ಮಡಿಕೇರಿ, ಆ. 30: ಮಡಿಕೇರಿ ಆಕಾಶವಾಣಿಯು 1993ರ ಆಗಸ್ಟ್ 28 ರಂದು 103.1 ಮೆಗಾ ಹಟ್ರ್ಸ್ ತರಂಗಾಂತರದಿಂದ ಸ್ಥಾಪನೆಯಾಗಿ ಇದೀಗ 26ನೇ ವರ್ಷವನ್ನು ಪೂರೈಸುತ್ತಿದೆ.

ಕೊಡಗು ಜಿಲ್ಲೆಯ ಪ್ರತಿಭೆಗಳ ಪರಿಚಯ, ಕೃಷಿಯ ಚಿತ್ರಣ ಹಾಗೂ ಸಾಧನೆ, ಮಹಿಳೆಯರ-ಮಕ್ಕಳ ಕಾರ್ಯಕ್ರಮಗಳಲ್ಲದೇ ಜನರಿಗೆ ತಾಜಾ ಮಾಹಿತಿ ನೀಡುವ ಕೊಡವ ಭಾಷೆಯ ಸುದ್ದಿ ಸಮಾಚಾರ, ಅರೆಭಾಷೆಯ ಸುದ್ದಿಜೊಂಪೆ, ಬ್ಯಾರಿ ಭಾಷೆಯ ಸುದ್ದಿಸಾರ-ಇವುಗಳ ಪ್ರಸಾರ, ನಿಧನ ಸುದ್ದಿ, ಸರ್ಕಾರದ ಇಲಾಖೆಗಳ, ಸಂಘ-ಸಂಸ್ಥೆಗಳ ಅಭಿವೃದ್ಧಿ ಯೋಜನೆಗಳ ಪ್ರಚಾರವಲ್ಲದೇ, ಚಿಂತನ, ಚಿತ್ರಗೀತೆಗಳು, ನೇರ ರಸಪ್ರಶ್ನೆಗಳೊಂದಿಗೆ ಸಂವಾದ, ಪ್ರಚಲಿತ ವಿದ್ಯಮಾನಗಳ ಬಗ್ಗೆ ಚರ್ಚೆ, ಜಾನಪದ ಗೀತೆಗಳು, ಭಕ್ತಿಗೀತೆಗಳು, ಭಾವಗೀತೆಗಳು, ಹಿಂದಿ ಚಿತ್ರಗೀತೆಗಳು, ರಾಜ್ಯ ಮತ್ತು ರಾಷ್ಟ್ರಮಟ್ಟದ ವಾರ್ತೆಗಳು, ದಿನವೂ ಶುಭನುಡಿ ಹೀಗೆ ಉಪಯುಕ್ತ ವಿಚಾರಗಳೊಂದಿಗೆ ಆಕಾಶವಾಣಿಯು ಈ ಭಾಗದ ಜನಪ್ರಿಯ ಮಾಧ್ಯಮವಾಗಿದೆ.

6 ಕಿಲೋ ವಾಟ್ಸ್ ಸಾಮಥ್ರ್ಯದಿಂದ ಆರಂಭವಾದ ಮಡಿಕೇರಿ ಆಕಾಶವಾಣಿಯು ಈಗ ತನ್ನ ಪ್ರಸಾರದ ಸಾಮಥ್ರ್ಯವನ್ನು 10 ಕಿಲೋ ವಾಟ್ಸ್ ಹೆಚ್ಚಿಸಿಕೊಂಡು ಪ್ರಸಾರದ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ. ಈ ಸಂದರ್ಭ ರೇಡಿಯೋ ಜಾಹೀರಾತು ಪ್ರತಿನಿಧಿ ಶೌಕತ್ ಹಾಗೂ ರೇಡಿಯೋ ಶ್ರೋತೃ ಭಾಗೀರಥಿ ಹುಲಿತಾಳ ಅವರನ್ನು ಸನ್ಮಾನಿಸಲಾಯಿತು ಎಂದು ಆಕಾಶವಾಣಿ ಕೇಂದ್ರದ ಉಣ್ಣಿಕೃಷ್ಣನ್ ಹಾಗೂ ವಿಜಯ ಅಂಗಡಿ ತಿಳಿಸಿದ್ದಾರೆ.