*ಗೋಣಿಕೊಪ್ಪಲು, ಆ. 31: ಬಣ್ಣ ಹಚ್ಚದ ಗಣಪತಿಯನ್ನು ಪೂಜಿಸುವ ಮೂಲಕ ಶುದ್ಧಜಲ ಮತ್ತು ಸ್ವಚ್ಛ ಪರಿಸರ ನಿರ್ಮಾಣಕ್ಕೆ ಕೊಡುಗೆ ನೀಡಬೇಕು ಎಂದು ಬಾಳೆಲೆ ವಿಜಯಲಕ್ಷ್ಮಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ವಿಜ್ಞಾನ ಶಿಕ್ಷಕ ಎಂ.ಪಿ. ರಾಘವೇಂದ್ರ ಹೇಳಿದರು. ವಿದ್ಯಾಸಂಸ್ಥೆಯ ಇಕೊ ಕ್ಲಬ್ ಹಾಗೂ ರಾಜ್ಯ ವಿಜ್ಞಾನ ಪರಿಷತ್ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಗೌರಿ ಗಣೇಶ ಹಬ್ಬದಂದು ಬಣ್ಣದ ಗಣಪತಿಯನ್ನು ಪ್ರತಿಷ್ಠಾಪಿಸುವ ಮೂಲಕ ಪರಿಸರಕ್ಕೆ ಆಗುತ್ತಿರುವ ಹಾನಿಯನ್ನು ತಡೆಗಟ್ಟಬೇಕು ಎಂದು ತಿಳಿಸಿದರು. ಪ್ರಾಂಶುಪಾಲ ಡಾ.ಜೆ. ಸೋಮಣ್ಣ ಮಾತನಾಡಿ, ಹಬ್ಬ ಹರಿದಿನಗಳನ್ನು ವರ್ಣರಂಜಿತವಾಗಿ ಆಚರಿಸುವ ಮೂಲಕ ಜಲಮೂಲ ಹಾಗೂ ಪರಿಸರವನ್ನು ಸಂಪೂರ್ಣವಾಗಿ ಹಾಳು ಮಾಡಲಾಗುತ್ತಿದೆ ಎಂದು ವಿಷಾದಿಸಿದರು. ಶಿಕ್ಷಕ ಡಿ.ಎನ್. ಸುಬ್ಬಯ್ಯ ಮಾತನಾಡಿ, ವಿದ್ಯಾರ್ಥಿಗಳು ಗಣಪತಿ ಹಬ್ಬವನ್ನು ಸರಳವಾಗಿ ಆಚರಿಸುವ ಮೂಲಕ ಇತರರಿಗೆ ಮಾದರಿಯಾಗಿರಬೇಕು ಎಂದರು. ಹಿರಿಯ ಶಿಕ್ಷಕಿ ಬೆನಡಿಕ್ಟ ಫರ್ನಾಂಡೀಸ್, ಜಯಣ್ಣ ಹಾಜರಿದ್ದರು.
- ಎನ್.ಎನ್.ದಿನೇಶ್