ಗೋಣಿಕೊಪ್ಪ ವರದಿ, ಆ. 31: ಮಂಚಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಶಿಕ್ಷಣ ಇಲಾಖೆ ವತಿಯಿಂದ ಆಯೋಜಿಸಿದ್ದ ಶ್ರೀಮಂಗಲ ಹೋಬಳಿ ಮಟ್ಟದ ಪ್ರಾಥಮಿಕ ಶಾಲಾ ಕ್ರೀಡಾಕೂಟದಲ್ಲಿ ಕುಟ್ಟ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ತಂಡ ಹೆಚ್ಚು ಬಹುಮಾನ ಪಡೆದುಕೊಂಡಿತು.

ಬಾಲಕರ ವಿಭಾಗದಲ್ಲಿ ಹಾಕಿ, ಥ್ರೋಬಾಲ್, ಖೋ-ಖೋ, ಉದ್ದ ಜಿಗಿತ ಸ್ಪರ್ಧೆಯಲ್ಲಿ ಪ್ರಥಮ, 4*100 ಮಿ. ರಿಲೇಯಲ್ಲಿ ದ್ವಿತೀಯ, ಬಾಲಕಿಯರ ಖೋ-ಖೋ, 4*100 ಮೀ ರಿಲೇ, ಡಿಸ್ಕಸ್ ಥ್ರೋ ಸ್ಪರ್ಧೆಗಳಲ್ಲಿ ಪ್ರಥಮ, 200 ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿತು.

ಬಾಲಕರ ವಿಭಾಗದಲ್ಲಿ ಸುನಿಲ್ ಹಾಗೂ ಬಾಲಕಿಯರ ವಿಭಾಗದಲ್ಲಿ ಶೋಭಾ ಹೋಬಳಿ ಮಟ್ಟದ ವೈಯಕ್ತಿಕ ಚಾಂಪಿಯನ್‍ಶಿಪ್ ಪಡೆದುಕೊಂಡರು. ಸುನಿಲ್ ಡಿಸ್ಕಸ್, ಭಾರದ ಗುಂಡು ಎಸೆತ, ಲಾಂಗ್‍ಜಂಪ್, ಶೋಭಾ ಲಾಂಗ್‍ಜಂಪ್, ಹೈಜಂಪ್ ವಿಭಾಗದಲ್ಲಿ ಸಾಧನೆ ಮಾಡಿದರು.

ಬಹುಮಾನ ವಿತರಣೆ ಸಂದರ್ಭ ದಾನಿಗಳಾದ ತೀತೀರ ವೇಣು ಕರುಂಬಯ್ಯ, ವಿಠಲ್ ಸೋಮಯ್ಯ, ಜಿ.ಪಂ. ಮಾಜಿ ಅಧ್ಯಕ್ಷೆ ಶರೀನ್ ಸುಬ್ಬಯ್ಯ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಕಾರ್ಯದರ್ಶಿ ರಮಾನಂದ, ಮುಖ್ಯ ಶಿಕ್ಷಕ ಕೆ.ಎಂ. ಸೋಮಯ್ಯ ಉಪಸ್ಥಿತರಿದ್ದರು.