಾಲೀಕ ಹೊನ್ನಣ್ಣ ಅವರ ಮನೆಯಲ್ಲಿ ಸುಮಾರು ಹತ್ತು ಚೀಲಗಳಷ್ಟು ಅಡಿಕೆ ನಾಪತ್ತೆಯಾಗಿ ರುವ ಬಗ್ಗೆ ತಿಳಿದು ಬಂದಿದೆ. ಈ ವಯಸ್ಕ ದಂಪತಿ ಮಾತ್ರ ಮನೆಯಲ್ಲಿ ವಾಸವಿದ್ದು; ಇವರ ಪುತ್ರ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಈ ಬಗ್ಗೆ ಖಚಿತವಾದ ಮಾಹಿತಿ ತಿಳಿದು ಈ ಕ್ರತ್ಯಕ್ಕೆ ಯತ್ನಿಸಿರುವದಾಗಿ ತಿಳಿದು ಬಂದಿದೆ.
ಸ್ಥಳಕ್ಕೆ ಭೇಟಿ ನೀಡಿದ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ. ಪರಿಶೀಲನೆ ನಡೆಸಿ; ಮೇಲ್ನೋಟಕ್ಕೆ ಕಳ್ಳತನ ಸಂದರ್ಭದಲ್ಲಿ ಘಟನೆ ನಡೆದಿರುವದಾಗಿ ಗೋಚರಿಸುತ್ತಿದ್ದು ಮೃತರ ಬಗ್ಗೆ ಭಾಗಮಂಡಲ ಪೊಲೀಸ್ ಠಾಣೆಯಲ್ಲಿ ಅಪರಾಧ ಕೃತ್ಯ ಪಟ್ಟಿಯಲ್ಲಿ (ಎಂ. ಓ.ಬಿ ಲಿಸ್ಟ್) ನೋಂದಣಿಯಾಗಿದ್ದು; ಸುಳ್ಯ ಠಾಣೆಯಲ್ಲಿ ಕೂಡ ಪ್ರಕರಣ ದಾಖಲಾಗಿದೆ ಎಂದು 'ಶಕ್ತಿ'ಗೆ ಮಾಹಿತಿ ನೀಡಿದ್ದಾರೆ.
- ಚಿತ್ರ ವರದಿ : ಹೊದ್ದೆಟ್ಟಿ ಸುಧೀರ್, ಸುನಿಲ್ ಕುಯ್ಯಮುಡಿ